Mysore
26
scattered clouds

Social Media

ಬುಧವಾರ, 25 ನವೆಂಬರ್ 2026
Light
Dark

ದಸರಾಗೆ ಅದ್ಭುತ ಬ್ರ್ಯಾಂಡಿಂಗ್ ಅಗತ್ಯ

ಗಿರಿಧರ ಗುಂಜಗೋಡು, ಐಟಿ ಉದ್ಯೋಗಿ ಮತ್ತು ಪ್ರವಾಸಿ ಲೇಖಕ

ಅರಮನೆ ಸುತ್ತಮುತ್ತ ಖಾಸಗಿ ವಾಹನಗಳ ನಿಷೇಧವಿರಲಿ

ಮೈಸೂರಿಗರಿಗೆ ಇಲ್ಲಿನ ಇತಿಹಾಸ, ಪರಂಪರೆ, ಚಂದದ ರಸ್ತೆಗಳು, ಪ್ರವಾಸಿ ತಾಣಗಳು, ಚಾಮುಂಡಿ ಬೆಟ್ಟ, ದಸರಾ ಹೀಗೆ ತಮ್ಮ ಬಗ್ಗೆ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿವೆ. ದಸರಾ ಅನ್ನುವುದು ಮೈಸೂರಿಗರಿಗೆ ಕೇವಲ ಒಂದು ಹಬ್ಬವಲ್ಲ. ಅದು ಇಲ್ಲಿನ ಜನರ ಅಸ್ಮಿತೆಯ ಭಾಗ. ಇದು ಕೇವಲ ಹತ್ತು ದಿನಗಳಲ್ಲಿ ಮುಗಿದು ಹೋಗುವ ಸಂಭ್ರಮವಲ್ಲ. ತಿಂಗಳುಗಳ ಮುಂಚೆಯೇ ಇದಕ್ಕೆ ತಯಾರಿ ಶುರುವಾಗುತ್ತದೆ, ಹಾಗೂ ದಸರಾ ಮುಗಿದ ತಿಂಗಳಗಟ್ಟಲೇ ಕಾಲ ಈ ಸಡಗರ ಮುಂದುವರಿಯುತ್ತದೆ.

ದಸರಾದ ಆಚರಣೆಗಳು, ಇಲ್ಲಿ ನಡೆಯುವ ಕಾರ್ಯಕ್ರಮಗಳು ಕೂಡಾ ಒಂದೆರಡಲ್ಲ. ಉದ್ಘಾಟನೆಯಿಂದ ಮೊದಲ್ಗೊಂಡು ಜಂಬೂಸವಾರಿಯವರೆಗಿನ ಧಾರ್ಮಿಕ ಆಚರಣೆಗಳು, ಯುವ ದಸರಾ, ಫಲಪುಷ್ಪ ಪ್ರದರ್ಶನ, ಆಹಾರಮೇಳ, ಎಕ್ಸಿಬಿಷನ್, ಟಾರ್ಚ್‌ಲೈಟ್ ಪರೇಡ್ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತವೆ.

ನಾಡಿನ ಹೊರಗೆ, ಹೊರದೇಶಗಳಲ್ಲಿ ಕೆಲ ವರ್ಷಗಳ ಕಾಲ ನೆಲೆನಿಂತ ಅನುಭವದಲ್ಲಿ ಹೇಳಬೇಕೆಂದರೆ ನಾನು ವಾಸವಾಗಿದ್ದ, ಭೇಟಿಯಾಗಿದ್ದ ಯಾವ ಊರಿನಲ್ಲೂ ಇಷ್ಟು ದೊಡ್ಡ ಹಾಗೂ ದೀರ್ಘವಾದ ಕಾರ್ಯಕ್ರಮಗಳನ್ನು ನೋಡಿಲ್ಲ. ಅಲ್ಲಿ ನಾನು ಮಾತನಾಡಿದ ಅನೇಕ ಸ್ನೇಹಿತರು, ಅಪರಿಚಿತರು ಮೈಸೂರಿನ ದಸರಾದ ಬಗ್ಗೆ ಕೇಳಿದ್ದಾರೆ. ಕೆಲವರಿಗೆ ದಸರಾ ಹೆಸರು ಗೊತ್ತಿರದಿದ್ದರೂ ಮೈಸೂರಿನಲ್ಲಿ ಅಕ್ಟೋಬರ್ ಸಮಯದಲ್ಲಿ ದೊಡ್ಡ ಉತ್ಸವ ನಡೆಯೋದು ಗೊತ್ತು. ಹೀಗಾಗಿ ಇದನ್ನು ಜಗತ್ಪ್ರಸಿದ್ಧ ಎಂದು ನಿಸ್ಸಂಶಯವಾಗಿ ಹೇಳಬಹುದು.

ಇಷ್ಟು ದೊಡ್ಡ ಹಬ್ಬವನ್ನು ವ್ಯವಸ್ಥಿತವಾಗಿ ನಡೆಸುವುದು ಸುಲಭದ ಮಾತಲ್ಲ. ತುಂಬಾ ಅಚ್ಚುಕಟ್ಟಾಗಿ ನಡೆದರೂ ಕೆಲ ಅವ್ಯವಸ್ಥೆಗಳು ಲೋಪದೋಷಗಳು ಕಣ್ಣಿಗೆ ಬಿದ್ದೇ ಬೀಳುತ್ತವೆ. ಎಷ್ಟೇ ಚೆನ್ನಾಗಿ ನಡೆದರೂ ಇನ್ನೂ ಚೆನ್ನಾಗಿ ಮಾಡಲು ಅವಕಾಶ ಇದ್ದೇ ಇರುತ್ತದೆ. ಒಬ್ಬ ಮೈಸೂರಿಗನಾಗಿ ಅದನ್ನು ಇನ್ನೂ ಹೇಗೆ ಚಂದಗಾಣಿಸಬಹುದು ಎಂದು ಯೋಚಿಸಲು ಕೂತರೆ ಕೆಲ ಅಂಶಗಳು ನೆನಪಿಗೆ ಬರುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ವಾಹನ ದಟ್ಟಣೆ. ಸ್ಥಳೀಯ ವಾಹನಗಳ ಜೊತೆ ಬೆಂಗಳೂರು ಸೇರಿದಂತ ರಾಜ್ಯದ ಹಾಗೂ ಹೊರ ರಾಜ್ಯಗಳ ವಾಹನಗಳು ಮೈಸೂರಿಗೆ ಲಗ್ಗೆಯಿಡುವ ಕಾರಣ ಅರಮನೆಯ ಸುತ್ತಲಿನ ಜಗಗಳಲ್ಲಿ ಅತಿಯಾದ ವಾಹನ ದಟ್ಟಣೆ ಉಂಟಾಗುತ್ತದೆ. ಅರಮನೆ ಸುತ್ತಮುತ್ತಲಿನ ಜಾಗಗಳಲ್ಲಿ ಖಾಸಗಿ ವಾಹನಗಳನ್ನು ಪೂರ್ತಿಯಾಗಿ ನಿಷೇಧಿಸುವುದು ಒಳ್ಳೆಯದು.

ಊರ ಹೊರಭಾಗಗಳಲ್ಲಿ ವಾಹನ ನಿಲುಗಡೆಯ ವ್ಯವಸ್ಥೆ ಮಾಡಿ ಅಲ್ಲಿಂದ ಉಚಿತ ಶಟಲ್‌ಗಳ ಮೂಲಕ ಅರಮನೆಯ ಹತ್ತಿರದ ಭಾಗದವರೆಗೆ ತಂದುಬಿಡಬಹುದು. ಅಲ್ಲಿ ಇನ್ನೊಂದು ಜಯಿಂಟ್ ಮಾಡಿ ಅಲ್ಲಿಂದ ವಿವಿಧ ಕಾರ್ಯಕ್ರಮಗಳು ನಡೆಯುವ ಜಗಕ್ಕೆ ತೆರೆದ ಬಸ್ಸುಗಳು, ಆಟೋ, ಕ್ಯಾಬ್, ಜಟಕಾಗಳ ವ್ಯವಸ್ಥೆ ಮಾಡಿ ಸರಕಾರವೇ ದರ ನಿಗದಿ ಮಾಡಿದರೆ ವಾಹನ ದಟ್ಟಣೆ ಬಹುಪಾಲು ಕಮ್ಮಿಯಾಗುತ್ತದೆ. ಪಾದಚಾರಿಗಳಿಗೆ ಉತ್ತಮ ವ್ಯವಸ್ಥೆ ಮಾಡಿಕೊಟ್ಟರೆ ಬಹಳ ಜನ ಕಾಲ್ನಡಿಗೆಯನ್ನೂ ಇಷ್ಟಪಟ್ಟು ಬಳಸುತ್ತಾರೆ.

ಎಷ್ಟೋ ಬಾರಿ ಹೊರದೇಶ, ಹೊರರಾಜ್ಯಗಳ ಸೆಲೆಬ್ರಿಟಿ ಕಲಾವಿದರನ್ನು ದುಬಾರಿ ಬೆಲೆತೆತು ಕರೆಸಿರುವುದನ್ನು ನಾವು ಕಾಣಬಹುದು. ನಮ್ಮ ನಾಡಹಬ್ಬಕ್ಕೆ ಬಿಳಿಯಾನೆಗಳನ್ನು ಕರೆಸುವುದಕ್ಕಿಂತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೂರಕ್ಕೆ ನೂರು ಭಾಗ ರಾಜ್ಯದ ಕಲಾವಿದರಿಗೇ ಅವಕಾಶ ಕೊಡುವುದು ಉತ್ತಮ. ಸೆಲೆಬ್ರಿಟಿಗಳಿಗೆ ರಾಜ್ಯದಲ್ಲಿ ಬೇರೆ ಬೇರೆ ವೇದಿಕೆಗಳು ಸಿಗುತ್ತವೆ. ಆದರೆ ದಸರಾ ಆದಷ್ಟೂ ನಮ್ಮ ನಾಡಿನ ಕಲಾಪ್ರತಿಭೆಗಳಿಗೆ ಮೀಸಲಾಗಿರಲಿ.

ಹೊರನಾಡುಗಳ ಸಾಂಸ್ಕೃತಿ ತಂಡಗಳನ್ನು ಕರೆಸುವುದಾದರೂ ಪ್ರತಿ ವರ್ಷ ಒಂದು ಅಥವಾ ಎರಡು ರಾಜ್ಯಗಳ ಗ್ರಾಮೀಣ ಮತ್ತು ಜನಪದ ತಂಡಗಳನ್ನು ಕರೆಸಿದರೆ ಅವರಿಗೆ ಒಂದೊಳ್ಳೆ ಅವಕಾಶ ಸಿಗುತ್ತದೆ, ನಮಗೂ ಹೊಸ ಸಂಸ್ಕೃತಿಗಳನ್ನು ಅರಿಯಲು ಸಹಾಯ ಮಾಡುತ್ತದೆ. ವಿದೇಶಗಳಲ್ಲಿ ಒಂದು ಉತ್ಸವ ಇದ್ದರೆ ಅದನ್ನು ಅದ್ಭುತವಾಗಿ ಬ್ರ್ಯಾಂಡಿಂಗ್ ಮಾಡುತ್ತಾರೆ. ಹಲವಾರು ವಿಶೇಷ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅವುಗಳನ್ನು ನೆನಪಿಗೆ ಕೊಂಡೊಯ್ಯುತ್ತಾರೆ.

ಉದಾಹರಣೆಗೆ ಕ್ಯಾಲಿಫೋರ್ನಿಯಾದ ಪ್ಯಾಸಡೀನಾ ನಗರದಲ್ಲಿ ರೋಸ್ ಪರೇಡ್ ಅಂತ ಒಂದು ಚಂದದ ಪರೇಡ್ ನಡೆಯುತ್ತದೆ. ಆ ಸಮಯದಲ್ಲಿ ವಿಶೇಷ ಕೀಚೈನುಗಳು, ಉಡುಗೊರೆ ವಸ್ತುಗಳನ್ನು ಮಾಡಿ ಅದನ್ನು ಪ್ರಚಾರಮಾಡಲು ಅಲ್ಲಿನ ನಗರ ದೊಡ್ಡ ಪ್ರಯತ್ನ ಮಾಡುತ್ತದೆ. ನಮ್ಮ ಸರಕಾರ ತನ್ನ ಉದ್ದಿಮೆಗಳನ್ನು ಪ್ರಚಾರಪಡಿಸುತ್ತಿದ್ದರೂ ಇಲ್ಲಿ ಬಹಳ ದೊಡ್ಡ ಅವಕಾಶಗಳಿವೆ ಎಂದು ನನಗೆ ಅನ್ನಿಸುತ್ತದೆ. ವಿದೇಶೀ ಮತ್ತು ಶ್ರೀಮಂತ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಮೈಸೂರು ಸ್ಯಾಂಡಲ್ ದಸರಾದ ಲಿಮಿಟೆಡ್ ಎಡಿಶನ್ ಸೋಪುಗಳನ್ನು, ಕೆಎಂಎಫ್ನಿಂದ ದಸರಾ ಸಮಯದ ವಿಶೇಷ ಸಿಹಿತಿನಿಸಿಗಳ ಉಡುಗೊರೆ ಪ್ಯಾಕ್‌ಗಳನ್ನು, ಅದೇ ತರಹ ಕರಕುಶಲ ನಿಗಮ – ರೇಶ್ಮೆ ನಿಗಮಗಳು ದಸರಾ ಸಮಯದಲ್ಲಿ ಮಾತ್ರ ಸಿಗಬಹುದಾದ ಉತ್ಪನ್ನಗಳನ್ನು ಮಾಡಿ ಪ್ರಚಾರಪಡಿಸಿ ಉತ್ತಮ ಗುಣಮಟ್ಟ ಕೊಟ್ಟು ಹೆಚ್ಚಿನ ಬೆಲೆಗೆ ಮಾರಿದರೆ ದೊಡ್ಡ ಆದಾಯ ತಂದುಕೊಡುತ್ತದೆ.

ಇವೆಲ್ಲದರ ನಡುವೆ ಹಲವಾರು ಸೂಕ್ಷ್ಮ ಸಂಗತಿಗಳಿವೆ. ದಸರಾ ಆನೆಗಳಿಗೆ, ಮೃಗಾಲಯದ ಪ್ರಾಣಿಗಳಿಗೆ, ಟಾಂಗಾದ ಕುದುರೆಗಳಿಗೆ ಅತಿಯಾದ ಪ್ರವಾಸಿಗರ ದಟ್ಟಣೆಯಿಂದ ಪುಂಡ ಪ್ರವಾಸಿಗರಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಇನ್ನೂ ಹೆಚ್ಚಿನ ಗಮನ ಕೊಡುವುದು, ಚಾಮುಂಡಿ ಬೆಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವುದು ಹಾಗೂ ಅದಷ್ಟೂ ಅಲ್ಲಿ ಕಟ್ಟಡ ನಿರ್ಮಾಣಗಳನ್ನು ಮಾಡದಿರುವುದು ಹೀಗೆ ಪಟ್ಟಿಮಾಡುತ್ತಾ ಹೋಗಬಹುದು.

ಕೊನೆಯದಾಗಿ ದಸರಾವನ್ನು ಇನ್ನೂ ಉತ್ತಮಗೊಳಿಸುತ್ತಾ ಹೋಗಲು ಕೇವಲ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಮಾತ್ರವಲ್ಲದೇ ನಮ್ಮೆಲ್ಲರ ಪಾತ್ರವೂ ಇದೆ. ಕೇವಲ ದಸರಾ ಬಗ್ಗೆ ಅಲ್ಲ, ಒಬ್ಬ ಮೈಸೂರಿಗನಾಗಿ ಊರಲ್ಲಿದ್ದಾಗ ಮತ್ತು ಊರಹೊರಗೆ ಹೋದಾಗ ಮೈಸೂರಿಗೆ ನಾನೇನು ಮಾಡಬಹುದು ಎಂದು ಯೋಚಿಸಿ ಚಿಕ್ಕ ಹೆಜ್ಜೆಯಿಟ್ಟರೂ ಸಾಕು. ಹನಿಹನಿಗೂಡಿದರೆ ಹಳ್ಳವೆನ್ನುವಂತೆ ಅದೂ ದೊಡ್ಡ ಕೊಡುಗೆ ನೀಡುತ್ತದೆ.

” ದಸರಾದ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಇತ್ಯಾದಿಗಳಿಗೆ ನಿಗದಿತವಾದ ಪ್ರವೇಶ ದರವಿರುತ್ತದೆ. ಎಲ್ಲದಕ್ಕೂ ಸೇರಿ ಒಂದೇ ಟಿಕೆಟ್ ಇಟ್ಟು ಅದಕ್ಕೆ ಹತ್ತು ದಿನಗಳ ವ್ಯಾಲಿಡಿಟಿ ಇಟ್ಟರೆ ಕೊಳ್ಳುಗರಿಗೆ ಅನುಕೂಲಕರವಾಗುತ್ತದೆ. ಹಾಗೆಯೇ ಸರತಿಸಾಲಿನಲ್ಲಿ ನಿಲ್ಲುವುದನ್ನು ಕೂಡಾ ತಪ್ಪಿಸಬಹುದು. ಇದೇ ಟಿಕೆಟುಗಳನ್ನು ಆನ್ ಲೈನಲ್ಲಿ ಕೂಡಾ ಕೊಳ್ಳುವ ವ್ಯವಸ್ಥೆ ಇದ್ದರೆ ಮತ್ತೂ ಅನುಕೂಲಕರ. ”

 

 

Tags:
error: Content is protected !!