ಎಚ್.ಎಸ್.ದಿನೇಶ್‌ಕುಮಾರ್
ಮೈಸೂರು: ಎರಡು ದಿನಗಳ ಹಿಂದೆ ಸುರಿದ ಮಳೆಗೆ ಮೈಸೂರು ನಗರದ ಹಲವೆಡೆ ಮರಉರುಳಿರುವುದೂ ಸೇರಿದಂತೆ ಅನೇಕ ಅನಾಹುತಗಳು ನಡೆದಿದೆ. ಇನ್ನೂ ಕೂಡ ಜೋರು ಗಾಳಿಗೆ ಬಿದ್ದ ಮರಗಳ ಕೊಂಬೆಗಳನ್ನು ಕೆಲವೆಡೆ ತೆರವುಗೊಳಿಸಲು ಸಾಧ್ಯವಾಗಿಲ್ಲ. ಈ ಎಲ್ಲದರ ನಡುವೆಯೂ ನಗರಪಾಲಿಕೆಯು ಮಳೆಯಿಂದ ಆಗಬಹುದಾದ ಅನಾಹುತಗಳನ್ನು ಎದುರಿಸಲು ಸಿದ್ಧತೆ ಆರಂಭಿಸಿದೆ.
ಮಳೆಗಾಲ ಆರಂಭವಾದ ಕೂಡಲೇ ಕೆಲವು ಬಡಾವಣೆಗಳು, ರೆವೆನ್ಯೂ ಬಡಾವಣೆಗಳು, ತಗ್ಗು ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುತ್ತಿರುವವರಿಗೆ ಆತಂಕ ಎದುರಾಗುತ್ತದೆ. ಇದು ಪ್ರತಿವರ್ಷ ಇವರುಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಮಳೆ ಬಂತೆಂದರೆ ಅದರೊಟ್ಟಿಗೆ ಜೋರು ಗಾಳಿ ಕೂಡ ಸಾಮಾನ್ಯ. ಇದರಿಂದಾಗಿ ಟೊಳ್ಳು ಹಾಗೂ ಹಳೆಯ ಮರಗಳು ಮುರಿದು ಬೀಳುತ್ತವೆ. ಇದರಿಂದ ಸಾರ್ವಜನಿಕರ ಆಸ್ತಿ ಸಾಕಷ್ಟು ನಷ್ಟವಾಗಿರುವ ಉದಾಹರಣೆಗಳೂ ಇವೆ. ಹಳೆಯ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರ ಒತ್ತಾಯ ಕೂಡ ಇದೆ
ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಇರುವ ಹಳೆಯ ಮರಗಳು ಹಾಗೂ ರಸ್ತೆಗಳಿಗೆ ಚಾಚಿಕೊಂಡಿರುವ ದೊಡ್ಡ ಹಾಗೂ ಸಣ್ಣಪುಟ್ಟ ಕೊಂಬೆಗಳನ್ನು ತೆರವುಗೊಳಿಸಲು ನಗರಪಾಲಿಕೆ ಸನ್ನದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಲಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ. ಇನ್ನು ಜೋರು ಮಳೆ ಬಂತೆಂದರೆ ಚರಂಡಿ ಹಾಗೂ ಒಳ ಚರಂಡಿಗಳಲ್ಲಿ ನೀರು ಉಕ್ಕಲು ಆರಂಭಿಸುತ್ತದೆ. ಇದು ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಹೀಗಾಗಿ ನಗರದಾದ್ಯಂತ ಇರುವ ಚರಂಡಿ ಹಾಗೂ ರಾಜ ಕಾಲುವೆಗಳಲ್ಲಿ ತುಂಬಿರುವ ಕಸವನ್ನು ತೆರವುಗೊಳಿಸಲು ನಗರಪಾಲಿಕೆ ಆಯುಕ್ತರು ಸೂಚನೆ ನೀಡಿದ್ದು, ಕಳೆದ ಒಂದು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಇನ್ನು ೧೦ರಿಂದ ೧೨ ದಿನಗಳೊಳಗೆ ಈ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಬೇಕಾಗುತ್ತದೆ.
