Mysore
27
overcast clouds

Social Media

ಶನಿವಾರ, 11 ಜುಲೈ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ : ನಿದ್ದೆ ಇಲ್ಲದ ಇಂಗ್ಲೆಂಡಿನ ಮೊದಲ ದಿನಗಳು

ಜಹಜಿನಲ್ಲಿ ನನಗೆ ಸಮುದ್ರ ಪ್ರಯಾಣದ ಯಾವ ತೊಂದರೆಯೂ ಆಗಲಿಲ್ಲ. ದಿನಗಳು ಕಳೆದಂತೆಲ್ಲ ನನ್ನ ಮನಸ್ಸು ಸಂದಿಗ್ಧ ಪರಿಸ್ಥಿತಿಗೆ ಬೀಳತೊಡಗಿದ್ದಿತು. ಹಡಗಿನ ಉಗ್ರಾಣಾಧಿಕಾರಿಯೊಂದಿಗೆ ಮಾತನಾಡುವುದಕ್ಕೂ ನನಗೆ ನಾಚಿಕೆಯಾಗುತ್ತಿದ್ದಿತು.

ಇಂಗ್ಲಿಷಿನಲ್ಲಿ ಮಾತನಾಡು ವುದು ನನಗೆ ಅಭ್ಯಾಸ ವಿರಲಿಲ್ಲ. ಚಾಕು ಮತ್ತು ಮುಳ್ಳು ಚಮಚವನ್ನು ಉಪ ಯೋಗಿಸಿ ಊಟ ಮಾಡುವುದು ನನಗೆ ಬರುತ್ತಿರಲಿಲ್ಲ. ನನಗೆ ಆಹಾರದ ವಿಷಯವೂ ತಿಳಿದಿರಲಿಲ್ಲ. ಯಾವ ಆಹಾರದಲ್ಲಿ ಮಾಂಸವಿದೆ, ಇಲ್ಲ ಎಂಬುದನ್ನು ವಿಚಾರಿಸುವ ಧೈರ್ಯವೂ ಇರಲಿಲ್ಲ. ಈ ಕಾರಣದಿಂದ ನಾನು ಭೋಜನದ ಮೇಜಿನ ಬಳಿಗೆ ಹೋಗಲೇ ಇಲ್ಲ. ಕ್ಯಾಬಿನ್‌ನಲ್ಲಿಯೇ ಊಟ ಮಾಡುತ್ತಿದ್ದೆ. ನಾನು ದಿನವೆಲ್ಲ ಕ್ಯಾಬಿನ್‌ನಲ್ಲಿಯೇ ಅವಿತುಕೊಂಡಿರುತ್ತಿದ್ದೆ. ಹಡಗಿನ ಮೇಲ್ಭಾಗದಲ್ಲಿ ಜನಸಂದಣಿ ಕಡಿಮೆಯಾದ ಸಮಯ ನೋಡಿ ಅಲ್ಲಿ ಹೋಗಿ ಕುಳಿತಿರುತ್ತಿದ್ದೆ. ಮಜುಂದಾರರು ‘ಎಲ್ಲರೊಂದಿಗೂ ಸೇರು’ ಎಂದು ನನಗೆ ಹೇಳುತ್ತಿದ್ದರು. ವಕೀಲನಿಗೆ ಬಾಯಿ ಜೋರಾ ಗಿರಬೇಕೆಂದೂ ಹೇಳುತ್ತಿ ದ್ದರು. ತಮ್ಮ ವಕೀಲಿಯ ಅನುಭವಗಳನ್ನೆಲ್ಲ ಹೇಳುತ್ತಿದ್ದರು. ‘ಇಂಗ್ಲಿಷ್‌ನಮ್ಮ ಮಾತೃ ಭಾಷೆಯಲ್ಲ. ಆದ್ದರಿಂದ ಮಾತನಾಡು ವಾಗ ತಪ್ಪು ಆಗುವುದು ಸ್ವಾಭಾವಿಕ. ಆದರೂ ಮಾತನಾಡಲು ಎಲ್ಲ ಅವಕಾಶವನ್ನೂ ಉಪಯೋಗಿಸಿಕೊಳ್ಳ ಬೇಕು’ ಎಂದೆಲ್ಲ ಹೇಳುತ್ತಿದ್ದರು. ಆದರೆ ಯಾವುದರಿಂದಲೂ ನನ್ನ ಸಂಕೋಚ ಮರೆಯಾಗಲಿಲ್ಲ. ನನ್ನಲ್ಲಿ ಕನಿಕರದಿಂದ ಒಬ್ಬ ಒಳ್ಳೆಯ ಆಂಗ್ಲೆಯ ಗೃಹಸ್ಥರು ನನ್ನೊಂದಿಗೆ ಮಾತನಾ ಡಲು ಪ್ರಾರಂಭಿಸಿದರು. ಅವರು ನನಗಿಂತಲೂ ದೊಡ್ಡವ ರಾಗಿದ್ದರು. ನಾನು ಏನು ತಿನ್ನುತ್ತೇನೆ, ನನ್ನ ವಿಷಯವೇನು ಹೋಗುವುದೆಲ್ಲಿಗೆ, ಏಕೆ ಯಾರೊಂದಿಗೆ ಮಾತಾಡುವು ದಿಲ್ಲ ಎಂದೆಲ್ಲ ಕೇಳಿದರು. ನಾನು ಊಟಕ್ಕೆ ಮೇಜಿನ ಹತ್ತಿರಕ್ಕೆ ಹೋಗುವಂತೆ ಪ್ರೇರೇಪಿಸಿದರು. ಮಾಂಸ ತಿನ್ನುವುದಿಲ್ಲವೆಂಬ ನನ್ನ ನಿರ್ಧಾರದ ನುಡಿಯನ್ನು ಕೇಳಿ ಅವರು ಒಂದು ದಿನ ನಕ್ಕು, ದಯಾಪರರಾಗಿ ಹೇಳಿದರು: ‘ಇಲ್ಲಿಯವರೆಗೆ (ಪೋ ಸೇಡ್ ಮುಟ್ಟುವವರೆಗೆ) ಎಲ್ಲ ಸರಿ ಹೋಗುತ್ತೆ. ಆದರೆ ಬಿಸ್ಕೆ ಕೊಲ್ಲಿಯನ್ನು ಮುಟ್ಟಿದ ನಂತರ, ನಿನ್ನ ನಿರ್ಧಾರವನ್ನು ಬದಲಾಯಿಸ ಬೇಕಾಗು ತ್ತದೆ. ಇಂಗ್ಲೆಂಡಿನಲ್ಲಿ ಎಷ್ಟು ಚಳಿಯೆಂದರೆ ಮಾಂಸವಿಲ್ಲದೆ ಜೀವಿಸುವುದು ಕಷ್ಟ’. ಅದಕ್ಕೆ ನಾನು ಹೀಗೆ ಹೇಳಿದೆ, ‘ಅಲ್ಲಿ ಮಾಂಸಾಹಾರವಿಲ್ಲದೆ ಜನ ಬದುಕಬಲ್ಲರೆಂದು ಕೇಳಿದ್ದೇನೆ’.

