ಕೆ.ಬಿ.ರಮೇಶನಾಯಕ
ವರುಣನ ಸಿಂಚನದ ನಡುವೆ ವಿಜಯದಶಮಿ ಮೆರವಣಿಗೆ
ಮಳೆಯಲ್ಲೇ ಜಾನಪದ, ಕಲಾತಂಡಗಳ ನೃತ್ಯ ವೈಭವ
ಪುಷ್ಪಾರ್ಚನೆಯಿಂದ ದೂರ ಉಳಿದ ಯದುವೀರ್, ಸಿಜೆ
ಚಿನ್ನದ ಅಂಬಾರಿ ಹೊತ್ತು ಶಾಂತ ಚಿತ್ತದಿಂದ ಸಾಗಿದ ಅಭಿಮನ್ಯು
ದಸರಾ ವೈಭವಕ್ಕೆ ಸಾಕ್ಷಿಯಾದ ಲಕ್ಷಾಂತರ ಮಂದಿ
ಸ್ತಬ್ಧಚಿತ್ರಗಳು:51
ಕಲಾತಂಡಗಳು 120
ಕಲಾವಿದರು:1600
ಆನೆಗಳು:09
ಕುದುರೆಗಳು:31
ಪೊಲೀಸರು 5,500
ಮೈಸೂರು: ಭಾರತೀಯ ಪರಂಪರೆಯ ಸಂಕೇತ ಹಾಗೂ ಜಗತ್ತಿನ ಅತಿದೊಡ್ಡ ಉತ್ಸವಗಳಲ್ಲಿ ಒಂದಾದ ಇತಿಹಾಸ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ ಮೆರವಣಿಗೆಯನ್ನು ಲಕ್ಷಾಂತರ ಮಂದಿ ಸಾಕ್ಷೀಕರಿಸಿದರು.
ಮೋಡ ಮುಸುಕಿದ ಇಳಿ ಸಂಜೆಯ ತಿಳಿಮುಗಿಲ ತಂಪು ವಾತಾವರಣದ ನಡುವೆ ಶನಿವಾರ ಸಂಜೆ 5.02 ಗಂಟೆಗೆ ಸರಿಯಾಗಿ ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ ಕೈಮುಗಿದು ಜಂಬೂಸವಾರಿಗೆ
ಚಾಲನೆ ನೀಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಡಿಸಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಜರಿದ್ದು ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಜನತೆ ಚಾಮುಂಡೇಶ್ವರಿಗೆ ಜೈಕಾರದ ಘೋಷಣೆಗಳನ್ನು ಮೊಳಗಿಸಿದರು.
ನಂತರ ಜಂಬೂಸವಾರಿ ರಾಜಮಾರ್ಗವನ್ನು ಪ್ರವೇಶಿಸಿ ದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮೆರವಣಿಗೆ ಸಾಗುವ ಸುಮಾರು 4 ಕಿ.ಮೀ. ಮಾರ್ಗದಲ್ಲಿ ಮಳೆಯನ್ನೂ ಲೆಕ್ಕಿಸದೆ ನೆರೆದಿದ್ದ ಲಕ್ಷಾಂತರ ಜನರು ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು.
ಸಂಜೆ ಆರೂವರೆಗೆ ವಿದ್ಯುತ್ ದೀಪಗಳು ಬೆಳಗುತ್ತಿದ್ದಂತೆ ಅಂಬಾರಿ ಹೊತ್ತ ಅಭಿಮನ್ಯು, ಕುಮ್ಮಿ ಆನೆಗಳಾದ ಹಿರಣ್ಯ ಮತ್ತು ಲಕ್ಷ್ಮಿಯೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದವು. ಮಧ್ಯಾಹ್ನ 2.20ಕ್ಕೆ ಅರಮನೆ ಆವರಣದಿಂದ ನಿಶಾನೆ ಆನೆ ಧನಂಜಯ ನೇತೃತ್ವದಲ್ಲಿ ಸ್ತಬ್ಧಚಿತ್ರ, ಕಲಾತಂಡಗಳ ಮೆರವಣಿಗೆ ಆರಂಭವಾಯಿತು. 51 ಸ್ತಬ್ಧಚಿತ್ರಗಳು, 120 ಕಲಾತಂಡಗಳು ಹಾಗೂ 1,600ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು. ಕಾಡಿನಿಂದ ಅರಮನೆಗೆ 14 ಆನೆಗಳನ್ನು ಕರೆತಂದಿದ್ದರೂ ಒಂಬತ್ತು ಆನೆಗಳು ಮಾತ್ರ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದವು.
ನೆತ್ತಿಯ ಮೇಲೆ ಸೂರ್ಯನ ತಾಪಕ್ಕೆ ಜನರು ಬೆವರಿಳಿ ದರೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಜಾಗ ಹಿಡಿದುಕೊಂಡಿದ್ದರು. ಐರಾವತ ಬಸ್‌ನಲ್ಲಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಡಳಿತ ದಿಂದ ಸಾಂಪ್ರದಾಯಿಕವಾಗಿ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು.
ನಂತರ, ಜೋಡಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಕಲಾ ತಂಡಗಳ ಮೆರವಣಿಗೆ ಶುರುವಾಯಿತು.
ನಂತರ, ತೆರೆದ ವಾಹನವನ್ನೇರಿದ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ಹಾಕಲಾಗಿದ್ದ ವಿಶೇಷ ವೇದಿಕೆವರೆಗೆ ನೆರೆದಿದ್ದ ಸಭಿಕರತ್ತ ಕೈ ಬೀಸುತ್ತಾ ಬಂದು ಆಸೀನರಾದರು. ಬಳಿಕ ಮೆರವಣಿಗೆ ಆರಂಭ ವಾಯಿತು. ನಿಶಾನೆ, ನೌಪತ್ ಆನೆಗಳು, ಸಾಲಾನೆಗಳು ಮುಂದೆ ಸಾಗುತ್ತಿದ್ದಂತೆ ಜಾನಪದ ಕಲಾವಿದರು ಗಣ್ಯರ ಎದುರು ನೃತ್ಯ ಪ್ರದರ್ಶಿಸಿದರು. ಈ ವೇಳೆ ಮೆಲ್ಲನೆ ಮಳೆ ಹನಿಯಲಾರಂಭಿಸಿತು. ನಂತರ ಜೋರಾಗಿ ಮಳೆ ಸುರಿಯಲಾಯಿತಾದರೂ ಕಲಾವಿದರು ನೆನೆಯುತ್ತಲೇ ತಮ್ಮ ಕಲೆಗಳನ್ನು ಪ್ರದರ್ಶಿಸುವ ಮೂಲಕ ನೆರೆದವರನ್ನು ರಂಜಿಸಿದರು.
ಸುಮಾರು ಮಧ್ಯಾಹ್ನ 3.10ರವರೆಗೆ ಮಳೆ ಸುರಿದರೂ ಮೆರವಣಿಗೆಗೆ ಯಾವುದೇ ಅಡ್ಡಿಯಾಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಮಳೆ ನಿಲ್ಲಲಾಗಿ ಬಿಸಿಲು ಬಂದು ಸ್ತಬ್ಧಚಿತ್ರಗಳು, ಕಲಾತಂಡಗಳು ಸಾಗುತ್ತಿದ್ದಂತೆ ಮತ್ತಷ್ಟು ಸಂಭ್ರಮ ಮುಗಿಲುಮುಟ್ಟಿತಾದರೂ ಮತ್ತೆ ಮಳೆ ಹನಿ ಹಾಕಿತು. 3.30 ನಂತರ ಮಳೆ ನಿಲ್ಲಲಾಗಿ ಜನರು ನಿರಾಳರಾಗಿ ದೇವಿಯ ದರ್ಶನ ಪಡೆದರು.
21 ಕುಶಾಲತೋಪು: ಸಿಎಂ ಪುಷ್ಪಾರ್ಚನೆ ನೆರವೇರಿಸುತ್ತಿದ್ದಂತೆ ಕೋಟೆ ಮಾರಮ್ಮನ ದೇವಸ್ಥಾನದ ಬಳಿ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ನಗರ ಪೊಲೀಸ್ ವಾದ್ಯ ವೃಂದದವರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು. ಅಂಬಾರಿ ಆನೆ ಅಭಿಮನ್ಯು ಹಾಗೂ ಕುಮ್ಮಿಆನೆಗಳಾದಲಕ್ಷ್ಮೀಮತ್ತು ಹಿರಣ್ಯರಾಷ್ಟ್ರಗೀತೆಮುಗಿಯುವವರೆಗೂ ಸೊಂಡಿಲೆತ್ತಿ ಸಲ್ಯೂಟ್ ಹೊಡೆದು ಗಮನ ಸೆಳೆದವು. ಬಳಿಕ ಆಶ್ವಾರೋಹಿ ದಳದ ಡಿಸಿಪಿ ಶೈಲೇಂದ್ರ ಅವರು ಜಂಬೂಸವಾರಿ ಸಾಗಲು ಅನುಮತಿ ಕೋರಿದರು. ಗಣ್ಯರು ಸಮ್ಮತಿಸುತ್ತಿದ್ದಂತೆ ಅಂಬಾರಿ ಮೆರವಣಿಗೆ ಸಾಗಿಬಂತು. ನಂತರ ಕೆಎಸ್‌ಆರ್‌ಪಿ ತುಕಡಿ, ಡಿಎಆರ್, ಕೆಎಸ್‌ಆರ್‌ಪಿ, ಆರ್‌ಪಿಎಫ್, ಎರಡು ಮೌಂಟೆಡ್ ತುಕಡಿ, ಕರ್ನಾಟಕ ಪೊಲೀಸ್ ಅಕಾಡೆಮಿ ತಂಡ, ಸಿಎಆರ್ ತಂಡ ಆಕರ್ಷಕ ಪಥ ಸಂಚಲನ ನಡೆಸಿತು.