ವಸಂತ್ ಕುಮಾರ್, ಮೈಸೂರು ಮಠ
ಪ್ರತಿ ವರ್ಷವೂ ಪಾಲಿಕೆಯ ಬಜೆಟ್‌ನಲ್ಲಿ ರಸ್ತೆ ದುರಸ್ತಿಗಾಗಿ ಇಂತಿಷ್ಟು ಹಣವನ್ನು ನಿಗದಿಪಡಿಸಲಾಗುತ್ತದೆ. ೨೦೨೪-೨೦೨೫ರಲ್ಲಿ ಕೊಟ್ಟ ಹಣದಲ್ಲಿ ಎಷ್ಟು ಉದ್ದ ರಸ್ತೆಗಳಿಗೆ ದುರಸ್ತಿ ಯಾ ಡಾಂಬರಿನ ಯಾ ವೈಟ್ ಟಾಪಿಂಗ್ ಕೆಲಸಗಳು ಮುಗಿದಿವೆ ಎಂದು ತಿಳಿಯುವ ಮುನ್ನವೇ ೨೦೨೫-೨೬ರಲ್ಲಿ ಪುನಃ ಹಣವನ್ನು ಮಂಜೂರು ಮಾಡಲಾಗಿದೆ. ಇದರ ಅರ್ಥ ಏನು? ಏಕೆಂದರೆ, ನಾಗರಿಕರಿಗೆ ತಿಳಿದ ಮಟ್ಟಿಗೆ ಹೋದ ವರುಷ ಬಹಳಷ್ಟು ರಸ್ತೆಗಳು ದುರಸ್ತಿಯನ್ನೇ ಕಂಡಿರಲಿಲ್ಲ. ಈ ಅನನುಕೂಲವಲ್ಲದೆ, ನೀರು ಮತ್ತು ಒಳ ಚರಂಡಿ ಇಲಾಖೆಗಳೂ ಕೇಬಲ್ ಹಾಕುವವರೂ ರಸ್ತೆಗಳ ಹನನಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ.
ದಸರಾ ಹಬ್ಬದ ಹೆಸರಿನಲ್ಲೂ ಜಂಬೂ ಸವಾರಿಯು ಸಾಗುವ ಮುಖ್ಯ ಮಾರ್ಗವಾದ ಸಯ್ಯಾಜಿರಾವ್ ರಸ್ತೆಯೂ ಡಾಂಬರು ಕಾಣಲಿಲ್ಲ. ನಮ್ಮ ಹಣ ಏನಾಯಿತು?
ರಸ್ತೆಗಳ ದುರಸ್ತಿಯ ಪ್ರಕ್ರಿಯೆಯು ಜನಗಳ ಪಾಲಿಗೆ ಒಂದು ಶಾಪವಾಗಿಯೂ ಮತ್ತು ವಿಷ ವರ್ತುಲವಾಗಿಯೂ ಕಾಡುತ್ತಿದೆ. ಏಕೆ ಹೀಗೆ? ಪ್ರತಿ ಬಾರಿಯೂ, ಡಾಂಬರು ಹಾಕುವ/ದುರಸ್ತಿ ಕಾರ್ಯ ಚಟುವಟಿಕೆಗಳು ಮಳೆ ಬಂದಾಗಲೇ ಮೊದಲಾಗಬೇಕೆ? ಹೀಗೆ ಹಾಕಿದ ಡಾಂಬರು ೩ರಿಂದ ೬ ತಿಂಗಳುಗಳೊಳಗೆ ಏಕೆ ಶಿಥಿಲಾವಸ್ಥೆಗೊಳಗಾಗುತ್ತವೆ ? ಇದರ ಹಿಂದಿರುವ ಸಮಸ್ಯೆಗಳೇನು? ಅವುಗಳಿಗೆ ಪರಿಹಾರವೇನು? ಎನ್ನುವುದನ್ನು ವಿಶ್ಲೇಷಿಸಿ ನೋಡಿ ಕೆಳ ಕಂಡ ಸಲಹೆಗಳನ್ನು ನೀಡಲಾಗಿದೆ ಮತ್ತು ಅವನ್ನು ಪರಿಗಣಿಸಿ ಮೈಸೂರು ಮಹಾನಗರ ಪಾಲಿಕೆಯು ಕಾರ್ಯರೂಪಕ್ಕೆ ತಂದು ತನ್ನ ಕೆಲಸಗಳನ್ನು ಸುಲಭವಾಗಿಸಿಕೊಂಡು ಮತ್ತು ನಾಗರಿಕರು ಸುಂದರವಾದ ರಸ್ತೆಗಳನ್ನು ಕಾಣುವ ಬಯಕೆಯನ್ನೂ ಸಂಪನ್ನಗೊಳಿಸುವುದೆಂದು ನಂಬಲಾಗುತ್ತದೆ. ನಗರದ ರಸ್ತೆ ದುರಸ್ತಿ ಕಾರ್ಯಕ್ರಮಗಳ ರೂಪುರೇಷೆಯನ್ನು ಕೆಳಕಂಡಂತೆ ಬದಲಾಯಿಸಿಕೊಳ್ಳಬೇಕು:
೧. ಜುಲೈ ತಿಂಗಳಿನಲ್ಲಿ – ಮಳೆ ನಿಂತ ಮೇಲೆ ಯಾವ ಯಾವ ರಸ್ತೆಗಳನ್ನು ದುರಸ್ತಿಗೆ ಒಳಪಡಿಸಬೇಕು ಎನ್ನುವ ಸಮೀಕ್ಷೆಯನ್ನು ಕೈಗೊಳ್ಳಬೇಕು ಮತ್ತು ಅವುಗಳನ್ನು ಗುರುತಿಸಿ ಅ.