‘ಅದು ಸುಳ್ಳು. ನನಗೆ ಪರಿಚಯವಿರುವವರಲ್ಲಿ ಮಾಂಸವನ್ನು ತಿನ್ನದವರು ಯಾರೂ ಇಲ್ಲ. ಮದ್ಯಪಾನ ಮಾಡು ಎಂದು ನಾನು ಹೇಳುವುದಿಲ್ಲ. ಆದರೆ ನೀನು ಅವಶ್ಯವಾಗಿ ಮಾಂಸವನ್ನು ತಿನ್ನಲೇಬೇಕೆಂದು ನನ್ನ ಅಭಿಪ್ರಾಯ’ ಎಂದು ಹೇಳಿದರು.

ನಾನು ಹೇಳಿದೆನು, ‘ನಿಮ್ಮ ಸಲಹೆಗಾಗಿ ನಿಮಗೆ ವಂದನೆ. ಆದರೆ ನಾನು ಮಾಂಸ ತಿನ್ನುವುದಿಲ್ಲವೆಂದು ನಮ್ಮ ತಾಯಿಗೆ ವಚನ ಕೊಟ್ಟಿದ್ದೇನೆ. ಮಾಂಸವಿಲ್ಲದೆ ಇರುವುದು ಸಾಧ್ಯವಾಗದಿದ್ದರೆ ನಾನು ಹಿಂದೂಸ್ಥಾನಕ್ಕೆ ಹಿಂದಿರುಗುತ್ತೇನೆ. ಆದರೆ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲ.

