ಅನೈತಿಕ ಮಾರ್ಗದಲ್ಲಿ ಸಾಲ ವಸೂಲಿಗೆ ಮುಂದಾಗಿರುವ ಅನುಮಾನ
ಶೇ.36ರಷ್ಟು ಬಡ್ಡಿ ದರ ಆರೋಪ
ಸಂಸ್ಥೆಗಳ ಪ್ರತಿನಿಧಿಗಳ ವರ್ತನೆಯೂ ಸಂಶಯ
ಶ್ರೀಧರ್ ಭಟ್
ನಂಜನಗೂಡು: ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಶೇ. ೩೬ ರಷ್ಟು ಬಡ್ಡಿ, ಚಕ್ರಬಡ್ಡಿಗಳ ದಾಹಕ್ಕೆ ಸಿಲುಕಿ ಸಾಮಾನ್ಯ ಜನರು ಅದರಲ್ಲೂ ಮಹಿಳೆಯರು ಸಾಲದ ಶೂಲಕ್ಕೇರುವಂತಾಗಿದೆ.
ಸುಲಭವಾಗಿ ಸಿಗುವ ಸಾಲ ಎಂದು ಸಾಲಗಾರ ನಾಗುವ ವ್ಯಕ್ತಿ ಫೈನಾನ್ಸ್ ಸಂಸ್ಥೆಯಲ್ಲಿ ೧ ಲಕ್ಷ ರೂ. ಸಾಲ ಪಡೆದು ಅದನ್ನು ಬಳಸಿಕೊಂಡು ಮರುಪಾವತಿಸ ಲಾಗದೇ ಹೆಣಗಾಡಿ ಕೊನೆಗೆ ಇನ್ನೊಂದು ಸಂಸ್ಥೆಯಿಂದ ೧. ೨೫ ಲಕ್ಷ ರೂ. ಪಡೆಯುವುದು, ಈ ಸಾಲ ತೀರಿಸಲು ಮತ್ತೊಂದು ಸಂಸ್ಥೆಯಿಂದ ಸಾಲ ಮಾಡುತ್ತಲೇ ಸಮಸ್ಯೆ ಗಳ ಸುಳಿಯಲ್ಲಿ ಸಿಲು ಕುವಂತಾಗಿದೆ. ಇದು ನಂಜನ ಗೂಡು ಸೇರಿದಂತೆ ಮೈಸೂರು ಜಿಲ್ಲೆಯ ತಾಲ್ಲೂಕು ಗಳ ಹಲವಾರು ಜನರ ಗೋಳಾಗಿದೆ. ರಾಷ್ಟ್ರೀಕೃತ ಬ್ಯಾಂಕು ಗಳು ಸಾಲ ನೀಡಲು ಹಿಂಜರಿಯುವಂತಹ ವ್ಯಕ್ತಿಗೇ ಹತ್ತಾರು ಲಕ್ಷ ರೂ. ಗಳನ್ನು ಸುಲಭವಾಗಿ ಮೈಕ್ರೊ ಫೈನಾನ್ಸ್ ನೀಡುತ್ತವೆ. ಅಲ್ಲದೆ, ಈ ಸಂಸ್ಥೆಗಳು ಕೇವಲ ೨ ವರ್ಷದ ಆರು ತಿಂಗಳುಗಳಲ್ಲಿ ತಾವು ನೀಡಿದ ಸಾಲದ ಎರಡರಷ್ಟು ಹಣವನ್ನು ವಸೂಲಿ ಮಾಡುತ್ತವೆ. ಆದರೂ ಸಾಲ ತೀರಿಲ್ಲ ಎಂದು ಸಾಲ ಪಡೆದವರ ಮನೆ – ಮಠದ ಹಾರಾಜಿಗೆ ಮುಂದಾಗುವ ಮೂಲಕ ಸಾಲ ಪಡೆವರು ಗ್ರಾಮಗಳನ್ನೇ ಖಾಲಿ ಮಾಡಬೇಕಾದ ಅಮಾನವೀಯ ಘಟನೆಗಳಿಗೆ ಫೈನಾನ್ಸ್ ಸಂಸ್ಥೆಗಳು ಕಾರಣವಾಗಿರುವುದು ಇದೀಗ ಬೆಳಕಿಗೆ ಬರಲಾರಂಭಿಸಿದೆ.
ಮೈಕ್ರೊ ಫೈನಾನ್ಸ್ ಶೋಷಣೆಗಳು ದೌರ್ಜನ್ಯಗಳು ಕೇವಲ ಹಣಕಾಸಿಗೆ ಮಾತ್ರ ಮೀಸಲಾಗದೆ ಸಾಲ ಪಡೆ ದವರ ವೈಯಕ್ತಿಕ ಬದುಕನ್ನು ನರಕವಾಗಿಸುತ್ತಿರುವುದು ಢಮನೆಯ ಮಹಿಳೆಯರ ಮಾನ ಮರ್ಯಾದೆಗಳನ್ನು ಬೀದಿಪಾಲು ಮಾಡಿ ಕುಟುಂಬಗಳ ಮನಸ್ಸುಗಳನ್ನು ಛಿದ್ರಗೊಳಿಸಿದ ಘಟನೆಗಳು ಜಿಲ್ಲೆಯ ಹಲವು ಗ್ರಾಮ ಗಳಲ್ಲಿ ನಡೆದಿವೆ ಎನ್ನಲಾಗಿದೆ. ಫೈನಾನ್ಸ್ ಸಂಸ್ಥೆಗಳು ಈಗ ಹಿಂಸೆ, ದೌರ್ಜನ್ಯದ ಮಾಫಿಯಾ ಆಗಿ ಬದಲಾಗಿವೆ ಎಂಬುದು ಚರ್ಚೆಗೆ ಗ್ರಾಸ ಒದಗಿಸಿದೆ.
ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಫೈನಾನ್ಸ್ ಕಂಪೆನಿಗಳು ಸಾಲ ನೀಡಲು ಹಾಗೂ ಅದರ ವಸೂಲಿ ಗಾಗಿ ಆಕರ್ಷಕ ಸಂಬಳದ ಆಸೆ ತೋರಿಸಿ ಯುವಕರನ್ನು ನೇಮಿಸಿಕೊಳ್ಳುತ್ತಿವೆ. ಅವರಿಗೆ ಸಾಲ ನೀಡಿಕೆ ಹಾಗೂ ವಸೂಲಿ ಮಾಡದಿದ್ದರೆ ಸಂಬಳ, ಭತ್ಯೆ, ಯಾವುದೂ ಇಲ್ಲ ಎಂಬ ಷರತ್ತುಗಳನ್ನು ವಿಧಿಸುತ್ತಿರುವುದೇ ಈ ಅನಾ ಹುತಗಳಿಗೆ ಕಾರಣವಾಗಿದೆ. ಈ ನಿಬಂಧನೆಗಳಿಗೆ ಸಿಲುಕಿ ಕೊಂಡ ಯುವ ಪಡೆ ವಸೂಲಾತಿಗಾಗಿ ಮಹಿಳೆಯರ ಶೋಷಣೆಯೂ ಸೇರಿದಂತೆ ಅನೈತಿಕ ಮಾರ್ಗಗಳನ್ನೂ ಅನುಸರಿಸುತ್ತಿವೆ ಎಂಬ ಅಪವಾದಗಳೂ ಕೇಳಿಬಂದಿವೆ.
ಬಹುತೇಕ ಕುಟುಂಬಗಳು ಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲವನ್ನು ದ್ವಿಚಕ್ರ ವಾಹನಗಳ ಖರೀದಿ ಸೇರಿದಂತೆ ಮಕ್ಕಳ ಶೋಕಿಗಾಗಿ ಖರ್ಚು ಮಾಡುತ್ತವೆ ಎಂಬ ಮಾಹಿತಿ ಇದೆ. ನಂತರ ಈ ಸಂಸ್ಥೆಗಳ ಶೇ. ೩೬ ರಷ್ಟು ಬಡ್ಡಿಯ ಸಾಲ ತೀರಿಸಲಾಗದೇ ಹುಟ್ಟಿದೂರನ್ನೇ ಬಿಟ್ಟು ಗುಳೆ ಹೊರಡಬೇಕಾದ ಅನಿವಾರ್ಯತೆ ಸೃಷ್ಟಿ ಯಾಗುತ್ತಿದೆ.
