ಅಮೆರಿಕದಲ್ಲೂ ಮೊಳಗುತ್ತಿರುವ ಕೋಟೆ ಹೆಸರು
ಮಂಜು ಕೋಟೆ
ಎಚ್. ಡಿ. ಕೋಟೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಲಹೆಗಾರರಾಗಿ ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆಯ ಕರ್ನಲ್ ನಟರಾಜ್ ಕೋಟೆ ಅವರು ನೇಮಕಗೊಂಡಿದ್ದಾರೆ.
ಪಟ್ಟಣದ ಎರಡನೇ ಮುಖ್ಯರಸ್ತೆಯ ಮಗ್ಗೆ ವಿಶ್ವೇಶ್ವರಯ್ಯ ಮತ್ತು ಸುಮಿತ್ರ ಅವರ ಮೊದಲನೇ ಪುತ್ರ ನಟರಾಜ್, ಇವರು ಅಮೆರಿಕ ದೇಶದ ಅಧ್ಯಕ್ಷರಿಗೆ ಸಲಹೆಗಾರರಾಗಿ ನೇಮಕವಾಗಿರುವುದು ತಾಲ್ಲೂಕು ಮತ್ತು ಕರ್ನಾಟಕದ ಜನರಲ್ಲಿ ಸಂತಸ ಮೂಡಿಸಿದೆ. ನಟರಾಜ್ ಅವರು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಮಾಡಿ, ನಂತರ ಮೈಸೂರು ಮತ್ತು ಬೆಂಗಳೂರಿನಲ್ಲಿ ವಿವಿಧೆಡೆ ವಿದ್ಯಾಭ್ಯಾಸ ಮಾಡಿ ೩೦ ವರ್ಷಗಳ ಹಿಂದೆ ಅಮೆರಿಕದಲ್ಲಿ ಖಾಸಗಿ ಕೆಲಸ ಮಾಡುತ್ತಾ ಹೋಟೆಲ್ ಉದ್ಯಮ ಪ್ರಾರಂಭಿಸಿ, ಅಲ್ಲಿ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಇವರ ಕಾರ್ಯವೈಖರಿಯನ್ನು ಗುರುತಿಸಿದ ಅಮೆರಿಕ ಸರ್ಕಾರ ಕೆಲ ವರ್ಷಗಳ ಹಿಂದೆ ಕರ್ನಲ್ ಪ್ರಶಸ್ತಿಯನ್ನು ನೀಡಿತ್ತು. ಕಳೆದ ಬಾರಿ ಅಮೆರಿಕದಲ್ಲಿ ಟ್ರಂಪ್ ಅಧ್ಯಕ್ಷರಾಗಿ ಆಡಳಿತ ನಡೆಸಿದ ಸಂದರ್ಭದಲ್ಲಿ ಸಲಹೆಗಾರರಾಗಿ ನೇಮಕವಾಗಿದ್ದರು. ಈಗ ಮತ್ತೆ ಟ್ರಂಪ್ ಅವರು ಅಧಿಕಾರಕ್ಕೆ ಬಂದಿದ್ದು, ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ನಟರಾಜ್ ಅವರಿಗೆ ಸಚಿವ ಸಂಪುಟ ದರ್ಜೆಯ ಹುದ್ದೆ ನೀಡಿ ಸಲಹೆ ಗಾರರನ್ನಾಗಿ ನೇಮಕ ಮಾಡಿದ್ದಾರೆ.
ಚಿಕಾಗೋ ಸಮೀಪ ಕುಟುಂಬ ಸಮೇತ ಉದ್ಯಮ ನಡೆಸುತ್ತಿರುವ ನಟರಾಜ್, ವರ್ಷಕ್ಕೆ ಎರಡು ತಿಂಗಳು ಬೆಂಗಳೂರು ಮತ್ತು ಕೋಟೆ ಪಟ್ಟಣದ ಮನೆಯಲ್ಲಿ ವಾಸ್ತವ್ಯ ಹೂಡಿ ಕುಟುಂಬಸ್ಥರೊಡನೆ ಮತ್ತು ಸ್ನೇಹಿತರೊಡನೆ ಕಾಲ ಕಳೆಯುತ್ತಾರೆ. ಇಲ್ಲಿನ ಸಂಸ್ಕ ತಿ, ಭಾಷೆ, ನಾಡು, ನುಡಿಗೆ ಹೆಚ್ಚು ಒತ್ತು ನೀಡುತ್ತಾರೆ.
ಅಮೆರಿಕದ ಅಧ್ಯಕ್ಷರು ಭಾರತೀಯರಿಗೆ ಸ್ಥಾನಮಾನ ಕೊಡಬೇಕೆಂಬ ನಿಟ್ಟಿನಲ್ಲಿ ನನ್ನನ್ನು ಮತ್ತೊಮ್ಮೆ ಅವರ ಸಲಹೆಗಾರರನ್ನಾಗಿ ನೇಮಕ ಮಾಡಿ ಕೊಂಡಿರುವುದು ಸಂತಸ ಮೂಡಿಸಿದೆ. ಡೊನಾಲ್ಡ್ ಟ್ರಂಪ್ ಅವರು ದೇಶದ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಬೇಕೆಂಬ ಆಲೋಚನೆ ಮಾಡಿ ಕಾರ್ಯೋನ್ಮುಖರಾಗುತ್ತಾರೆ. ವಿದೇಶದಲ್ಲಿಯೂ ನಮ್ಮ ‘ಕೋಟೆ’ ಹೆಸರು ಚಾಲನೆ ಯಲ್ಲಿ ಇರಬೇಕೆಂಬ ಉದ್ದೇಶದಿಂದ ಅಲ್ಲಿನ ದಾಖಲಾತಿಗಳಲ್ಲೂ ಕರ್ನಲ್ ನಟರಾಜ್ ಕೋಟೆ ಎಂಬ ಹೆಸರು ಉಳಿಸಿಕೊಂಡಿದ್ದೇನೆ. ಅಮೆರಿಕದ ಅಧ್ಯಕ್ಷರ ಕಚೇರಿಯಲ್ಲಿ ಹಾಗೂ ಇನ್ನಿತರ ಭಾಗದ ಪ್ರಮುಖರು ಸಹ ನನ್ನನ್ನು ಕೋಟೆ ಎಂದೇ ಕರೆಯುತ್ತಾರೆ. ಆಗ ನಮ್ಮ ಊರಿನ ಹೆಸರಿನ ಬಗ್ಗೆ ಹೆಮ್ಮೆ ಆಗುತ್ತದೆ. -ಕರ್ನಲ್ ನಟರಾಜ್ ಕೋಟೆ, ಅಮೆರಿಕ ಅಧ್ಯಕ್ಷ ಟ್ರಂಪ್ ಸಲಹೆಗಾರರು.