ನಾಡಹಬ್ಬ ದಸರಾವನ್ನು ಗೌರವ ಮತ್ತು ವೈಭವಕ್ಕೆ ತಕ್ಕಂತೆ ಆಚರಿಸಲು ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗುವ ರೀತಿ ಸಹಕಾರ ನೀಡಲು ಪ್ರಯತ್ನಿಸುತ್ತಿದ್ದರೂ ರಾಜಮನೆತನದ ಸಹಕಾರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಹೇಳಿರುವುದು ಅವರ ನೋವಿನ ಪ್ರತೀಕ ಎನ್ನಬಹುದು .
ಈ ಬಾರಿ ದಸರಾ ಮಹೋತ್ಸವವನ್ನು ನಡೆಸುವಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ವಜ್ರಮುಷ್ಟಿ ಕಾಳಗ ನಡೆದಿಲ್ಲ ಹಾಗೂ ಚಿನ್ನದ ಅಂಬಾರಿ ಬಳಿ ಭದ್ರತಾ ನಿಯಮ ಉಲ್ಲಂಘಿಸಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸೆಲಿ ಮತ್ತು ಛಾಯಾಚಿತ್ರ ತೆಗೆದುಕೊಳ್ಳಲು ಮುಗಿಬೀಳುವುದು ಆಘಾತಕಾರಿ ಸಂಗತಿಯಾಗಿದ್ದು ಇದು ಶಿಸ್ತಿನ ಕೊರತೆ ಮತ್ತು ಕರ್ತವ್ಯಲೋಪಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೇಳಿರುವುದು ಸರ್ಕಾರಕ್ಕೆ ಕಿವಿ ಹಿಂಡಿದಂತೆಯೇ ಸರಿ. ಇನ್ನು ಮುಂದಾದರೂ ಸರ್ಕಾರದ ಜನಪ್ರತಿನಿದಿಗಳು ದಸರಾ ಹಬ್ಬದ ಬಗ್ಗೆ ಅರಿತಿರುವ ಅಧಿಕಾರಿಗಳನ್ನು ನಿಯೋಜಿಸಿ ಸ್ಥಳೀಯರ ಅಭಿಪ್ರಾಯವನ್ನು ಪಡೆದು ದಸರಾ ಆಚರಣೆಯನ್ನು ನಾಡದೇವತೆಯ ಗೌರವ, ಘನತೆ, ವೈಭವ, ಸಂಸ್ಕೃತಿಗೆ ಕಿಂಚಿತ್ತೂ ತೊಂದರೆ ಆಗದ ರೀತಿಯಲ್ಲಿ ಆಚರಿಸಲು ನೆರವಾಗುವುದು ಒಳಿತು.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು




