Mysore
27
haze

Social Media

ಮಂಗಳವಾರ, 17 ನವೆಂಬರ್ 2026
Light
Dark

ಓದುಗರ ಪತ್ರ: ನೇಮಕಾತಿ ಪರೀಕ್ಷೆ: ಕನ್ನಡ- ಇಂಗ್ಲಿಷ್‌ಗೆ ಸಮಾನ ಅಂಕ ಏಕೆ?

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೆಲವೇ ತಿಂಗಳ ಹಿಂದೆ ಹೊರಡಿಸಿದ ಕರಡು ನಿಯಮಗಳಲ್ಲಿ ಗ್ರೂಪ್ ಸಿ ವೃಂದದ ರಾಜ್ಯ ಸರ್ಕಾರಿ ಹುದ್ದೆಗಳ ಪರೀಕ್ಷೆಯಲ್ಲಿ ತಂದ ನಿಯಮವು ಚಿಂತೆಗೀಡಾಗುವಂತೆ ಮಾಡಿದೆ.

ಕೆಇಎ ಅಥವಾ ಕೆಪಿಎಸ್‌ಸಿ ನಡೆಸುವ ಈ ನೇಮಕಾತಿ ಪರೀಕ್ಷೆಗಳಲ್ಲಿ ಪತ್ರಿಕೆ -೨ ೧೦೦ ಅಂಕಗಳನ್ನು ಹೊಂದಿದ್ದು ಸಂವಹನ ಭಾಷಾ ಪರೀಕ್ಷೆ ಆಗಿದೆ. ಅಭ್ಯರ್ಥಿಗಳ ಭಾಷಾ ಕೌಶಲ ಮತ್ತು ಕಂಪ್ಯೂಟರ್ ಜ್ಞಾನವನ್ನು ಪರೀಕ್ಷಿಸುವ ಪ್ರಮುಖ ವಸ್ತುನಿಷ್ಠ ಪತ್ರಿಕೆ ಇದಾಗಿದೆ.

ಸದ್ಯ,ಗ್ರೂಪ್ ಸಿ ಪರೀಕ್ಷಾ ಪದ್ಧತಿಯ ಸಂವಹನ ಪತ್ರಿಕೆ ೧೦೦ ಅಂಕಗಳಲ್ಲಿ ಕನ್ನಡ ವಿಷಯದ ಪ್ರಶ್ನೋತ್ತರಗಳು ೩೫, ಇಂಗ್ಲಿಷ್ ೩೫ ಹಾಗೂ ಕಂಪ್ಯೂಟರ್ ಜ್ಞಾನ ೩೦ ಅಂಕಗಳನ್ನು ನಿಗದಿಪಡಿಸಲಾಗಿದೆ. ಕನ್ನಡ ನೆಲದಲ್ಲೇ ಕನ್ನಡ-ಇಂಗ್ಲಿಷ್‌ಗೆ ಸಮಾನ ಅಂಕಗಳ ಅಗತ್ಯವಿದೆಯೇ? ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗೆ ಇಂಗ್ಲಿಷ್‌ನಲ್ಲಿ೩೫ ಅಂಕಗಳಿಸುವುದು ಸ್ವಲ್ಪ ‘ಭಾರ’ವೆನಿಸುತ್ತದೆ. ಇದು ನೇರವಾಗಿ ಅವರ ಆಯ್ಕೆಯ ಮೇಲೆ ಪರಿಣಾಮ ಬೀರುತ್ತದೆ. ಕಲಾ ಪದವಿಯ ಅಭ್ಯರ್ಥಿಗಳಿಗಂತೂ ಈ ನಿಯಮ ನೌಕರಿ ಗಿಟ್ಟಿಸಲು ತ್ರಾಸವಾಗುತ್ತದೆ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಭಾಷೆಗೆ ಮೊದಲ ಆದ್ಯತೆ ಇರಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ-ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಎಷ್ಟೇ ಮುಂದುವರೆದಿದ್ದರೂ ಪರೀಕ್ಷೆಗಳಲ್ಲಿ ಮಾತೃಭಾಷೆ ಯನ್ನು ಎಂದಿಗೂ ಕಡೆಗಣಿಸಬಾರದು.

ಮುಂಬರುವ ಎಫ್ಡಿಎ ಹಾಗೂ ಎಸ್‌ಡಿಎ ಪರೀಕ್ಷೆಗಳಲ್ಲಿ ಸಂವಹನ ಪತ್ರಿಕೆಯಲ್ಲಿ ಕನ್ನಡ ಭಾಗಕ್ಕೆ ೫೦ ಅಂಕಗಳು ಇಂಗ್ಲಿಷ್ ಭಾಗಕ್ಕೆ ೨೫ ಅಂಕಗಳು ಮತ್ತು ಕಂಪ್ಯೂಟರ್ ಜ್ಞಾನ ಭಾಗಕ್ಕೆ ೨೫ ಅಂಕ ನಿಗದಿಪಡಿಸಿ. ಇದು ನಮ್ಮ ಮಾತೃಭಾಷೆಗೆ ಸಿಗಬೇಕಾದ ನ್ಯಾಯಯುತ ಆದ್ಯತೆ. ಕನ್ನಡವನ್ನು ಕಲಿತವನಿಗೆ ಕನ್ನಡ ನಾಡಿನಲ್ಲಿ ಕೆಲಸ ಸಿಗಬೇಕು. ಸರ್ಕಾರ ಕೂಡಲೇ ಕರಡು ನಿಯಮವನ್ನು ತಿದ್ದುಪಡಿ ಮಾಡಲಿ. ಕನ್ನಡವನ್ನು ಉಳಿಸುವುದು ಅಂದರೆ ಕನ್ನಡಿಗರ ಭವಿಷ್ಯವನ್ನು ಉಳಿಸಿದಂತೆ.

-ಅನಿಲ್ ಕುಮಾರ್, ನಂಜನಗೂಡು

Tags:
error: Content is protected !!