ಮಂಜು ಕೋಟೆ
ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ
ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು ಊರೊಳಗೆ ನುಗ್ಗುವುದನ್ನು ತಡೆಗಟ್ಟಲು ತಡೆಗಟ್ಟಲು ಅರಣ್ಯ ಇಲಾಖೆಯವರು ಸ್ಟೀಲ್ ರೋಪ್ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿಯನ್ನು ನಡೆಸುತ್ತಿದ್ದಾರೆ.
ಆನೆಗಳು, ಜಿಂಕೆ, ಕಾಡೆಮ್ಮೆ ಇನ್ನಿತರ ವನ್ಯ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಯಲು ರಾಜ್ಯದಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಅರಣ್ಯ ಇಲಾಖೆನಡೆಸಿದ್ದು, ಕೆಲವೊಂದು ಯಶಸ್ವಿಯಾದರೆ ಮತ್ತೆ ಕೆಲವು ವಿಫಲವಾಗಿವೆ. ಇದೀಗ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯಉದ್ಯಾನವನದ ವೀರನಹೊಸಹಳ್ಳಿ ವ್ಯಾಪ್ತಿಯಲ್ಲಿ ಮತ್ತೊಂದು ಹೊಸ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರಿನ ಹೊಸಹಳ್ಳಿಯಿಂದ ಬಸವರಾಜನಕಟ್ಟೆ ತನಕ ೩ ಕಿ.ಮೀ. ಸ್ಟೀಲ್ ರೋಪ್ ಬ್ಯಾರಿಕೇಡ್ ಕಾಮಗಾರಿಯನ್ನು ರಾಜ್ಯ ಸರ್ಕಾರದಅನುದಾನದಿಂದ ಅರಣ್ಯ ಇಲಾಖೆಯವರ ನೇತೃತ್ವದಲ್ಲಿ ನಿರ್ಮಿತಿ ಕೇಂದ್ರದವರು ನಡೆಸುತ್ತಿದ್ದಾರೆ.
ನಾಗರಹೊಳೆ ಕಾಡಂಚಿನಲ್ಲಿ ಈ ಹಿಂದೆಯೇ ರೈಲ್ವೆ ಬ್ಯಾರಿಕೇಡ್ ಮತ್ತು ಸೋಲಾರ್ ತಂತಿ ಬೇಲಿಗಳನ್ನು ಅಳವಡಿಸಲಾಗಿದ್ದರೂ ಆನೆಗಳು, ಇನ್ನಿತರ ಪ್ರಾಣಿಗಳು ಜಾಣ್ಮೆಯಿಂದ ರೈತರ ಜಮೀನುಗಳಿಗೆ ಮತ್ತು ನಾಡಿನತ್ತಬರುತ್ತಿರುವುದರಿಂದ ಇಲಾಖೆ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ತಮಿಳುನಾಡಿನ ಹೊಸೂರು ಭಾಗದಲ್ಲಿ ಈಗಾಗಲೇ ಇಂತಹ ಪ್ರಯೋಗ ಯಶಸ್ವಿ ಆಗಿರುವುದರಿಂದ ಕೋಟೆ ಭಾಗದಲ್ಲಿಯೂ ಇದೇ ಕಾಮಗಾರಿ ನಡೆಸಲಾಗುತ್ತಿದೆ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ನಡೆಸಲು ೧ ಕಿ.ಮೀ.ಗೆ ೧.೮೦ ಕೋಟಿ ರೂ. ದುಬಾರಿ ವೆಚ್ಚವಾಗಲಿದ್ದು, ಹಳಿಗಳ ಕೊರತೆಯೂ ಎದುರಾಗುತ್ತದೆ. ಆದರೆ ಸ್ಟೀಲ್ ರೋಪ್ ಬ್ಯಾರಿಕೇಡ್ ಅನ್ನು ೧ ಕಿ.ಮೀ.ಗೆ ೭೦ ಲಕ್ಷ ರೂ. ವೆಚ್ಚದಲ್ಲಿ ನಡೆಸಬಹುದು. ಜತೆಗೆ ಅಳವಡಿಕೆಗೆ ಬೇಕಾಗುವ ಸಮಯವೂ ಉಳಿಯುತ್ತದೆ. ಕಾಡಂಚಿನಲ್ಲಿ ಪ್ರತಿ ೧೫ ಮೀಟರ್ಗೆ ೧೧ ಅಡಿ ಎತ್ತರದ ಸ್ಟೀಲ್ ಕಂಬಗಳಿರುತ್ತವೆ. ಆ ಕಂಬಗಳ ನಡುವೆ ಒಂದೂವರೆ ಅಡಿಗೆ ೯ ರೋಪ್ ಹಾಕಲಾಗಿದೆ. ಅಡ್ಡಡ್ಡವೂ ರೋಪ್ ಅಳವಡಿಸಲಾಗಿದೆ.