೫೦ ಕಿ.ಮೀ. ಸ್ವಚ್ಛತೆ: ಮಳೆ ಆದಾಗ ಮೋರಿಗಳಲ್ಲಿ ನೀರು ಸರಾಗವಾಗಿ ಹರಿಯಬೇಕು ಎಂಬ ಉದ್ದೇಶದಿಂದ ನಗರದಾದ್ಯಂತ ಮೋರಿಗಳ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ. ನಗರದಲ್ಲಿ ಒಟ್ಟು ೧೦೧ ಕಿ.ಮೀ. ಮೋರಿ ಇದ್ದು, ಈಗಾಗಲೇ ಸುಮಾರು ೫೦ ಕಿ.ಮೀ. ಮೋರಿಗಳ ಸ್ವಚ್ಛತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ ೫೦ ಕಿ.ಮೀ. ಮೋರಿಗಳನ್ನು ೧೦ ದಿನಗಳಲ್ಲಿ ಸ್ವಚ್ಛಗೊಳಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಒಳ ಚರಂಡಿ ಕಾಮಗಾರಿಗಳು ಆರಂಭವಾಗಿದ್ದಲ್ಲಿ ಕೂಡಲೇ ಅವನ್ನು ಪೂರ್ಣಗಳಿಸುವಂತೆ ತಾಕೀತು ಮಾಡಲಾಗಿದೆ.
ಕಾಲರ, ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ: ಮಳೆಯ ವೇಳೆ ಕಾಲರ ಸೇರಿದಂತೆ ಸಾಕಷ್ಟು ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತವೆ. ಹೀಗಾಗಿ ನಗರಪಾಲಿಕೆ ಪರಿಸರ ಇಂಜಿನಿಯರ್ ಮೃತ್ಯುಂಜಯ ಅವರು ಆಟೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಜನರು ತಮ್ಮ ಮೆನಯ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಹೋಟೆಲ್‌ಗಳಲ್ಲಿ ಹಾಗೂ ಚಾಟ್ ಸೆಂಟರ್‌ಗಳಲ್ಲಿ ಜನರಿಗೆ ಕುಡಿಯಲು ಬಿಸಿ ನೀರನ್ನು ಸರಬರಾಜು ಮಾಡಬೇಕು. ಜನರು ಕೂಡ ಮನೆಗಳಲ್ಲಿ ಬಿಸಿ ನೀರಿನ ಬಳಕೆ ಮಾಡಬೇಕು ಎಂದು ಆಟೋ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.
ಅರೆಬರೆ ಕಾಮಗಾರಿ ಪೂರ್ಣ: ನಗರದಾದ್ಯಂತ ಅಪೂರ್ಣವಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಲು ಈಗಾಗಲೇ ವಲಯ ಕಚೇರಿ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ರಾಮಕೃಷ್ಣ ನಗರದ ದಕ್ಷಿಣೇಶ್ವರ ರಸ್ತೆ (ಇ ಅಂಡ್ ಎಫ್ ಬ್ಲಾಕ್), ನಾರಾಯಣ ಶಾಸಿ ರಸ್ತೆ ಮುಂತಾದ ಕಡೆ ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಆದಷ್ಟು ಶೀಘ್ರ ಪುರ್ಣಗೊಳ್ಳಲಿವೆ ಎಂದು ಹೇಳಲಾಗಿದೆ.
ಗುಂಡಿ ಮುಚ್ಚುವುದು ಅಬಾಧಿತ: ನಗರದಾದ್ಯಂತ ಗುಂಡಿ ಮುಚ್ಚುವ ಕಾಮಗಾರಿಗಾಗಿ ೨ ಕೋಟಿ ರೂ. ಮೀಸಲಿಡಲಾಗಿದೆ. ಗುಂಡಿ ಮುಚ್ಚುವ ಕಾಮಗಾರಿ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ, ಮಳೆಯ ಸಂದರ್ಭದಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
” ಮಳೆಯ ಅನಾಹುತಗಳನ್ನು ಎದುರಿಸಲು ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ. ಚರಂಡಿಯಲ್ಲಿ ಸಿಲುಕಿರುವ ಕಸ ತೆರವು, ಹಾಳಾದ ಮರ ಹಾಗೂ ಕೊಂಬೆಗಳ ಟ್ರಿಮ್, ಒಳ ಚರಂಡಿ ಕಾಮಗಾರಿಗಳಿಗೆ ವೇಗ… ಹೀಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮಳೆಗೆ ಸಂಬಂಧಿಸಿದಂತೆ ದೂರು ಬಂದ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಹಾರ ಒದಗಿಸಲಿದ್ದಾರೆ.”
-ಮಂಜುನಾಥ್, ಅಧಿಕ್ಷಕ ಅಭಿಯಂತರರು, ನಗರಪಾಲಿಕೆ
ಸೆಸ್ಕ್ ಸನ್ನದ್ಧ:
ಮಳೆಯ ಅನಾಹುತಗಳನ್ನು ಅಸಮರ್ಥವಾಗಿ ಎದುರಿಸಲು ಸೆಸ್ಕ್ ಸಿದ್ಧತೆ ಮಾಡಕೊಂಡಿದೆ. ನಗರದ ಎಂಟು ಸಬ್ ಡಿವಿಜನ್‌ನಗಳ ಒಟ್ಟು ೧೬ ವಾಹನಗಳನ್ನು ಸನ್ನದ್ಧವಾಗಿಡಲಾಗಿದೆ. ವಾಹನದಲ್ಲಿ ವಿದ್ಯುತ್ ಕಂಬ ಬಿದ್ದಲ್ಲಿ, ಸಂಪರ್ಕ ಕಡಿತವಾದಲ್ಲಿ, ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದಲ್ಲಿ ತಕ್ಷಣ ತೆರವುಗೊಳಿಸಲು ಬೇಕಾದ ಅಗತ್ಯ ಸಾಧನಗಳು ಇರಲಿವೆ. ಪ್ರತಿ ವಾಹನಕ್ಕೂ ನಾಲ್ವರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು ದಿನದ ೨೪ ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣವೇ ೧೯೧೨ ಸಂಖ್ಯೆಗೆ ಮಾಹಿತಿ ನೀಡಬಹುದು ಎಂದು ಸೆಸ್ಕ್ ತಾಂತ್ರಿಕ ವಿಭಾಗದ ನಿರ್ದೇಶಕಿ ಶರಣಮ್ಮ ತಿಳಿಸಿದ್ದಾರೆ.
” ನಗರಪಾಲಿಕೆಯಲ್ಲಿ ೩ ಅಭಯ ತಂಡಗಳಿವೆ. ಪ್ರತೀ ತಂಡದಲ್ಲಿ ನಾಲ್ಕು ಮಂದಿ ಸಿಬ್ಬಂದಿ ಇದ್ದಾರೆ. ಆದರೆ, ಮೈಸೂರಿನಂತಹ ಬೃಹತ್ ನಗರಕ್ಕೆ ಈ ಸಿಬ್ಬಂದಿ ಸಾಲುವುದಿಲ್ಲ. ಹೀಗಾಗಿ ಮಳೆಯ ಸಂದರ್ಭದಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಇನ್ನು ೯ ಜೆಸಿಬಿ, ಎರಡು ದೊಡ್ಡ ಎಸ್ಕವೇಟರ್, ೩ ಚಿಕ್ಕ ಎಸ್ಕವೇಟರ್‌ಗಳನ್ನು ಮೋರಿಗಳ ಸ್ವಚ್ಛತೆಗಾಗಿ ಬಳಸಲಾಗುತ್ತದೆ.”
-ಮೃತ್ಯುಂಜಯ, ಪರಿಸರ ಇಂಜಿನಿಯರ್