ಆ. ಇ ವರ್ಗಗಳಾಗಿ ವಿಂಗಡಿಸಬೇಕು. ಅ – ಅತಿಯಾಗಿ ಕೆಟ್ಟಿರುವವು; ಆ – ಸುಮಾರಾಗಿ ದುರಸ್ತಿ ಮಾಡುವಂತಹವು ಮತ್ತು ಇ – ದುರಸ್ತಿ ಮಾಡಬೇಕಾದರೂ ನಿಧಾನವಾಗಿ ಮಾಡುವಂತಹವು.
೨. ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ – ಅವುಗಳ ಅಂಕಿ ಅಂಶಗಳ ತಯಾರಿಕೆ, ಅಂದಾಜು ವೆಚ್ಚ, ಟೆಂಡರ್ ಪ್ರಕ್ರಿಯೆ, ಪರಿಶೀಲನೆ, ಮಾತು ಕಥೆಗಳ ಪ್ರಕ್ರಿಯೆ, ಭಾಂಗಿಗಳ ವಿತರಣೆ, ಕಾರ್ಯ ಸೂಚಿಗಳನ್ನು ನೀಡುವಿಕೆ ಮುಂತಾದವುಗಳನ್ನು ಮುಗಿಸುವುದು.
೩. ಅಕ್ಟೋಬರ್ ತಿಂಗಳಿನಲ್ಲಿ ಗುತ್ತಿಗೆದಾರಿಗೆ ಮುಂಗಡ ಹಣ ನೀಡುವಿಕೆ, ಸಾಮಾನು ಸರಂಜಮುಗಳನ್ನು ಕೊಂಡು ತಂದು ಅವುಗಳನ್ನು ಆಯಾ ವಿಭಾಗಗಳಲ್ಲಿ ಶೇಖರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
೪. ನವೆಂಬರ್-ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಡಾಂಬರು ಹಾಕಿ, ಅವುಗಳ ಲೆಕ್ಕ ಮತ್ತು ಪರಿಶೋಧನೆ ಮಾಡುವ ಪ್ರಕ್ರಿಯೆಯನ್ನು ಮುಗಿಸಿ
೫. ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಗುತ್ತಿಗೆದಾರರಿಗೆ ಅಂತಿಮವಾಗಿ ನೀಡಬೇಕಾದ ಹಣವನ್ನು ಪಾವತಿ ಮಾಡುವ ಮುನ್ನ ಅವರುಗಳು ಮಾಡಿರುವ ಕೆಲಸಗಳಲ್ಲಿ ಕುಂದು ಕೊರತೆಗಳು, ನ್ಯೂನತೆಗಳು ಕಂಡು ಬಂದಲ್ಲಿ, ಅವುಗಳನ್ನು ಸರಿಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಮೇಲ್ಕಂಡ ಸಲಹೆಗಳನ್ನು ಕಾರ್ಯ ರೂಪಕ್ಕೆ ತಂದರೆ, ಡಾಂಬರು ಹಾಕಿದ ರಸ್ತೆಗಳು ಮಳೆಯಿಂದ ಶಿಥಿಲಗೊಳ್ಳುವುದಿಲ್ಲ; ಬಿಸಿಲುಗಾಲದಲ್ಲಿರುವ ಸೂರ್ಯನ ಶಾಖದಿಂದ ಡಾಂಬರು ಕರಗಿ ಸರಿಯಾಗಿ ರೀತಿಯಲ್ಲಿ ಸೆಟ್ ಆಗಿ ರಸ್ತೆಗಳು ಸಾಕಷ್ಟು ಕಾಲ ಉಳಿದುಕೊಳ್ಳುವುದರಲ್ಲಿ ಸಂದೇಹವಿರುವುದಿಲ್ಲ.
ಇದಲ್ಲದೆ ದಸರಾ ಸಮಾರಂಭಗಳ ಕಾಲದಲ್ಲಿ ಮಾತ್ರ, ‘ರಾಜ ಮಾರ್ಗ’ವನ್ನು ಸಿಂಗರಿಸುವ ಮತ್ತು ಜಂಬೂ ಸವಾರಿ ಸಾಗುವ ಮಾರ್ಗದ ದುರಸ್ತಿಯನ್ನು ಒಂದು ಬೇರೆ ರೀತಿಯ ಸಾಧಕ ಅಂಗಭೂತವಾಗಿ ಪರಿಗಣಿಸಬೇಕಾಗುವುದೆಂದು ಸಲಹೆ ನೀಡ ಲಾಗುತ್ತಿದೆ. ಸಿಂಗರಿಸುವ ನೆಪ ದಲ್ಲಿ ಈ ಮಾರ್ಗದಲ್ಲಿರುವ ಹತ್ತಾರು ವರ್ಷಗಳಿಂದ ಬೆಳೆದು ನಿಂತಿರುವ ಮತ್ತು ನೆರಳು ಕೊಟ್ಟು ಜನಗಳ ನೆತ್ತಿ ತಂಪು ಮಾಡುತ್ತಿರುವ ಪ್ರಕೃತಿಯ ಸಿರಿಯಾದ ಮರಗಳನ್ನು ಹನನ ಮಾಡಬಾರದಾಗಿ ವಿನಂತಿಸಿಕೊಳ್ಳಲಾಗುತ್ತದೆ.




