Mysore
18
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಖೋಖೋ ವಿಶ್ವಕಪ್‌; ಮಿಂಚಿದ ಚೈತ್ರಾ

ವಿಶ್ವಮಟ್ಟದಲ್ಲಿ ಗಮನ ಸೆಳೆದ ಮೈಸೂರು ಜಿಲ್ಲೆಯ ಕುರುಬೂರು ಗ್ರಾಮದ ಯುವತಿ

ಚೊಚ್ಚಲ ಖೋಖೋ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ

ಜಿ.ತಂಗಂ ಗೋಪಿನಾಥಂ

ಮೈಸೂರು: ಹಳ್ಳಿಯೊಂದರ ಬಾಲೆ, ೪ನೇ ತರಗತಿಯಿಂದಲೇ ಖೋ ಖೋ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿ ಕೊಂಡು, ಸತತ ಪರಿಶ್ರಮದಿಂದ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಪಂದ್ಯ ಗಳಲ್ಲಿ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ್ದು, ಇದೀಗ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಹಳ್ಳಿಯಲ್ಲಿ ಮೂಡಿದ ಈ ಪ್ರತಿಭೆ ಖೋ ಖೋ ವಿಶ್ವಕಪ್‌ನಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಹಿಸಿದ ಪಾತ್ರ ಅತ್ಯಂತ ರೋಚಕವಾಗಿದೆ. ಇವರು ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯವರು ಎಂಬುದು ಹೆಗ್ಗಳಿಕೆಯಾಗಿದೆ.

ವಿಶ್ವಕಪ್ ಜಯಿಸಿರುವುದು ಜೀವನದ ಸಾರ್ಥಕ ಕ್ಷಣ. ನೇಪಾಳದ ವಿರುದ್ಧದ -ನಲ್ ಪಂದ್ಯದಲ್ಲಿ ‘ಡ್ರೀಮ್ ರನ್’ನಲ್ಲಿ ಗಳಿಸಿದ ಅಂಕಗಳ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಂದಿದ್ದು, ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ೨೦೩೨ ಅಥವಾ ೨೦೩೬ರ ಒಲಿಂಪಿಕ್ಸ್‌ಗೆ ಖೋ ಖೋ ಪಂದ್ಯವೂ ಸೇರ್ಪಡೆಯಾಗುವ ಸಾಧ್ಯತೆ ಇದೆ. ಅದು ನಿಜವಾದರೆ ಭಾರತವನ್ನು ಪ್ರತಿನಿಧಿಸಿ ಪದಕ ತಂದುಕೊಡುವುದು ನನ್ನ ಜೀವನದ ಗುರಿ. . !

ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿ ಚಾಂಪಿಯನ್ ಗರಿ ಮುಡಿಗೇರಿಸಿಕೊಂಡಿರುವ ಭಾರತದ ವನಿತೆಯರ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಲ್ಲೆಯ ತಿ. ನರಸೀಪುರ ತಾಲ್ಲೂಕು ಕುರುಬೂರು ಗ್ರಾಮದ ಆಟಗಾರ್ತಿ ಬಿ. ಚೈತ್ರಾ ಅವರು ವಿಶ್ವಕಪ್ ಗೆಲುವಿನ ಸಂಭ್ರಮ ವನ್ನು ‘ಆಂದೋಲನ’ ದೊಂದಿಗೆ ಹಂಚಿಕೊಂಡಿದ್ದು ಹೀಗೆ.

ನನ್ನ ಈ ಸಾಧನೆಗೆ ತಂದೆ ಕೆ. ಎಂ. ಬಸವಣ್ಣ, ತಾಯಿ ನಾಗರತ್ನ, ೪ನೇ ತರಗತಿಯಿಂದಲೂ ಖೋ ಖೋ ಆಡಲು ವೈಯಕ್ತಿಕವಾಗಿ ಧನ ಸಹಾಯ ಮಾಡಿ, ಪ್ರೋತ್ಸಾಹಿಸಿದ ಶಿಕ್ಷಕರೂ ಆದ ತರಬೇತುದಾರ ಕೆ. ಮಂಜುನಾಥ್, ವಿದ್ಯಾದರ್ಶಿನಿ ಕಾನ್ವೆಂಟ್ ಶಾಲೆ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ನಮ್ಮ ಹಳ್ಳಿಯ ಜನರು ಕಾರಣ ಎಂದು ಭಾವುಕರಾದರು.

ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀ ಶಂಭುಲಿಂಗೇಶ್ವರ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಎರಡನೇ ವರ್ಷದ ಬಿಪಿ. ಇಡಿ. ಪದವಿ ವ್ಯಾಸಂಗ ಮಾಡುತ್ತಿರುವ ಚೈತ್ರಾ ಅವರ ತಂದೆ ಬಸವಣ್ಣ ರೈತರಾಗಿದ್ದು, ತಾಯಿ ನಾಗರತ್ನ ಗೃಹಿಣಿ.

ರಾಷ್ಟ್ರೀಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ೩೧ ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಚೈತ್ರಾ ಒಟ್ಟು ೧೧ ಚಿನ್ನ, ೯ ಬೆಳ್ಳಿ, ೬ ಕಂಚಿನ ಪದಕಗಳನ್ನು ಮಡಿಲಿಗೆ ಹಾಕಿಕೊಂಡಿದ್ದಾರೆ.

 

ಶ್ರದ್ದೆಯೇ ಚೈತ್ರಾಳ ಯಶಸ್ಸಿಗೆ ಸೋಪಾನ

ಚೈತ್ರಾಳ ಸಾಧನೆ ನನ್ನಲ್ಲಿ ರೋಮಾಂಚನ ಉಂಟು ಮಾಡಿದೆ. ಬಹುಮುಖ್ಯವಾಗಿ ತಾನು ಇಷ್ಟಪಟ್ಟ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಬೇಕೆಂಬ ಛಲ, ಶ್ರದ್ಧೆಯೇ ಅವಳ ಯಶಸ್ಸಿಗೆ ಸೋಪಾನವಾಗಿದೆ ಎಂದು ಹೆಮ್ಮೆಯಿಂದ ನುಡಿದ ತರಬೇತುದಾರ ಶಿಕ್ಷಕ ಕೆ. ಮಂಜುನಾಥ್ ಅವರ ಕಂಗಳಲ್ಲಿ ಆನಂದಬಾಷ್ಪ ತುಳುಕಿ ಕೆಳಗಿಳಿಯಲು ಸಿದ್ಧವಾಗಿದ್ದಂತಿತ್ತು. ಚೈತ್ರಾಳ ಕ್ರೀಡಾ ಯಶಸ್ಸಿನ ಮಾದರಿಯನ್ನು ಇತರ ವಿದ್ಯಾರ್ಥಿಗಳೆಲ್ಲರೂ ಅನುಸರಿಸಲಿ ಎಂಬುದಾಗಿ ಆಶಿಸುತ್ತೇನೆ ಎಂದರು.

ಫೈನಲ್‌ನಲ್ಲಿ ಆಕೆಯ ಆಟ ನೋಡಿ ಖುಷಿಯಾಯಿತು. ಹೆಣ್ಣು ಮಗಳನ್ನು ಕ್ರೀಡಾ ಕ್ಷೇತ್ರಕ್ಕೆ ಕಳುಹಿಸಿದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ನಾವು ಅದೆಲ್ಲವನ್ನೂ ಕೇಳಿಸಿಕೊಂಡೂ ಕೇಳಿಸದಂತೆ ಇದ್ದು, ಅದನ್ನೇ ಆಶೀರ್ವಾದ ಎಂದುಕೊಂಡೆವು. ಖೋ ಖೋ ತರಬೇತಿ ಪಡೆಯಲು ಮಗಳಿಗೆ ಸಮ್ಮತಿ ನೀಡಿದ್ದೆವು. ಅದನ್ನೇ ಸವಾಲಾಗಿ ಸ್ವೀಕರಿಸಿದ ಚೈತ್ರಾ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡುವ ಮೂಲಕ ಟೀಕೆಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾಳೆ. ನಾಗರತ್ನ, ಚೈತ್ರಾ ತಾಯಿ.

ಸೀಳಿದ ಪಾದಗಳಿಗೆ ಔಷಧಿ ಹಚ್ಚಿದ್ದ ನೋವು ಮರೆಯಲಾಗದು ನನ್ನ ಮಗಳು ೪ನೇ ತರಗತಿಯಿಂದ ಖೋ-ಖೋ ಆಡುತ್ತಿದ್ದಾಳೆ. ಆಕೆಗೆ ಶೂ ಕೊಡಿಸುವಷ್ಟು ನಮಗೆ ಆರ್ಥಿಕ ಶಕ್ತಿ ಇರಲಿಲ್ಲ. ನಿರಂತರ ಆಟದಿಂದ ಆಕೆಯ ಪಾದಗಳು ಸೀಳುತ್ತಿದ್ದವು. ಅದಕ್ಕೆ ರಾತ್ರಿಯೆಲ್ಲ ಔಷಧಿ ಹಚ್ಚಿದ್ದೇವೆ. ಆ ನೋವು ಮರೆಯಲಾಗದು.

ಫೈನಲ್‌ನಲ್ಲಿ ಮಗಳ ಆಟವನ್ನು ನೋಡಿದಾಗ ಬಹಳ ಖುಷಿಯಾಯಿತು. ಅಷ್ಟು ಜನರ ಮಧ್ಯೆ ನಮ್ಮ ಪುತ್ರಿ ಕರ್ನಾಟದಿಂದ ಆಯ್ಕೆ ಆಗಿದ್ದೇ ನನಗೆ ಖುಷಿ ಕೊಟ್ಟಿತ್ತು. ಈಗ ದೇಶವೇ ಕೊಂಡಾಡುವಂತೆ ಮಾಡಿದ್ದಾಳೆ. ಬೆಸ್ಟ್ ಪ್ಲೇಯರ್ ಆಗಿ ಹೊರಹೊಮ್ಮಿದ್ದು ನಿಜಕ್ಕೂ ನಮ್ಮನ್ನು ಭಾವುಕರನ್ನಾಗಿ ಮಾಡಿತು.

ಇಲ್ಲಿಂದ ಹೋಗುವ ಮುನ್ನವೇ ಅವಳು ಗೆದ್ದು ಬರುತ್ತೀನಿ ಎಂದಿದ್ದಳು. ನಮಗೂ ಅದೇ ವಿಶ್ವಾಸವಿತ್ತು. ಅಂತೆಯೇ ಗೆಲುವು ಸಾಧಿಸಿದ್ದಾಳೆ.  ಕೆ. ಎಂ. ಬಸವಣ್ಣ , ಚೈತ್ರಾ ತಂದೆ.

ನನ್ನ ಈ ಸಾಧನೆಗೆ ಕಾರಣಕಾರ್ತರಾದ ತಂದೆ ಕೆ. ಎಂ. ಬಸವಣ್ಣ, ತರಬೇತುದಾರ ಕೆ. ಮಂಜುನಾಥ್, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್, ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ನಮ್ಮ ಹಳ್ಳಿಯ ಜನರಿಗೆ ಧನ್ಯವಾದಗಳು.  ಬಿ. ಚೈತ್ರಾ, ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ.

ಎಂ. ಕೆ. ಗೌತಮ್, ಬಿ. ಚೈತ್ರಾ ಅವರನ್ನು ಗೌರವಿಸಿದ ಎಚ್‌ಡಿಕೆ

೨೦೨೫ರ ಪುರುಷರು ಹಾಗೂ ಮಹಿಳೆಯರ ಖೋ-ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡಗಳು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕದ ಎಂ. ಕೆ. ಗೌತಮ್ ಹಾಗೂ ಬಿ. ಚೈತ್ರಾ ಅವರನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಮಂಗಳವಾರ ಹೊಸದಿಲ್ಲಿಯಲ್ಲಿ ಸನ್ಮಾನಿಸಿದರು.

Tags: