ಕಂಚುಗಾರನ ಕೊಪ್ಪಲು, ಕೆಂಪೇಗೌಡನ ಕೊಪ್ಪಲು, ಕಾಳೇಗೌಡನ ಕೊಪ್ಪಲು, ಕೆಂಚೇಗೌಡನ ಕೊಪ್ಪಲು, ಕೊಮ್ಮೇಗೌಡನ ಕೊಪ್ಪಲು ಹಾಗೂ ಕನ್ನೇಗೌಡನ ಕೊಪ್ಪಲು ಮುಂತಾದ ಪ್ರದೇಶಗಳನ್ನು ಸುಲಭಕ್ಕಾಗಿ ಕೆ.ಜಿ. ಕೊಪ್ಪಲು ಎಂದು ಸಂಕ್ಷಿಪ್ತವಾಗಿ ಕರೆಯುವ ರೂಢಿ ಬೆಳೆದಿದೆ. ಇದರಿಂದ ಆ ಪ್ರದೇಶಗಳ ಮೂಲ ಹೆಸರು, ಐತಿಹಾಸಿಕ ಹಿನ್ನೆಲೆ ಹಾಗೂ ಅವುಗಳ ಹಿಂದಿರುವ ಮಹನೀಯರ ನೆನಪು ಕ್ರಮೇಣ ಮರೆಯಾಗುವ ಅಪಾಯವಿದೆ.
ಊರು, ಕೇರಿ, ಬಡಾವಣೆ ಅಥವಾ ರಸ್ತೆಗೆ ವ್ಯಕ್ತಿಯ ಹೆಸರಿಡುವುದರ ಹಿಂದೆ ಅವರ ಸಾಧನೆ, ಸಾಮಾಜಿಕ ಕೊಡುಗೆ ಅಥವಾ ನೆನಪನ್ನು ಉಳಿಸುವ ಆಶಯವಿರುತ್ತದೆ. ಮಹಾಮಹಿಮರಾದ ಕನಕದಾಸರು, ಕಾಳಿದಾಸರು ಹಾಗೂ ಕೃಷ್ಣ ದೇವರಾಯರಂತಹ ಮಹನೀಯರ ಹೆಸರುಗಳನ್ನೂ ಸಂಕ್ಷಿಪ್ತ ರೂಪಗಳಿಗೆ ಸೀಮಿತಗೊಳಿಸುವ ಪ್ರವೃತ್ತಿ ಕಂಡುಬರುತ್ತಿದೆ. ‘ಕೆ.ಡಿ. ರಸ್ತೆ’, ‘ಕೆ.ಡಿ. ಸರ್ಕಲ್’ ಮುಂತಾದ ಹೆಸರುಗಳ ಬಳಕೆಯಲ್ಲಿಯೂ ಮೂಲ ಹೆಸರುಗಳ ಪರಿಚಯ ಮತ್ತು ಮಹತ್ವ ಮರೆಯಾಗದಂತೆ ಎಚ್ಚರ ವಹಿಸಬೇಕು.
ನಾನೂ ಈ ಹಿಂದೆ ಬಿ. ಗಣೇಶ್, ಕೆ.ಜಿ. ಕೊಪ್ಪಲು ಎಂದು ವಿಳಾಸ ಬರೆಯುತ್ತಿದ್ದೆ. ಆದರೆ ಇನ್ನು ಮುಂದೆ ಕನ್ನೇಗೌಡನ ಕೊಪ್ಪಲು ಎಂದೇ ಬರೆಯಲು ನಿರ್ಧರಿಸಿದ್ದೇನೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ನಾಮಫಲಕಗಳು, ವಿಳಾಸಗಳು ಮತ್ತು ಅಧಿಕೃತ ದಾಖಲೆಗಳಲ್ಲಿ ಸಾಧ್ಯವಾದ ಮೂಲ ಹೆಸರುಗಳನ್ನೇ ಬಳಸಲು ಮುಂದಾಗಬೇಕು.
– ಬಿ.ಗಣೇಶ್, ಮೈಸೂರು



