ಬೀದರ್‌ನ ಭಾಲ್ಕಿ ತಾಲ್ಲೂಕಿನಲ್ಲಿ ಬಸವಣ್ಣನವರ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದು ಖಂಡನೀಯ.
೧೨ನೇ ಶತಮಾನದಲ್ಲಿ ತತ್ವಜ್ಞಾನಿಯಾಗಿ, ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿದ ಬಸವಣ್ಣನವರು ಲಿಂಗ ಸಮಾನತೆ ಹಾಗೂ ಜಾತಿ ಪದ್ಧತಿಯ ವಿರುದ್ಧ ಹೋರಾಡಿ ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರಲ್ಲಿ ಪ್ರಮುಖರು.
ಅಸಂಖ್ಯಾತ ವಚನಗಳ ಮೂಲಕ ಸಮಾನತೆಯ ಸಂದೇಶವನ್ನು ಸಾರಿದವರು ಬಸವಣ್ಣ. ಇಂತಹ ಮಹಾನ್ ಚೇತನ ಬಸವಣ್ಣನವರ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಇದರಿಂದ ಬಸವಣ್ಣನವರ ಅನುಯಾಯಿಗಳಿಗೆ ಹಾಗೂ ಲಿಂಗಾಯತ ಸಮಾಜಕ್ಕೆ ನೋವುಂಟಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿಯೂ ಇಂತಹದ್ದೇ ಘಟನೆ ವರದಿಯಾಗಿತ್ತು. ಬೆಂಗಳೂರಿನಲ್ಲಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದರು.
ಇಂತಹ ಘಟನೆಗಳು ಮರುಕಳಿಸುತ್ತಿರುವುದು ಒಂದು ಸಮುದಾಯದ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ. ಸರ್ಕಾರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಪ್ರತಿಮೆಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಬಂಽಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
–ಮಹಾಂತೇಶ್ ಬಳ್ಳೂರುಹುಂಡಿ, ಸಂಘಟನಾ ಕಾರ್ಯದರ್ಶಿ, ಅ.ಭಾ.ವಿ. ಲಿ.ಮಹಾಸಭಾ, ನಂಜನಗೂಡು ತಾ