೫ ಅಡಿಯ ಗುಂಡಿ ತೆಗೆದು ಅದಕ್ಕೆ ಕಾಂಕ್ರೀಟ್ ಹಾಕಿ, ಆ ಕಂಬಗಳನ್ನು ಭದ್ರವಾಗಿ ನೆಡಲಾಗಿದೆ. ತಮಿಳುನಾಡಿನಲ್ಲಿ ಆನೆಗಳು ಹಾಗೂ ಬ್ಯಾರಿಕೇಡ್ ಬಗ್ಗೆ ಅಧ್ಯಯನ ಮಾಡಿರುವ ವನ್ಯಜೀವಿ ಆಸಕ್ತರು, ಅರಣ್ಯ ಇಲಾಖೆಯವರು ಈ ಕಾಮಗಾರಿ ನಿರ್ವಹಣೆ ಮಾಡಿದ್ದಾರೆ. ಇದರ ಮೇಲೆ ಆನೆ ಹತ್ತಲು ಅಥವಾ ನುಸುಳಲು ಸಾಧ್ಯವಾಗುವುದಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ. ಅರಣ್ಯ ಇಲಾಖೆ ಈಗಾಗಲೇ ನಿರ್ಮಿಸಿರುವ ಕಂದಕ, ರೈಲ್ವೆ ಕಂಬಿ, ಸೋಲಾರ್ ಮುಂತಾದ ತಡೆಗಳನ್ನು ಆನೆಗಳು ಭೇದಿಸಿವೆ.
ಹೀಗಾಗಿ ಸ್ಟೀಲ್ ರೋಪ್ ಬ್ಯಾರಿಕೇಡ್ನ ಪ್ರಯೋಗಿಕ ಪರೀಕ್ಷೆಗಾಗಿ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಆನೆಯನ್ನು ಕರೆಸಿ, ಅದರಿಂದ ಸ್ಟೀಲ್ ರೋಪ್ ಬ್ಯಾರಿಕೇಡ್ ತಳ್ಳಿಸಲಾಗಿದೆ. ಆ ವೇಳೆ ನೂತನ ಬ್ಯಾರಿಕೇಡ್ ಸೂಕ್ತವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಟ್ಟಿನಲ್ಲಿ ಈ ಹೊಸ ಪ್ರಯೋಗದಿಂದ ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯ ಹೊಂದಿರುವ ಕೋಟೆ ತಾಲ್ಲೂಕಿನ ಕಾಡಂಚಿನ ಗ್ರಾಮದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಿ ರೈತರ ಬೆಳೆಗಳು ಹಾಗೂ ಮಾನವನ ಜೀವ ರಕ್ಷಣೆಯಾಗುವ ನಿರೀಕ್ಷೆ ಇದೆ.
” ಅರಣ್ಯ ಇಲಾಖೆಯವರು, ಪರಿಸರ ಪ್ರೇಮಿಗಳು, ರೈತರು ನಡೆಸಿರುವ ಈ ಹೊಸ ಪ್ರಯತ್ನದ ಕಾಮಗಾರಿಯಿಂದ ಕಾಡಿನಿಂದ ನಾಡಿಗೆ ಪ್ರಾಣಿಗಳು ಬಾರದಂತೆ ತಡೆಗಟ್ಟುವ ಕೆಲಸ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ವನ್ಯ ಪ್ರಾಣಿಗಳು ಬಾರದಿರುವುದು ತಿಳಿದುಬಂದಿದೆ.”
-ವಿನೋದ್ ಗೌಡ, ಅರಣ್ಯ ಅಧಿಕಾರಿ, ವೀರನಹೊಸಹಳ್ಳಿ ವಲಯ
” ಅರಣ್ಯ ಪ್ರದೇಶದ ಕಾಡಂಚಿನಲ್ಲಿ ಸ್ಟೀಲ್ ರೋಪ್ ಬ್ಯಾರಿಕೇಡ್ ಕಾಮಗಾರಿ ನಡೆದಿರುವುದು ಈ ಭಾಗದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದಕ್ಕೆ ಖರ್ಚು ಸಹ ಕಡಿಮೆಯಾಗುತ್ತದೆ. ಇದರ ಜೊತೆಗೆ ಮೆಶ್ ಅಳವಡಿಸಿದರೆ ಸಂಪೂರ್ಣವಾಗಿ ಸಣ್ಣಪುಟ್ಟ ವನ್ಯಜೀವಿಗಳು ಬರುವುದು ಕೂಡ ನಿಯಂತ್ರಣವಾಗಲಿದೆ.
-ಅಂಬರೀಶ್, ಮಾಲೀಕರು, ನೇಚರ್ ಫೆನ್ಸ್, ಕೋಟೆ