ನಂಜನಗೂಡು ತಾಲ್ಲೂಕಿನಲ್ಲೇ ವಾರ್ಷಿಕ ನಾಲ್ಕಾರು ಕೋಟಿಗಳಿಂದ ನೂರಾರು ಕೋಟಿ ರೂ. ಗಳಷ್ಟು ವಹಿವಾಟು ನಡೆಸುವ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿಯ ಅಮಾನವೀಯ ಕೃತ್ಯಕ್ಕೆ ಸಿಲುಕಿದ ಬಹಳಷ್ಟು ಜನರು ಸ್ವಂತ ಮನೆಯನ್ನು ಖಾಲಿ ಮಾಡಿದ್ದಾರೆ. ಸಾಲ ವಸೂಲಿಗಾಗಿ ಮನೆ ಬಾಗಿಲಿಗೆ ಬಂದ ಸಂಸ್ಥೆಯವರು ‘ಮನೆಯನ್ನು ಜಪ್ತಿ ಮಾಡಲಾಗಿದೆ’ ಎಂಬ ನೊಟೀಸ್ ಅಂಟಿಸಿದ ಪ್ರಕರಣಗಳು ನಂಜನಗೂಡು ತಾಲ್ಲೂಕಿನ ಶಿರಮಳ್ಳಿ, ಕುರಿಹುಂಡಿ, ರಾಂಪುರ, ಹುಲ್ಲಹಳ್ಳಿ, ಕಗ್ಗಲೂರು, ಹೆಗ್ಗಡಳ್ಳಿ ಮುದ್ದಹಳ್ಳಿ ಸೇರಿದಂತೆ ೨೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಡೆದಿರುವುದು ಆತಂಕ ಮೂಡಿಸಿದೆ.
ಸರ್ಕಾರ ಈಗಲಾದರೂ ಮಧ್ಯೆ ಪ್ರವೇಶಿಸಿ ಈ ಮೈಕ್ರೊ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿ ಕೊಳ್ಳುವವರ ಸರಣಿಗಳನ್ನೇ ಎದುರಿಸಬೇಕಾದೀತು. ಅದರೊಂದಿಗೆ ತಾಲ್ಲೂಕಿನ ಕೃಷಿ ಭೂಮಿ ಹಾಗೂ ಮನೆಗಳು ಮೈಕ್ರೊ ಫೈನಾನ್ಸ್ ಕಂಪೆನಿಗಳಿಗೆ ಸೇರ ಬಹುದು ಎಂಬ ಆತಂಕ ನಾಗರಿಕ ಸಮಾಜದ್ದಾಗಿದೆ.
ಊರು ತೊರೆದವರ ಪತ್ತೆಗಾಗಿ ಬೌನ್ಸರ್
ಪಡೆದ ಸಾಲವನ್ನು ಮರುಪಾವತಿಸಲಾಗದೆ, ಫೈನಾನ್ಸ್ ಸಂಸ್ಥೆಗಳವರ ದೌರ್ಜನ್ಯವನ್ನು ತಾಳಿಕೊಳ್ಳಲೂ ಆಗದೆ ಊರು ತೊರೆದಿರುವ ಜನರನ್ನು ಪತ್ತೆ ಹಚ್ಚಿ, ಹಿಂಸೆ ನೀಡುವ ಸಲುವಾಗಿ ಬೆಂಗಳೂರಿನಿಂದ ಎಸಿ ಕಾರುಗಳಲ್ಲಿ ಬಂದಿರುವ ಬೌನ್ಸರುಗಳ ಪಡೆ ಸಿದ್ಧವಾಗಿದೆ.
ದೌರ್ಜನ್ಯಕ್ಕೀಡಾದವರು ದೂರು ನೀಡಿ
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳಿಂದ ಶೋಷಣೆ ಅಥವಾ ದೌರ್ಜನ್ಯಕ್ಕೆ ಒಳಗಾದ ಸಾಲ ಪಡೆದವರು ಸ್ಥಳೀಯ ಠಾಣೆಯಲ್ಲಿ ದೂರು ಸಲ್ಲಿಸಬೇಕು ಅಥವಾ ನೇರವಾಗಿ ತಮಗೆ ದೂರು ನೀಡಬಹುದು. –ಡಾ. ಎನ್. ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.