Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಫೈನಾನ್ಸ್‌ ಸಂಸ್ಥೆಗಳ ಕಾಟ: ಊರು ತೊರೆದ ಪುಟ್ಟ ಕುಟುಂಬ

ಪ್ರಸಾದ್ ಲಕ್ಕೂರು

ಅನಾರೋಗ್ಯಇದ್ದರೂ ಕಂತು ಪಾವತಿಸಲು ಒತ್ತಡ: ಆರೋಪ

ದೇಶವಳ್ಳಿ ಗ್ರಾಮದ ಮಾದೇಗೌಡ, ಶೋಭಾ ದಂಪತಿ ಕಂಗಾಲು

ಪರ ಊರಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬ

ಸಾಲ ತೀರಿಸುವ ಧೈರ್ಯ ಇದೆ; ಕಾಲಾವಕಾಶಕ್ಕೆ ಕೋರಿಕೆ

ಚಾಮರಾಜನಗರ : ಖಾಸಗಿ ಹಣಕಾಸು ಸಂಸ್ಥೆಗಳ (ಫೈನಾನ್ಸ್) ಸಾಲದ ಕಿರುಕುಳ ತಾಳಲಾರದೆ ತಾಲ್ಲೂಕಿನ ದೇಶವಳ್ಳಿಯ ಕುಟುಂಬವೊಂದು ಗ್ರಾಮವನ್ನೇ ತೊರೆ ದಿದೆ. ಮನೆ ಹಾಗೂ ಕೂಲಿ ಕೆಲಸ ಹುಡುಕಿಕೊಂಡು ಮೈಸೂರು ಸೇರಿಕೊಂಡಿದೆ.

೨ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಮಾದೇಗೌಡ ಮತ್ತು ಶೋಭಾ ದಂಪತಿ ೩ ತಿಂಗಳ ಹಿಂದೆಯೇ ಗ್ರಾಮವನ್ನು ತೊರೆದು ಮೈಸೂರು ಸೇರಿದ್ದಾರೆ. ಅಲ್ಲಿನ ಬಡಾವಣೆಯೊಂದರಲ್ಲಿ ೨,೫೦೦ ರೂ. ಬಾಡಿಗೆಗೆ ಪುಟ್ಟ ಮನೆ ಪಡೆದು ವಾಸವಾಗಿದ್ದಾರೆ. ಪತಿ ಮಾದೇಗೌಡ ಗಾರೆ ಕೆಲಸ ಮಾಡಿ ಕೊಂಡಿದ್ದರೆ, ಪತ್ನಿ ಶೋಭಾ ಮನೆ ಗೆಲಸಕ್ಕೆ ಹೋಗುತ್ತಿದ್ದಾರೆ.

ವಾರಕ್ಕೊಮ್ಮೆ ಕಂತಿನ ರೂಪದಲ್ಲಿ ಸಾಲ ಮರು ಪಾವತಿಸುವ ಷರತ್ತಿನೊಂದಿಗೆ ೨ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿದ್ದರು. ಪತಿ-ಪತ್ನಿ ಗ್ರಾಮದ ಕೃಷಿ ಪಂಪ್ ಸೆಟ್ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಹಲವು ಕಂತುಗಳನ್ನು ಪಾವತಿಸಿಕೊಂಡು ಬಂದಿದ್ದರು. ಆದರೆ, ಮಾದೇಗೌಡರು ಅನಾರೋಗ್ಯದಿಂದ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಚಿಕಿತ್ಸೆಯ ಖರ್ಚು ಭರಿಸಲು ಶೋಭಾ ಅವರು ಪರದಾಡಬೇಕಾಯಿತು. ಈ ನಡುವೆ ಹಣಕಾಸು ಸಂಸ್ಥೆಗಳ ಸಾಲದ ಕಂತು ಪಾವತಿಸಲು ಸಾಧ್ಯವಾಗದೆ ಅಸಹಾಯಕರಾದರು.

ಇಲ್ಲಿಂದ ಶುರುವಾಯಿತು ಹಣಕಾಸು ಸಂಸ್ಥೆಗಳ ಸಿಬ್ಬಂದಿ ಕಿರುಕುಳ. ಬೆಳಿಗ್ಗೆ ಮನೆ ಬಳಿಗೆ ಬರುವ ಸಿಬ್ಬಂದಿ ಸಾಲದ ಕಂತು ಪಾವತಿಸುವಂತೆ ಪೀಡಿಸುತ್ತಿದ್ದರು. ಹಣವಿಲ್ಲ ನನ್ನ ಪತ್ನಿ, ಪತಿಗೆ ಆರೋಗ್ಯ ಸರಿಯಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರೂ, ಅದೆಲ್ಲ ನಮಗೆ ಗೊತ್ತಿಲ್ಲ. ಕಂತಿನ ಹಣ ಪಾವತಿಸಬೇಕು ಎಂದು ಒತ್ತಡ ಹಾಕುತ್ತಿದ್ದರು ಎಂದು ಮಾದೇಗೌಡ ಕಣ್ಣೀರು ಹಾಕಿದರು.

ಸಂಜೆ ಸಮಯಕ್ಕೆ ಬರುತ್ತಿದ್ದ ಹಣಕಾಸು ಸಂಸ್ಥೆಗಳ ಸಿಬ್ಬಂದಿ ರಾತ್ರಿಯಾದರೂ ವಾಪಸ್ ತೆರಳದೆ ಮನೆಗಳ ಜಗುಲಿ ಮೇಲೆ ಕುಳಿತಿರುತ್ತಿದ್ದರು. ಮುಂದಿನ ವಾರ ಪಾವತಿಸುವುದಾಗಿ ಗೋಗರೆದರೂ ಕೇಳುತ್ತಿರಲಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ನಮಗೆ ೬ ವರ್ಷದ ಗಂಡು ಮಗುವಿದೆ. ಮೈಸೂರಿನಲ್ಲಿ ಹಾಲಿ ವಾಸವಿರುವ ಬಡಾವಣೆಯಲ್ಲಿರುವ ಶಾಲೆಗೆ ಸೇರಿಸಿದ್ದೇವೆ.

ನನ್ನ ಪತ್ನಿ ೫ ಸಾವಿರ ರೂ.ಗೆ ಮನೆ ಕೆಲಸ ಮಾಡುತ್ತಾಳೆ. ನಾನು ೫೦೦ ರೂ. ಕೂಲಿಯ ಗಾರೆ ಕೆಲಸಕ್ಕೆ ಹೋಗುತ್ತಿದ್ದೇನೆ. ನಾವೇನು ಸಾಲ ಮರುಪಾವತಿ ಮಾಡುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ. ನಾನು ಕಾಯಿಲೆಗೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಸಾಧ್ಯವಾಗಲಿಲ್ಲ ಎಂದು ಮಾದೇಗೌಡ ಗದ್ಗದಿತರಾದರು.

” ನಾನು ಗೊರವರ ಕುಣಿತ ಕಲಾವಿದ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮುಡುಕುತೊರೆ ಮಲ್ಲಪ್ಪನ ಹೆಸರಿನಲ್ಲಿ ವಾರದಲ್ಲಿ ೩ ದಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಿಕ್ಷಾಟನೆ ಮಾಡಿಕೊಂಡು ಕಷ್ಟದ ಬದುಕು ಕಟ್ಟಿಕೊಂಡಿದ್ದೆ. ಜೊತೆಗೆ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದೆವು. ನನ್ನ ಪತ್ನಿ ಶೋಭಾಗೆ ೨ ಬಾರಿ ಗರ್ಭಪಾತವಾಯಿತು. ನಾನು ಕಾಯಿಲೆ ಬಿದ್ದೆ. ಹಾಗಾಗಿ ಸಾಲ ತೀರಿಸಲು ಸಾಧ್ಯವಾಗದೆ ಊರು ತೊರೆದೆ. ೩-೪ ತಿಂಗಳು ಕಾಲಾವಕಾಶ ನೀಡಿದರೆ ಕೂಲಿ ಹಣದಲ್ಲೇ ಸಾಲ ತೀರಿಸುವೆ.”

ಮಾದೇಗೌಡ, ದೇಶವಳ್ಳಿ

” ನಮ್ಮ ಗ್ರಾಮದಲ್ಲಿ ಹಣಕಾಸು ಸಂಸ್ಥೆಗಳು ರಚಿಸಿದ ಗುಂಪಿನ ಮೂಲಕ ಸಾಲ ಪಡೆದುಕೊಂಡಿದ್ದೆ. ನಮ್ಮ ಪತಿ ಕಾಯಿಲೆ ಬಿದ್ದಾಗ ಸಾಲದ ಕಂತು ಪಾವತಿಸಲು ಸಾಧ್ಯವಾಗಲಿಲ್ಲ. ಗುಂಪಿನ ಸದಸ್ಯರ ಚುಚ್ಚುಮಾತು ಮತ್ತು ಕಾಲಾವಕಾಶ ನೀಡದೆ ಹಣಕಾಸು ಸಂಸ್ಥೆಗಳ ಸಿಬ್ಬಂದಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ನೇಣು ಹಾಕಿಕೊಳ್ಳಲು ಮುಂದಾಗಿದ್ದೆ.”

– ಶೋಭಾ, ದೇಶವಳ್ಳಿ

” ಗ್ರಾಮಸ್ಥರಿಗೆ ಸಾಲ ನೀಡಬೇಡಿ ಎಂದುಹಣಕಾಸು ಸಂಸ್ಥೆಗಳಿಗೆ ನಾವು ಹೇಳುವುದಿಲ್ಲ. ಸಾಲ ಮರು ಪಾವತಿಸಬೇಡಿ ಎಂದು ಗ್ರಾಮಸ್ಥರಿಗೂ ಹೇಳುವುದಿಲ್ಲ. ಸಾಲ ವಸೂಲಿ ನೆಪದಲ್ಲಿ ಕಿರುಕುಳ ನೀಡಬಾರದು ಎಂಬುದು ನಮ್ಮ ಆಗ್ರಹ. ಸಾಲಕ್ಕೆ ಹೆದರಿ ಊರು ತೊರೆದರೆ ಅಂತಹ ಕುಟುಂಬದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಆರೋಗ್ಯದ ತೊಂದರೆ, ಹಬ್ಬ, ಶುಭ ಸಮಾರಂಭಗಳ ಸಂದರ್ಭಗಳಲ್ಲಿ ಸಾಲಗಾರರಿಗೆ ಕಾಲಾವಕಾಶ ನೀಡಬೇಕು.”

– ಡಿ.ಪಿ.ರಾಜು, ಸಂತೇಮರಹಳ್ಳಿ ಗ್ರಾ.ಪಂ. ಮಾಜಿ ಸದಸ್ಯರು.

 

Tags: