ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್ಕೌಂಟರ್ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಏಕೆಂದರೆ ಅರಣ್ಯಾಧಿಕಾರಿಗಳ ಹೇಳಿಕೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.
ಮೃತರ ಕುಟುಂಬದ ಸದಸ್ಯರ ಹೇಳಿಕೆಗಳಲ್ಲೂ ಗೊಂದಲ ಇದೆ. ಈ ಎಲ್ಲದಕ್ಕಿಂತ ಹೆಚ್ಚಾಗಿ ಪ್ರಕರಣದಲ್ಲಿ ಗಾಯಗೊಂಡು, ಚಿಕಿತ್ಸೆ ನಂತರ ಅಜ್ಞಾತ ಸ್ಥಳ ಸೇರಿರುವ ಮಹಿಮದಾಸ್ ಅವರ ನಡೆ, ನುಡಿ ಪ್ರಕರಣವನ್ನು ಗೊಂದಲದ ಗೂಡಾಗಿಸಿದೆ.
ಮಹಿಮದಾಸ್ ಅವರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಅರಣ್ಯ ಇಲಾಖೆಯಿಂದ ಸಾಕ್ಷಿಯಾಗುವಂತೆ ಒತ್ತಡ ಇದೆ ಎಂದು ಹೇಳಿರುವುದು ಪ್ರಕರಣದ ನಿಜಾಂಶವನ್ನು ಕತ್ತಲಲ್ಲಿ ಇಟ್ಟಂತಾಗಿದೆ. ಮಹಿಮದಾಸ್ ಅವರಿಗೆ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಅವರಿಗೆ ರಕ್ಷಣೆ ದೊರೆತರೆ ಬಹುಶಃ ಸತ್ಯ ಬಯಲಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪೊಲೀಸರು ಸೂಕ್ತ ಕ್ರಮವಹಿಸಬೇಕು.
-ಎಸ್.ಎಂ.ಲಾವಣ್ಯ, ಸರಸ್ವತಿಪುರಂ, ಮೈಸೂರು




