Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಪದವೀಧರರನ್ನೇ ಪರಿಗಣಿಸಿ

ಅರಣ್ಯ ಕಾಲೇಜಿನ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ; ಲಿಖಿತ ಭರವಸೆ ಸಿಗುವವರೆಗೂ ಹೋರಾಟದ ಎಚ್ಚರಿಕೆ 

ಮಡಿಕೇರಿ: ಅರಣ್ಯ ಇಲಾಖೆಯ ಉನ್ನತ ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಪದವೀಧರರನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ರಾಜ್ಯದ ೩ ಅರಣ್ಯ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದಿಂದ ಇನ್ನೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಮುಂದುವರಿಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.

ಪ್ರಸ್ತುತ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಓ) ಹುದ್ದೆಗಳನ್ನು ಬಡ್ತಿ ಆಧಾರದ ಮೇಲೆ ಶೇ.೫೦ರಷ್ಟು ಭರ್ತಿ ಮಾಡಲಾಗುತ್ತಿದೆ. ಇನ್ನುಳಿದ ಶೇ.೫೦ರಷ್ಟು ಹುದ್ದೆಗಳ ಪೈಕಿ ಅರ್ಧದಷ್ಟು ಮಾತ್ರ ಅರಣ್ಯ ಪದವೀಧರರಿಗೆ ಮೀಸಲಿಡಲಾಗಿದ್ದು, ಉಳಿದಂತೆ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಇದಲ್ಲದೇ ಕಳೆದ ೮ ವರ್ಷಗಳಿಂದ ಇಲಾಖೆಯಲ್ಲಿ ನೇಮಕಾತಿಯೇ ನಡೆದಿಲ್ಲ. ಹೀಗಾಗಿ ಅರಣ್ಯ ಶಾಸ್ತ್ರ ಪದವೀಧರರು ಇತ್ತ ಇಲಾಖೆಯಲ್ಲಿಯೂ ಕೆಲಸ ಸಿಗದೆ, ಬೇರೆ ಹುದ್ದೆಗಳಿಗೂ ಅರಣ್ಯ ಪದವಿ ಪ್ರಯೋಜನವಿಲ್ಲದಂತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಇಲಾಖೆಯ ಉನ್ನತ ಹುದ್ದೆಗಳಿಗೆ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳನ್ನೇ ಪರಿಗಣಿಸಬೇಕೆಂದು ಒತ್ತಾಯಿಸಿ ಅ.೧೦ರಿಂದ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೊಡಗಿನ ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ೧೫೦ ವಿದ್ಯಾರ್ಥಿಗಳಿದ್ದಾರೆ. ಶಿವಮೊಗ್ಗದ ಇರುವಕ್ಕಿ ಕಾಲೇಜಿನಲ್ಲಿ ೧೪೩ ವಿದ್ಯಾರ್ಥಿಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಾಲೇಜಿನಲ್ಲಿ ೧೬೦ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರೂ ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಟ್ವಿಟರ್ ಹಾಗೂ ಪತ್ರ ಚಳವಳಿಯ ಮೂಲಕವೂ ಹಲವು ಸಮಯದಿಂದ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗದ ಕಾರಣ ಅರ್ನಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇದೇ ವಿಚಾರವಾಗಿ ಈ ಹಿಂದೆಯೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಬಾರಿಯೂ ಸರ್ಕಾರ, ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಈ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನಷ್ಟೇ ಅಂದಿನಿಂದ ಇಂದಿನವರೆಗೆ ನೀಡುತ್ತಾ ಬಂದಿರುವ ಸರ್ಕಾರ ವಿದ್ಯಾರ್ಥಿಗಳ ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಲಿಲ್ಲ. ಹೀಗಾಗಿ ಈ ಬಾರಿ ಸರ್ಕಾರದಿಂದ ಬರವಣಿಗೆಯಲ್ಲಿ ಭರವಸೆ ಸಿಗುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.

ವಿದ್ಯಾರ್ಥಿಗಳ ಬೇಡಿಕೆಗಳೇನು?: 

ಅರಣ್ಯ ಇಲಾಖೆಯ ಎಲ್ಲ ಹುದ್ದೆಗಳಲ್ಲಿ (ಎಸಿಎಫ್, ಆರ್‌ಎಫ್‌ಓ, ಡಿಆರ್‌ಎಫ್‌ಒ) ಅರಣ್ಯ ಶಾಸ್ತ್ರ ಪದವಿಯನ್ನ ವಿದ್ಯಾರ್ಹತೆಯಾಗಿ ಪರಿಗಣಿಸಬೇಕು  ,. ಇತರ ವಿಭಾಗದ ಪದವೀಧರರಿಗೆ ಅರಣ್ಯ ಹುದ್ದೆಗಳಲ್ಲಿ ಅವಕಾಶ ನೀಡಬಾರದು, ೧೯೮೮ರ ಭಾರತೀಯ ಅರಣ್ಯ ಆಯೋಗದ ಶಿಫಾರಸ್ಸುಗಳನ್ನು ತಕ್ಷಣ ಜಾರಿಗೆ ತರಬೇಕು, ಅರಣ್ಯ ಶಿಕ್ಷಣದ ಗೌರವ ಮತ್ತು ತಾಂತ್ರಿಕತೆಯನ್ನು ಕಾಪಾಡಬೇಕು

” ಇದು ಕೇವಲ ಪ್ರತಿಭಟನೆಯಲ್ಲ, ಇದು ನಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ನಾವು ನಮ್ಮ ಹಕ್ಕಿಗಾಗಿ, ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ೪ ವರ್ಷಗಳ ಓದು, ಪ್ರಯೋಗಾಲಯದ ಬೆವರು, ಅರಣ್ಯ ಕ್ಷೇತ್ರದ ಅನುಭವ ಎಲ್ಲವೂ ಕೆಲಸದ ಭರವಸೆಯೂ ಇಲ್ಲದೇ ವ್ಯರ್ಥವಾಗದಿರಲಿ ಎಂಬುದು ನಮ್ಮ ಒತ್ತಾಯವಾಗಿದೆ.”

-ಜಿ.ಆರ್.ಸವ್ಯಶ್ರೀ, ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ

Tags:
error: Content is protected !!