ಮಂಜು ಕೋಟೆ
ಎಚ್.ಡಿ.ಕೋಟೆ: ನಾಯಕ ಸಮುದಾಯದ ಮುಖಂಡರಾದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಆ ಸ್ಥಾನ ಅದೇ ಸಮುದಾಯದವರಾದ, ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಲಭಿಸುತ್ತದೆ ಎಂಬ ಆಶಾಭಾವನೆ ಜನರಲ್ಲಿ ಮೂಡಿದೆ.
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷದವರು ನಡೆಸುತ್ತಿರುವ ಹೋರಾಟದಿಂದ ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರುಸು ಉಂಟಾಗಬಾರದೆಂದು ತಮ್ಮ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸಿದ್ದು, ಈಗ ಅದೇ ಸಮುದಾಯದ ಮೈಸೂರು ಪ್ರಾಂತ್ಯದ ಏಕೈಕ ಶಾಸಕ ಅನಿಲ್ ಚಿಕ್ಕಮಾದುಗೆ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರು, ಮುಖಂಡರು, ಕ್ಷೇತ್ರದ ಜನತೆ ಕಾಯುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲೇ ಅನಿಲ್ ಅವರಿಗೆ ಸಚಿವ ಸ್ಥಾನ ಲಭಿಸಬೇಕಾಗಿತ್ತು. ಆದರೆ, ಕೊನೆಗಳಿಗೆಯಲ್ಲಿ ಕೈತಪ್ಪಿದ್ದ ಪರಿಣಾಮ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಸ್ಥಾನವನ್ನು ನೀಡಲಾಗಿತ್ತು. ನಂತರ ಡಿಕೆಶಿ ಮುಖ್ಯಮಂತ್ರಿಯಾದ ಬಳಿಕ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಉತ್ತರ ಕರ್ನಾಟಕ ಭಾಗದ ನಾಯಕ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ದೊರಕಿತು. ಈಗ ಆ ಭಾಗದ ನಾಯಕ ಸಮುದಾಯದ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ಅದೇ ಸಮುದಾಯದ ಮೈಸೂರು ಭಾಗದ ಯುವ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿದರೆ, ಜಿಲ್ಲೆಗೆ ಪ್ರಾತಿನಿಧ್ಯ ದೊರೆತು, ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ದೊರಕಲಿದೆ. ನಾಯಕ ಸಮುದಾಯಕ್ಕೂ ಶಕ್ತಿ ಸಿಕ್ಕಂತಾಗುತ್ತದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.
” ಮೈಸೂರು ಪ್ರಾಂತ್ಯದಲ್ಲಿ ಏಕೈಕ ನಾಯಕ ಸಮುದಾಯದ, ಎರಡನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲ್ಲೂಕು ಮತ್ತು ಸಮುದಾಯದ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಭಾಗಕ್ಕೆ ಮತ್ತು ಸಮುದಾಯಕ್ಕೆ ಆದ್ಯತೆ ಕೊಡುತ್ತಾರೆ ನಂಬಿಕೆ ಇದೆ.”
-ಅನಿಲ್ ಚಿಕ್ಕಮಾದು, ಶಾಸಕರು



