ಲಕ್ಷ್ಮೀಕಾಂತ್ ಕೊಮಾರಪ್ಪ
ಉತ್ತಮ ಪ್ರದರ್ಶನ ನೀಡಿದ ಎಜಿಒಆರ್‌ಸಿ ತಂಡ ಚಾಂಪಿಯನ್; ಸದರ್ನ್ ಕಮಾಂಡ್ ತಂಡಕ್ಕೆ ದ್ವಿತೀಯ ಬಹುಮಾನ
ಸೋಮವಾರಪೇಟೆ: ಸುಮಾರು ೧೮ ವರ್ಷಗಳ ಬಳಿಕ ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಕ್ರೀಡೆ ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು. ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ಯಿಫಾ) ವತಿಯಿಂದ ಆಯೋಜನೆ ಗೊಂಡಿದ್ದ ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಎಜಿಒಆರ್‌ಸಿ ತಂಡ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಕಿರೀಟವನ್ನು ತನ್ನದಾಗಿಸಿಕೊಂಡಿತು.
ನಾಲ್ಕು ದಿನಗಳ ಕಾಲ ನಡೆದ ಈ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳು ಪಂದ್ಯಾಟದಲ್ಲಿ ಸೆಣಸಿ ಕ್ರೀಡಾಭಿಮಾನಿಗಳಿಗೆ ರೋಚಕ ಅನುಭವ ನೀಡಿದವು. ಫೈನಲ್ ಪಂದ್ಯಾಟದಲ್ಲಿ ಸದರ್ನ್ ಕಮಾಂಡ್ ತಂಡವನ್ನು ೩-೨ ಗೋಲುಗಳ ಅಂತರದಿಂದ ಸೋಲಿಸಿದ ಎಜಿಒಆರ್‌ಸಿ ತಂಡ ಆಕರ್ಷಕ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿತು. ಕಮಾಂಡ್ ತಂಡ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು.
ಅಂತಿಮ ಪಂದ್ಯಾಟವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಹಾಕಿ ಪ್ರೇಮಿಗಳು, ಸಾರ್ವಜನಿಕರು ಆಗಮಿಸಿದ್ದರು. ಅಂತಿಮ ಪಂದ್ಯಾಟದ ಅಂತಿಮ ಕ್ಷಣದವರೆಗೂ ಪಂದ್ಯಾಟ ರಣರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರು ಗ್ಯಾಲರಿಯಲ್ಲಿ ಕುಳಿತು ಆಟಗಾರರನ್ನು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು. ಫೈನಲ್ ಪಂದ್ಯದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಎಜಿಒಆರ್‌ಸಿ ತಂಡದ ನಲ್ಲುಲ್ಲಿ ಸೂರ್ಯ ಪಡೆದರು.
ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಆತಿಥೇಯ ಯಿಫಾ ತಂಡವನ್ನು ಕೆನರಾ ಬ್ಯಾಂಕ್ ತಂಡ ಮಣಿಸಿತು. ವಿಜೇತ ಕೆನರಾ ಬ್ಯಾಂಕ್ ತಂಡಕ್ಕೆ ತೃತೀಯ ಸ್ಥಾನದ ಟ್ರೋಫಿ ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಒಆರ್‌ಸಿ, ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸದನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸಿದ್ದವು.
ಪಂದ್ಯಾಟಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಹಾಕಿ ಕ್ರೀಡೆಗೆ ಪ್ರೋತ್ಸಾಹ ತುಂಬುವ ಯಂಗ್ ಇಂಡಿಯನ್ ಫಾರ್ಮರ್ಸ್‌ರ ಅಸೋಸಿಯೇಷನ್ ಶ್ರಮ ಶ್ಲಾಘನೀಯ ಎಂದರು. ತಪೋಕ್ಷೇತ್ರ ಮನೆಹಳ್ಳಿ ಮಠಾಽಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಷಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ವಹಿಸಿದ್ದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಲೀಡಿಂಗ್ ಎಡ್ಜ್ ಸಂಸ್ಥೆಯ ಮಾಲೀಕ ಮಡಿಕೇರಿ ಪ್ರಸನ್ನ, ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ತರಬೇತುಗಾರ್ತಿ ದೇವರಾಜಮ್ಮ ಹಾಜರಿದ್ದರು.
ಆಕರ್ಷಕ ಬಹುಮಾನ…:
ಯಿಫಾ ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ. ೨ ಲಕ್ಷ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಯಿತು. ದ್ವಿತೀಯ ಬಹುಮಾನ ಪಡೆದ ಸದನ್ ಕಮಾಂಡ್ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು. ತೃತೀಯ ಸ್ಥಾನ ಪಡೆದ ಕೆನರಾ ಬ್ಯಾಂಕ್ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ವಿತರಿಸಲಾಯಿತು
ವೈಯಕ್ತಿಕ ಬಹುಮಾನ…:
ಪಂದ್ಯಾವಳಿಯ ಬೆಸ್ಟ್ ಗೋಲ್‌ಕೀಪರ್ ಆಗಿ ಕಸ್ಟಮ್ಸ್ ತಂಡದ ಶಾನ್, ಫೈನಲ್ ಪಂದ್ಯದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಎಜಿಒಆರ್‌ಸಿ ತಂಡದ ನಲ್ಲುಲ್ಲಿ ಸೂರ್ಯ, ಪ್ಲೇಯರ್ಸ್ ಆಫ್ ದ ಟೂರ್ನಮೆಂಟ್ ಸದನ್ ಕಮಾಂಡ್ ತಂಡದ ರಜತ್ ಸಿಂಗ್, ಬೆಸ್ಟ್ ಡಿಫೆಂಡರ್ ಎಜಿಒಆರ್‌ಸಿಯ ಸಾತ್ವಿಕ್, ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರನಾಗಿ ಎಜಿಒಆರ್‌ಸಿಯ ತ್ರಿಶೂಲ್, ಬೆಸ್ಟ್ ಫಾರ್ವರ್ಡ್ ಆಟಗಾರನಾಗಿ ಯಿಫಾ ತಂಡದ ಧ್ರುವ, ಬೆಸ್ಟ್ ಮಿಡ್ ಫೀಲ್ಡರ್ ಆಗಿ ಕೆನರಾ ಬ್ಯಾಂಕ್ ತಂಡದ ನಕುಲ್ ಅವರು ಬಹುಮಾನ ಪಡೆದರು. ಪ್ರಾಯೋಜಕರಾದ ಪುನೀತ್ ಎನ್.ಎಸ್. ಮೂರ್ತಿ ಅವರು ಬಹುಮಾನ ವಿತರಿಸಿದರು