ಬಿಟ್ಟೇ ಕೊಲ್ಲಿಗೆ ಬಂದೆವು. ಅಲ್ಲಿಯೂ ನನಗೆ ಮಾಂಸದ ಅವಶ್ಯಕತೆಯಾಗಲಿ, ಮದ್ಯದ ಅವಶ್ಯಕತೆ ಯಾಗಲಿ ಕಾಣಲಿಲ್ಲ. ನಮ್ಮ ಮನೆಯವರು ನಾನು ಮಾಂಸಾಹಾರ ತಿನ್ನುವುದಿಲ್ಲವೆಂಬುದಕ್ಕೆ ಸಾಕ್ಷಿ ಪತ್ರಗಳನ್ನು ಸಂಗ್ರಹಿಸಿ ಕೊಂಡು ಬರಬೇಕೆಂದು ಹೇಳಿದ್ದರು. ಆದುದರಿಂದ ನಾನು ಈ ಆಂಗ್ಲೆಯ ಮಿತ್ರರಿಂದ ಸಾಕ್ಷಿ ಪತ್ರವನ್ನು ಕೇಳಿದೆನು. ಅವರು ಸಂತೋಷದಿಂದ ಅದನ್ನು ಬರೆದು ಕೊಟ್ಟರು. ಬಹಳ ಕಾಲದವರೆಗೆ ಅದನ್ನು ಜೋಪಾನವಾಗಿ ರಕ್ಷಿಸಿ ಇಟ್ಟಿದ್ದೆ. ಆಮೇಲೆ ನನಗೆ ತಿಳಿಯಿತು, ಮಾಂಸ ತಿಂದರೂ ಇಂತಹ ಪ್ರಮಾಣಪತ್ರಗಳನ್ನು ಸಂಗ್ರಹಿಸಬಹು ದೆಂದು. ಅದರ ಮೋಹವು ನಾಶವಾಯಿತು. ನನ್ನ ಮಾತನ್ನು ನಂಬದೇ ಹೋದರೆ ಆ ಪ್ರಮಾಣಪತ್ರದಿಂದ ತಾನೇ ಪ್ರಯೋಜನವೇನು?

ನಾನು ಯಾವಾಗಲೂ ನನ್ನ ಮನೆ ಮತ್ತು ದೇಶವನ್ನೇ ಕುರಿತು ಯೋಚಿಸುತ್ತಿದ್ದೆ. ತಾಯಿಯ ಪ್ರೇಮ ನನ್ನ ಕಣ್ಣಿಗೆ ಕಟ್ಟಿದಂತೆ ಇರುತ್ತಿತ್ತು. ರಾತ್ರಿಯಾದ ಕೂಡಲೇ ಅಶ್ರು ಸುರಿಯುತ್ತಿತ್ತು. ಮನೆಯ ವಿಧವಿಧದ ಆಲೋಚನೆಗಳು ಬರುತ್ತಿದ್ದವು. ಆ ಬಿರುಗಾಳಿಯಲ್ಲಿ ನಿದ್ರೆ ಹೇಗೆ ತಾನೆ ಬರುತ್ತಿದ್ದಿತು? ಆ ದುಃಖದ ಮಾತುಗಳನ್ನು ಯಾರೊಂ ದಿಗೂ ಹೇಳಿಕೊಳ್ಳುವಂತೆ ಇರಲಿಲ್ಲ. ಹೇಳಿ ತಾನೆ ಏನು ಪ್ರಯೋಜನ? ನನಗೆ ಬೇಕಾಗಿದ್ದುದು ಏನು ಎಂಬುದು ನನಗೇ ಗೊತ್ತಿರಲಿಲ್ಲ. ಜನರು, ಅವರ ಮಾರ್ಗ, ಅವರ ಮನೆಗಳು ಎಲ್ಲವೂ ನನಗೆ ವಿಚಿತ್ರವಾಗಿ ತೋರು ತ್ತಿದ್ದವು. ಆಂಗ್ಲರ ನಡುವೆ ಹೇಗೆ ನಡೆದು ಕೊಳ್ಳಬೇಕೆಂಬುದರಲ್ಲಿ ನಾನು ತೀರ ಹೊಸಬನಾಗಿದ್ದೆ. ಆದುದ ರಿಂದ ನಾನು ಯಾವಾಗಲೂ ಎಚ್ಚರಿಕೆಯಿಂದಲೇ ಇರ ಬೇಕಾಗಿದ್ದಿತು. ನನ್ನ, ಆಹಾರ ಪಾನೀಯಗಳ ನಿಯಮ ಬೇರೆ. ನಾನು ತಿನ್ನ ಬಹುದಾಗಿದ್ದ ಪದಾರ್ಥಗಳೂ ನೀರಸವಾಗಿ ರುಚಿರಹಿತವಾಗಿದ್ದವು. ಈ ಕಾರಣದಿಂದ ನನ್ನ ಪಾಡು ಎರಡು ಕಡೆಯೂ ಹೊತ್ತಿ ಉರಿಯುವ ಕೊಳ್ಳಿಯಂತೆ ಆಗಿತ್ತು. ಇಂಗ್ಲೆಂಡಿ ನಲ್ಲಿರುವುದು ನನಗೆ ಹಿತವಾಗಿ ಕಾಣಲಿಲ್ಲ. ಸ್ವದೇಶಕ್ಕೆ ಹಿಂದಿರುಗುವುದೂ ಸಾಧ್ಯವಿರಲಿಲ್ಲ. ವಿಲಾಯತಿಗೆ ಬಂದುಬಿಟ್ಟಿದ್ದರಿಂದ ಮೂರು ವರ್ಷಗಳನ್ನೂ ಹೇಗಾದರೂ ಕಳೆಯಲೇ ಬೇಕೆಂದು ಅಂತರ್ವಾಣಿ ಹೇಳಿತು.

Tags:
error: Content is protected !!