ವಿಶ್ವದ ಮೊದಲ ಕ್ಯಾನ್ಸರ್ ಲಸಿಕೆಯನ್ನು ರಷ್ಯಾದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವುದು ಸ್ವಾಗತಾರ್ಹ. ಪರೀಕ್ಷೆ ವೇಳೆ ಇದು ಶೇ.೧೦೦ರಷ್ಟು ಸುರಕ್ಷಿತ ಎಂದು ಕಂಡುಬಂದಿದೆ ಎಂದು ಹೇಳಲಾಗಿದೆ. ಆ ದೇಶದ ಫೆಡರಲ್ ಸರ್ಕಾರದ ಒಪ್ಪಿಗೆ ಬಾಕಿ ಇದೆ ಎನ್ನಲಾಗಿದೆ. ‘ಎಂಟಿರೋಮಿಕ್ಸ್’ ಎಂಬ ಹೆಸರಿನ ಈ ಲಸಿಕೆಯನ್ನು ಪೂರ್ವ ಕ್ಲಿನಿಕಲ್ ಟ್ರಯಲ್‌ನಲ್ಲಿ ದೊಡ್ಡ ದೊಡ್ಡ ಟ್ಯೂಮರ್‌ಗಳನ್ನು ಹೊಂದಿರುವ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಟ್ಯೂಮರ್‌ಗಳ ಗಾತ್ರವನ್ನು ಕುಗ್ಗಿಸುವಲ್ಲಿ ಮೇಲೆ ಹೇಳಲಾದ ವ್ಯಾಕ್ಸಿನ್ ಯಶಸ್ವಿಯಾಗಿದೆ ಎಂದು ರಷ್ಯಾದ ಫೆಡರಲ್ ಮೆಡಿಕಲ್ ಮತ್ತು ಬಯಾಲಾಜಿಕಲ್ ಏಜೆನ್ಸಿ ತಿಳಿಸಿದೆ ಎಂದು ರಷ್ಯಾದ ವಾರ್ತಾ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಸಂಘರ್ಷ | ಶಾಂತಿಯುತ ಪರಿಹಾರಕ್ಕೆ ಭಾರತ ಸಿದ್ದ : ಪುಟಿನ್‌ಗೆ ಮೋದಿ ಭರವಸೆ
ಪ್ರತಿವರ್ಷ ವಿಶ್ವದಾದ್ಯಂತ ಕ್ಯಾನ್ಸರ್‌ನಿಂದ ಲಕ್ಷಾಂತರ ರೋಗಿಗಳು ಮರಣ ಹೊಂದುತ್ತಿದ್ದಾರೆ. ಬ್ಲಡ್ ಕ್ಯಾನ್ಸರ್,ಲಿವರ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಚರ್ಮ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್‌ಗಳಿಂದ ಮನಕುಲ ಬಳಲುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಬದುಕುವ ಸಂಭವ ಕಡಿಮೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಲಸಿಕೆಯನ್ನು ಇಡೀ ವಿಶ್ವವೇ ಬರಮಾಡಿಕೊಳ್ಳಲು ಸಜ್ಜಾಗಿದೆ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





