Mysore
23
overcast clouds
Light
Dark

ಓದುಗರ ಪತ್ರ: ಸರ್ಕಾರಿ ಶಾಲೆಗಳ ಬಗ್ಗೆ ಅನಾದರ ಬೇಡ

ಸರ್ಕಾರಿ ಶಾಲೆಗಳು ಅದರಲ್ಲೂ ಸರ್ಕಾರಿ ವಸತಿ ಶಾಲೆಗಳೆಂದರೆ ಮೂಗುಮುರಿಯುವವರೇ ಹೆಚ್ಚು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಬಗ್ಗೆಯೂ ಸಾಮಾನ್ಯವಾಗಿ ಇಂತಹದೇ ಅಭಿಪ್ರಾಯಗಳು ಜನರ ಮನದಲ್ಲಿವೆ. ಇಂತಹ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಸರಿಯಾಗಿ ಇರುವುದಿಲ್ಲ. ಕೊಠಡಿಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇರುವುದಿಲ್ಲ. ಊಟದ ಗುಣ ಮಟ್ಟವೂ ಅಷ್ಟಕ್ಕಷ್ಟೆ ಎಂಬಂತಹ ನಿರ್ಲಕ್ಷ್ಯ ಇರುತ್ತದೆ.

ಇಂತಹ ಉಡಾಫೆಗಳಿಗೆ ಎದಿರೇಟು ನೀಡುವಂತೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ವಜ್ಜರಮಟ್ಟಿಯ ಅಂಕಿತಾ ಬಸಪ್ಪ ಕೊಣ್ಣೂರ ಅವರು ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೇ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆ ಹಿಪ್ಪರಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಎಂಬುದು ಗಮನಾರ್ಹ.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ಊಟ ವಸತಿ ಎಲ್ಲವೂ ಉಚಿತವಾಗಿ ಸಿಗುತ್ತವೆ. ಕೆಲವು ಕಡೆ ಹಾಸ್ಟೆಲ್‌ಗೆ ಸ್ವಂತ ಕಟ್ಟಡ ಇರದಿದ್ದರೂ, ಅಲ್ಲಿನ ಶಿಕ್ಷಕರು ಶ್ರಮ ವಹಿಸಿ ಮಕ್ಕಳಿಗೆ ಬೋಧನೆ ಮಾಡುತ್ತಾರೆ. ಅವರ ನಿರಂತರ ಶ್ರಮದಿಂದ ಪ್ರತಿ ವರ್ಷವೂ ರಾಜ್ಯದಲ್ಲಿರುವ ಬಹುತೇಕ ಎಲ್ಲ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳೂ ಒಳ್ಳೆಯ ಫಲಿತಾಂಶ ನೀಡುತ್ತ ಬಂದಿವೆ. ಸರ್ಕಾರಿ ಶಾಲೆಯ ಶಿಕ್ಷಣ ಬೇಡ ಎನ್ನುವ ಕಾಮಾಲೆ ಕಣ್ಣಿನವರು ಅಂಕಿತಾರ ಸಾಧನೆಯನ್ನು ಗಮನಿಸಬೇಕು. ಇನ್ನಾದರೂ ಸರ್ಕಾರಿ ಶಾಲೆಗಳ ಬಗ್ಗೆ ಅದರಲ್ಲಿಯೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಬಗ್ಗೆ ಹೊಂದಿರುವ ನಕಾರಾತ್ಮಕ ಧೋರಣೆ ಗಳಿಂದ ಹೊರಬಂದರೆ, ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತದೆ.

-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.