ಪುನೀತ್ ಮಡಿಕೇರಿ
ಡಿಜಿಟಲ್ ಮ್ಯೂಸಿಯಂ ಕನಸು ಸಾಕಾರಕ್ಕೆ ಕೇಂದ್ರ ಸರ್ಕಾರದ ನೆರವು
ಕೊಡಗಿನ ಹೆಮ್ಮೆಯ ಸಂಕೇತವಾದ ಮಡಿಕೇರಿ ಅರಮನೆಗೆ ಕೇಂದ್ರ ಸರ್ಕಾರದಿಂದ ಸಂರಕ್ಷಿತ ಸ್ಮಾರಕ ಸ್ಥಾನಮಾನ ದೊರೆತಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸತತ ಪ್ರಯತ್ನಕ್ಕೆ ಕೊನೆಗೂ ಮನ್ನಣೆ ಸಿಕ್ಕಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಕೊಡಗು- ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲ್ಲಿಸಿದ್ದ ಮನವಿ ಹಾಗೂ ನಿರಂತರ ಅನುಸರಣೆಯ ಹಿನ್ನೆಲೆಯಲ್ಲಿ, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಡಿಕೇರಿ ಅರಮನೆಯನ್ನು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಹಾಗೂ ಅವಶೇಷಗಳ ಕಾಯ್ದೆ, ೧೯೫೮ರ ಅಡಿಯಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ತಮ್ಮ ಪತ್ರದಲ್ಲಿ ಸಚಿವರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಮಡಿಕೇರಿ ಅರಮನೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಇದರ ಭಾಗವಾಗಿ ಪ್ರವಾಸಿಗರ ಅನುಭವವನ್ನು ಉತ್ತಮಗೊಳಿಸುವ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಡಿಜಿಟಲ ಪ್ರದರ್ಶನ ಗಳನ್ನೊಳಗೊಂಡ ಆಧುನಿಕ ತಾಣ ವಸ್ತುಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ. ಇದು ಕೊಡಗಿನ ಸಮೃದ್ಧ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದಿದ್ದಾರೆ
೨೦೨೫ರ ಮಾ.೧೮ರಂದು ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ಸರ್ಕಾರಕ್ಕೆ ವಿವರವಾದ ಮನವಿ ಸಲ್ಲಿಸಿದ್ದರು. ಆ ಮನವಿಯಲ್ಲಿ ಅವರು ಮಡಿಕೇರಿ ಅರಮನೆಗೆ ಸಂರಕ್ಷಿತ ಸ್ಮಾರಕ ಸ್ಥಾನಮಾನ ನೀಡುವುದು ಹಾಗೂ ಅಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸುವ ಕುರಿತು ಆಗ್ರಹಿಸಿದ್ದರು.
ಮಡಿಕೇರಿ ಅರಮನೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮನಗಂಡು ಯದುವೀರ್ ಒಡೆಯರ್ ಅವರು ಈ ವಿಷಯವನ್ನು ಕೇಂದ್ರ ಸರ್ಕಾರ ಹಾಗೂ ಎಎಸ್‌ಐ ಅಧಿಕಾರಿಗಳೊಂದಿಗೆ ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದರು. ಅವರ ಪ್ರಯತ್ನಗಳ ಫಲವಾಗಿ, ಎಎಸ್‌ಐನ ಹಿರಿಯ ಅಧಿಕಾರಿಗಳು ಜಿಡಳಿತದ ಸಹಯೋಗದಲ್ಲಿ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಸಂಸತ್ ಸದಸ್ಯರು ನೀಡಿದ ಸಲಹೆಗಳನ್ನು ಭವಿಷ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಪರಿಗಣಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯದುವೀರ್ ಒಡೆಯರ್, ಮಡಿಕೇರಿ ಅರಮನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಬಹುಕಾಲದ ಬೇಡಿಕೆ ಇದೀಗ ಸಾಕಾರಗೊಳ್ಳುವ ಹಂತ ತಲುಪಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕೊಡಗಿನ ವೈಭವಯುತ ಇತಿಹಾಸವನ್ನು ಪ್ರತಿಬಿಂಬಿ ಸುವ ಪ್ರಮುಖ ಪರಂಪರೆ ಮತ್ತು ಪ್ರವಾಸೋದ್ಯಮ ತಾಣವಾಗಿ ಮಡಿಕೇರಿ ಅರಮನೆಯನ್ನು ಅಭಿವೃದ್ಧಿಪಡಿಸುವುದರ ಜತೆಗೆ ಭವಿಷ್ಯದ ಪೀಳಿಗೆಗಳಿಗೆ ಶೈPಣಿಕ ಮತ್ತು ಪ್ರವಾಸೋದ್ಯಮ ಅವಕಾಶಗಳನ್ನು ಸೃಷ್ಟಿಸಲು ತಾವು ಬದ್ಧ ಎಂದಿದ್ದಾರೆ.
ಈ ಬೆಳವಣಿಗೆ ಕರ್ನಾಟಕದ ಪ್ರಮುಖ ಐತಿಹಾಸಿಕ ಪರಂಪರೆ ತಾಣಗಳಲ್ಲಿ ಒಂದಾದ ಮಡಿಕೇರಿ ಅರಮನೆಯ ಸಂರಕ್ಷಣೆ ಮಹತ್ವದ ಹೆಜ್ಜೆಯಾಗಿದ್ದು, ಪ್ರದೇಶದ ಸಾಂಸ್ಕೃತಿಕ ಆಸ್ತಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಗಮನ ಹಾಗೂ ಹೂಡಿಕೆ ತರಲು ಸಂಸದ ಯದುವೀರ್ ಒಡೆಯರ್ ಅವರು ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.
” ಸ್ಥಳೀಯರ ಬೇಡಿಕೆಯಂತೆ ಮಡಿಕೇರಿ ಅರಮನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಬಹುಕಾಲದ ಬೇಡಿಕೆ ಇದೀಗ ಸಾಕಾರಗೊಳ್ಳುವ ಹಂತ ತಲುಪಿದೆ. ಕೊಡಗಿನ ಶ್ರೀಮಂತ ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಮುಖ ಪರಂಪರೆ ಮತ್ತು ಪ್ರವಾಸೋದ್ಯಮ ತಾಣವಾಗಿ ಮಡಿಕೇರಿ ಅರಮನೆಯನ್ನು ಅಭಿವೃದ್ಧಿಪಡಿಸಲಾಗುವುದು. ಭವಿಷ್ಯದ ಪೀಳಿಗೆಗೆ ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಅವಕಾಶಗಳನ್ನು ಸೃಷ್ಟಿಸಲು ಪ್ರಯತ್ನ ಮುಂದುವರಿಸಲಾಗುವುದು.”
-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ
” ರಾಜರ ಕಾಲದಲ್ಲಿ ಇದ್ದ ಅರಮನೆ, ಕಲಾಕೃತಿಗಳು ಅರಮನೆ ಆವರಣ, ಕೋಟೆ, ನಾಲ್ಕುನಾಡು ಅರಮನೆ, ಗದ್ದಿಗೆ, ಓಂಕಾರೇಶ್ವರ ದೇವಾಲಯ ಸಂರಕ್ಷಣೆಗೆ ಈ ಭಾಗದ ಜನರು ಒತ್ತಾಯಿಸುತ್ತಿದ್ದರು. ಈ ನಿಟ್ಟಿನಲ್ಲಿ ಅರಮನೆಯ ಅಭಿವೃದ್ಧಿಗೆ ಈಗ ನಡೆದಿರುವ ಬೆಳವಣಿಗೆ ಸ್ವಾಗತಾರ್ಹ.”
-ಸಾಂಬಶಿವಯ್ಯ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಘಟಕ




