Mysore
26
overcast clouds

Social Media

ಮಂಗಳವಾರ, 27 ಅಕ್ಟೋಬರ್ 2026
Light
Dark

‘ದಾಸೋಹ’, ‘ಸಾಮಾಜಿಕ ಬದ್ಧತೆ’ ಎಂಬ ಮಾರ್ಗದರ್ಶಿ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು

ಇತ್ತೀಚೆಗೆ ನನ್ನ ಉದ್ಯಮಿ ಸ್ನೇಹಿತರೊಬ್ಬರು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕುರಿತು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ನನ್ನೊಂದಿಗೆ ಚರ್ಚಿಸುತ್ತಿದ್ದರು. ಆಗ ನನಗೆ ಅನಿಸಿದ್ದು ಯಾವುದೇ ಒಂದು ನೈತಿಕ ಸಮಾಜದ ಬುನಾದಿ ನಿಂತಿರುವುದು ಅಲ್ಲಿನ ವ್ಯಕ್ತಿಗಳ ಕಾಯಾ-ವಾಚಾ-ಮನಸಾ ಬದ್ಧತೆ ಹಾಗೂ ನೈತಿಕ ಚಾರಿತ್ರ್ಯದ ಮೇಲೆ. ಹಣಕಾಸಿನ ಸಾಲ ಅಥವಾ ಸಹಾಯವನ್ನು ನಾವು ಕೇವಲ ಲೆಕ್ಕಪತ್ರದ (ಬ್ಯಾಲೆನ್ಸ್‌ಶೀಟ್) ದೃಷ್ಟಿಯಿಂದ ನೋಡದೆ, ವ್ಯಕ್ತಿತ್ವ ಮತ್ತು ಸಾಮಾಜಿಕ ಬದ್ಧತೆಯ ದೃಷ್ಟಿಕೋನದಿಂದ ನೋಡಿದಾಗ ಏನಾಗುತ್ತದೆ? ವಿಭಿನ್ನ ಶತಮಾನಗಳ ಇಬ್ಬರು ಮಹಾನ್ ದಾರ್ಶನಿಕರು ಈ ವಿಷಯದಲ್ಲಿ ಅತ್ಯಂತ ಆಳವಾದ ಮತ್ತು ಸಮಾನ ಮನೋಭಾವದ ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬರುತ್ತದೆ.

೧ ಡಾ. ಬಿ.ಆರ್. ಅಂಬೇಡ್ಕರ್ : ನಾನು ಚಾರಿತ್ರ್ಯವುಳ್ಳ ವ್ಯಕ್ತಿ (ಐ ಆಮ್ ಎ ಮ್ಯಾನ್ ಆಫ್‌ ಕ್ಯಾರೆಕ್ಟರ್)

೧೯೨೪ರಲ್ಲಿ ಬರೋಡಾ ಸಂಸ್ಥಾನದಿಂದ ಪಡೆದ ವಿದ್ಯಾರ್ಥಿವೇತನದ ಮರುಪಾವತಿ ಕುರಿತು ಬರೆದ ಪತ್ರವೊಂದರಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದರು: ನನ್ನ ಶಿಕ್ಷಣಕ್ಕಾಗಿ ರಾಜ್ಯವು ವೆಚ್ಚ ಮಾಡಿದ ಹಣವನ್ನು ಹಿಂತಿರುಗಿಸಲು ನಾನು ಸದಾ ಬದ್ಧನಾಗಿದ್ದೇನೆ. ಆದರೆ, ಅವರು ಬರೋಡಾ ಸಂಸ್ಥಾನದ ಮುಂದೆ ಒಂದು ವೈಚಾರಿಕ ಹಾಗೂ ಪ್ರಗತಿಪರ ವಿಚಾರವನ್ನು ಇಟ್ಟರು. ಆ ಹಣವನ್ನು ಹಿಂದುಳಿದ ವರ್ಗಗಳ ಏಳಿಗೆಗಾಗಿ ಮೀಸಲಿಟ್ಟಿದ್ದ ನಿಽಯಿಂದ ತಮಗೆ ನೀಡಲಾಗಿದ್ದರಿಂದ, ಅದನ್ನು ಬರೋಡ ಸರ್ಕಾರದ ಸಾಮಾನ್ಯ ಖಜನೆಗೆ ಸೇರಿಸಿ ವಾಣಿಜ್ಯ ಉದ್ದೇಶಗಳಿಗೆ ಬಳಸುವ ಬದಲಾಗಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಬರೋಡಾ ಮಹಾರಾಜರ ಹೆಸರಿನಲ್ಲಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ನಿಧಿ (ಸ್ಕಾಲರ್‌ಶಿಪ್ ಫಂಡ್) ಸ್ಥಾಪಿಸಲು ಬಳಸಬೇಕು ಎಂದು ಪ್ರಸ್ತಾವನೆ ಇಡುತ್ತಾರೆ. ಡಾ. ಬಾಬಾಸಾಹೇಬ ಅವರ ಪ್ರಕಾರ, ನಿಜವಾದ ನೈತಿಕತೆ ಮತ್ತು ಚಾರಿತ್ರ್ಯ (ಇಂಟಿಗ್ರಿಟಿ) ಎಂದರೆ ಕೇವಲ ವೈಯಕ್ತಿಕ ಬಾಧ್ಯತೆಯನ್ನು ತೀರಿಸುವುದಲ್ಲ; ಆ ಸಂಪನ್ಮೂಲಗಳು ನಿರಂತರವಾಗಿ ಸಮಾಜದ ಒಳಿತಿಗಾಗಿ ಮರುಬಳಕೆಯಾಗುವಂತೆ ನೋಡಿಕೊಳ್ಳುವುದು.

ಕೆರೆಯ ನೀರನ್ನು ನೇರವಾಗಿ ಮತ್ತೊಂದೆಡೆಯಿಂದ ಕೆರೆಗೆ ಚೆಲ್ಲದೆ, ಆ ನೀರಿನಿಂದ ಹಸಿರು ಕಾನನ ಬೆಳೆಸಿ ಮಳೆ ಬರುವಂತೆ ಮಾಡಿ ಹಳ್ಳ ಕೊಳ್ಳಗಳು ಹರಿದು ಮತ್ತೆ ಕೆರೆ ನೀರು ತುಂಬಿದಂತೆ ನಿರಂತರವಾಗಿ ಪ್ರಗತಿ ಸಾಽಸುವುದು ಅವರ ನಿಲುವಾಗಿತ್ತು.

೨ ಬಸವಾದಿ ಶರಣರ ‘ದಾಸೋಹ’ ತತ್ವ: 

೧೨ನೇ ಶತಮಾನದ ಸಾಮಾಜಿಕ -ಧಾರ್ಮಿಕ ದಾರ್ಶನಿಕರಾದ ಬಸವಾದಿ ಶರಣರು ಸಾಮಾಜಿಕ ಸಂಪತ್ತು ಮತ್ತು ನೀಡುವಿಕೆಯ ಕುರಿತು ಇಂತಹದೇ ಮಹೋನ್ನತ ಆಲೋಚನೆಯನ್ನು ವ್ಯಕ್ತಪಡಿಸಿದ್ದರು: ಶರಣರಿಗಲ್ಲದೆ ಕಡ ಬಡ್ಡಿಯ ಕೊಡಲಾಗದು.. ಬಂದಡೊಂದು ಲೇಸು.. ಬಾರದಿದ್ದಡೆ ಎರಡು ಲೇಸು.. ಅಲ್ಲಿದ್ದರೂ ಲಿಂಗಕ್ಕೆ ಬೋನ ಇಲ್ಲಿದ್ದರೂ ಲಿಂಗಕ್ಕೆ ಬೋನ.. ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.. ಇದರ ಸಾರಾಂಶವೆಂದರೆ, ಸಮಾಜದ ಒಳಿತಿಗಾಗಿ ನೀಡಿದ ಹಣ ಮರಳಿ ಬಂದರೆ, ಅದನ್ನು ಮತ್ತೆ ಸಮಾಜದ ಕಲ್ಯಾಣಕ್ಕಾಗಿ (ದಾಸೋಹ) ವಿನಿಯೋಗಿಸಬಹುದು. ಒಂದು ವೇಳೆ ಅದು ಮರಳಿ ಬಾರದಿದ್ದರೆ, ಅದು ಈಗಾಗಲೇ ನೇರವಾಗಿ ಸಮಾಜದ ಏಳಿಗೆಗಾಗಿ ಬಳಕೆಯಾಗಿದೆ ಎಂದರ್ಥ. ಶರಣರ ದಾಸೋಹ ಕಲ್ಪನೆಯು ಕೇವಲ ದಾನವಲ್ಲ, ಅದು ಸಾಮಾಜಿಕ ಕರ್ತವ್ಯ ಹಾಗೂ ಹಕ್ಕುಗಳ ಸಮತೋಲನವಾಗಿದೆ.

೩ಸಾಮಾಜಿಕ ಬಂಡವಾಳ ಮತ್ತು ಸುಸ್ಥಿರ ಬೆಳವಣಿಗೆ (ಸೋಷಿಯಲ್ ಕ್ಯಾಪಿಟಲ್ ಅಂಡ್ ಸಸ್ಟೈನೆಬಿಲಿಟಿ): 

ಈ ಇಬ್ಬರೂ ಚಿಂತಕರು ಹಣಕಾಸಿನ ವಹಿವಾಟುಗಳನ್ನು ಕೇವಲ ಲೆಕ್ಕಪತ್ರಗಳಾಗಿ ನೋಡದೆ, ಸಾಮಾಜಿಕ ಹೂಡಿಕೆಗಳಾಗಿ (ಸೋಷಿಯಲ್ ಇನ್ ವೆಸ್ಟ್‌ಮೆಂಟ್) ಮರುಸೃಷ್ಟಿಸುತ್ತಾರೆ.

ಸಂಪತ್ತಿನ ಪುನರ್ಬಳಕೆ (ಸರ್ಕುಲ್ಯಾರಿಟಿ ಆಫ್ ವೆಲ್ತ್) : ಅಂಬೇಡ್ಕರ್ ಅವರ ಶಿಕ್ಷಣ ನಿಧಿಯ ಪ್ರಸ್ತಾವನೆ ಮತ್ತು ಬಸವಣ್ಣನವರ ದಾಸೋಹ ತತ್ವಗಳೆರಡೂ ಸಂಪತ್ತು ಒಂದೆಡೆ ಕ್ರೋಡೀಕರಣಗೊಳ್ಳುವುದನ್ನು ತಡೆಯುತ್ತವೆ. ಪಡೆದ ಸಹಾಯವನ್ನು ಸಮಾಜಕ್ಕೆ ಮರಳಿ ತಲುಪಿಸಿದಾಗ, ಅದು ಮತ್ತೊಬ್ಬ ಅಗತ್ಯವಿರುವ ವ್ಯಕ್ತಿಗೆ ಆಸರೆಯಾಗುತ್ತದೆ.

ಅಹಂಕಾರ ರಹಿತ ಸೇವೆ: ಬಸವಣ್ಣನವರ ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ ಎಂಬ ಸಾಲುಗಳು ನಿಸ್ವಾರ್ಥ ಸೇವೆಯ ಸಂಕೇತ. ನಾವು ನೀಡುವ ಕೊಡುಗೆಯು ಯಾವುದೇ ಅಪೇಕ್ಷೆಯಿಲ್ಲದೆ ಸಮಾಜಕ್ಕೆ ತಲುಪಿದಾಗ ಮಾತ್ರ ಅಲ್ಲಿ ನೈತಿಕತೆ ಉಳಿಯುತ್ತದೆ.

೪ ಇಂದಿನ ನಾಯಕತ್ವ ಮತ್ತು ಸಿಎಸ್‌ಆರ್ ಕಲ್ಪನೆಯ ಪ್ರಸ್ತುತತೆ: 

ಇಂದಿನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಮತ್ತು ನಾಯಕತ್ವದ ಕಲ್ಪನೆಗಳಲ್ಲಿ ಈ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಸಿಎಸ್‌ಆರ್‌ಎನ್ನುವುದು ಕೇವಲ ಶಾಸನಬದ್ಧ ತೆರಿಗೆ ಉಳಿತಾಯದ ಮಾರ್ಗವಾಗದೆ, ಸಮಾಜದ ಮೂಲಭೂತ ಸವಾಲುಗಳಿಗೆ (ಶಿಕ್ಷಣ, ಆರೋಗ್ಯ, ಪರಿಸರ) ಶಾಶ್ವತ ಪರಿಹಾರ ಕಂಡುಕೊಳ್ಳುವ ‘ದಾಸೋಹ’ವಾಗುವುದು ಅವಶ್ಯವಾಗಿದೆ.

ಸುಸ್ಥಿರ ಶೈಕ್ಷಣಿಕ ಮತ್ತು ಆರ್ಥಿಕ ವಾತಾವರಣ: ಸಂಸ್ಥೆಗಳು ಹಳೆಯ ವಿದ್ಯಾರ್ಥಿಗಳ ಒಕ್ಕೂಟ (ಅಲುಮ್ನಿ ನೆಟ್‌ವರ್ಕ್ಸ್)ಅಥವಾ ಸಾಮಾಜಿಕ ನಿಧಿಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ, ಅವರು ಬೆಳೆದ ನಂತರ ಸಮಾಜಕ್ಕೆ ಮರಳಿ ನೀಡುವ ‘ಡಾ.ಬಿ.ಆರ್.ಅಂಬೇಡ್ಕರ್ ರವರ ಮಾದರಿ’ಯನ್ನು ಅಳವಡಿಸಿಕೊಳ್ಳಬಹುದು.

ಸಮತೋಲಿತ ನಾಯಕತ್ವ: ಪ್ರಸ್ತುತ ಕಾರ್ಪೊರೇಟ್ ಜಗತ್ತಿನಲ್ಲಿ ಕೇವಲ ಲಾಭ ಗಳಿಕೆಯನ್ನು ಗುರಿಯಾಗಿಟ್ಟುಕೊಳ್ಳದೆ, ತಮ್ಮ ಸಂಸ್ಥೆಯ ಸಂಪನ್ಮೂಲಗಳು ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ತರಲು ಹೇಗೆ ಬಳಕೆಯಾಗಬಹುದು ಎಂದು ಯೋಚಿಸಬೇಕಾಗಿದೆ.

ಡಾ.ಬಾಬಾ ಸಾಹೇಬರು ಹೇಳುವಂತೆ ನಿಜವಾದ ಚಾರಿತ್ರ್ಯವೆಂದರೆ ಕೇವಲ ಪಡೆದದ್ದನ್ನು ತೀರಿಸುವುದಲ್ಲ; ನಮ್ಮ ಬಳಿ ಇರುವ eನ, ಸಂಪನ್ಮೂಲಗಳು ಮತ್ತು ಅವಕಾಶಗಳು ನಿರಂತರವಾಗಿ ಸಮಾಜದ ಏಳಿಗೆಗಾಗಿ ಹಾಗೂ ಸಾಮಾಜಿಕ ಸಮಾನತೆಯತ್ತ ಹರಿಯುವಂತೆ ಮಾಡುವುದು. ಬಸವಣ್ಣನವರ ‘ ದಾಸೋಹ’ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ‘ಸಾಮಾಜಿಕ ಬದ್ಧತೆ’ಯ ಈ ತತ್ವಗಳು ಕೇವಲ ಇತಿಹಾಸದ ಪುಟಗಳಾಗದೆ,ಅವು ಇಂದಿನ ಪ್ರತಿಯೊಬ್ಬ ಪ್ರಜೆಯ ಹಾಗೂ ನಾಯಕನ ದೈನಂದಿನ ಜೀವನದ ಮಾರ್ಗದರ್ಶಿ ಸೂತ್ರಗಳಾಗಬೇಕು

ಸಮಾಜಕ್ಕೆ ಮರಳಿ ನೀಡುವುದರ ಶಕ್ತಿ:  ಸಮಾಜದ ಒಳಿತಿಗಾಗಿ ನೀಡಿದ ಹಣ ಮರಳಿ ಬಂದರೆ, ಅದನ್ನು ಮತ್ತೆ ಸಮಾಜದ ಕಲ್ಯಾಣಕ್ಕಾಗಿ (ದಾಸೋಹ) ವಿನಿಯೋಗಿಸಬಹುದು. ಒಂದು ವೇಳೆ ಅದು ಮರಳಿ ಬಾರದಿದ್ದರೆ, ಅದು ಈಗಾಗಲೇ ನೇರವಾಗಿ ಸಮಾಜದ ಏಳಿಗೆಗಾಗಿ ಬಳಕೆಯಾಗಿದೆ ಎಂದರ್ಥ. ಶರಣರ ದಾಸೋಹ ಕಲ್ಪನೆಯು ಕೇವಲ ದಾನವಲ್ಲ, ಅದು ಸಾಮಾಜಿಕ ಕರ್ತವ್ಯ ಹಾಗೂ ಹಕ್ಕುಗಳ ಸಮತೋಲನವಾಗಿದೆ.

 

Tags:
error: Content is protected !!