Mysore
26
broken clouds
Light
Dark

‘ಹಚ್ಚೇವು ಕನ್ನಡದ ದೀಪ’: ಸಾಂಸ್ಕೃತಿಕವಾಗಿ ಮುಖ್ಯವಾದ ಸಂಶೋಧನೆ

ಡಾ.ರಹಮತ್ ತರೀಕೆರೆ

ನಾಗರಾಜ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಸಂಶೋಧನೆಗೆ ನೋಂದಣಿ ಮಾಡಿದರು. ನಡುನಡುವೆ ಬಂದು ನನ್ನೊಡನೆ ಚರ್ಚೆ ನಡೆಸಿದರು. ನಾವು ಕನ್ನಡ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನ ರಸ್ತೆಗಳಲ್ಲಿ ದೀರ್ಘವಾಗಿ ವಾಕಿಂಗ್ ಮಾಡುತ್ತಿದ್ದ ದಿನಗಳು ನೆನಪಾಗುತ್ತಿವೆ. ಅವರು ಈ ಅಧ್ಯಯನದಲ್ಲಿ ತೋರಿಸಿದ ಆಸಕ್ತಿ, ಶ್ರದ್ಧೆ, ದುಡಿಮೆ ನನ್ನನ್ನು ಚಕಿತಗೊಳಿಸಿತು. ಅಭಿಮಾನ ಉಂಟುಮಾಡಿತು. ಅವರೀಗ ಪಿಎಚ್.ಡಿ. ಅಧ್ಯಯನವನ್ನು ಯಶಸ್ವಿಯಾಗಿ ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ತಮ್ಮ ಸಂಶೋಧನ ಬರಹವನ್ನು ಪುಸ್ತಕವಾಗಿ ಪ್ರಕಟಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ.

ಡಾ.ನಾಗರಾಜ್ ಅವರು ಈ ಅಧ್ಯಯನದಲ್ಲಿ ಮಾಡಿ ಕೊಂಡಿರುವ ಅಧ್ಯಾಯ ವಿಂಗ ಡಣೆ ಸಮರ್ಥವಾಗಿದೆ. ಪರಿ ಚಯಾತ್ಮಕವಾದ ಮತ್ತು ಆಪ್ತ ವಾದ ವಿಶ್ಲೇಷಣೆಯನ್ನು ಅವರು ಮಾಡಿದ್ದಾರೆ. ಡಾ.ಪಿ.ವಿ.ನಾಗ ರಾಜ್ ಅವರ ‘ಹಚ್ಚೇವು ಕನ್ನಡದ ದೀಪ’ ಸಂಶೋಧನ ಕೃತಿಯ ಮಹತ್ವವೆಂದರೆ, ರಾಜ್ಯವು ರೂಪುಗೊಳ್ಳುವಲ್ಲಿ, ರೂಪುಗೊಂಡು ತನ್ನ ಚಹರೆ ರೂಪಿಸಿಕೊಳ್ಳುವಲ್ಲಿ ಹೇಗೆ ಚಲನಚಿತ್ರೋದ್ಯಮವು ಒಂದು ಉಪಕರಣವಾಗಿ ದುಡಿದಿದೆ ಎಂಬ ಚರಿತ್ರೆಯನ್ನು ಹಿಡಿದಿಡಲು ಯತ್ನಿಸಿರುವುದು. ಇದು ಸಾಂಸ್ಕೃತಿಕವಾಗಿ ಮುಖ್ಯವಾದುದು.

ಇದಕ್ಕೆ ಕಾರಣ, ಸಂಶೋಧಕರು ಭಾಷಾವಾಚಕ ಕನ್ನಡ, ಪ್ರದೇಶವಾಚಕ ಕರ್ನಾಟಕ ಹಾಗೂ ಜನವಾಚಕ ಕನ್ನಡಿಗರ ಪರಿಕಲ್ಪನೆಯನ್ನು ಜೋಡಿಸಿರುವುದು. ಕರ್ನಾಟಕ ರೂಪುಗೊಳ್ಳುವಲ್ಲಿ ಸಾಮಾಜಿಕ ಚಳವಳಿಗಳು ರಾಜಕೀಯ ವಿದ್ಯಮಾನಗಳು ಲೇಖಕರ ಬರೆಹಗಳಷ್ಟೆ ಮುಖ್ಯವಾದುದು, ಸಿನಿಮಾ ಮತ್ತು ರಂಗಭೂಮಿಗಳು.

ಈ ಹಿನ್ನೆಲೆಯಲ್ಲಿ ನಾಗರಾಜ್ ಅವರು ಕರ್ನಾಟಕದ ಆಸ್ಥಿತೆಯನ್ನು ಕೇಂದ್ರದಲ್ಲಿಟ್ಟುಕೊಂಡು ಹಾಡುಗಳನ್ನು ವಿಶ್ಲೇಷಿಸಿದ್ದಾರೆ. ಕನ್ನಡದ ಕಾವ್ಯದ ಜತೆ ಸಿನಿಮಾ ಉದ್ಯಮವು ಮಾಡಿರುವ ಅನುಸಂಧಾನದ ಬಗ್ಗೆ ಅವರು ಬರೆದಿರುವ ಅಧ್ಯಾಯವು ಕುತೂಹಲಕರವಾಗಿದೆ. ಕನ್ನಡ ಓದುಗರು ಈ ಪುಸ್ತಕವನ್ನು ಓದಲಿ. ಸಂಶೋಧಕರಿಗೆ ತಮ್ಮ ಮೆಚ್ಚುಗೆ ಮತ್ತು ವಿಮರ್ಶೆಗಳನ್ನು ತಲುಪಿಸಲಿ.

ಮನುಷ್ಯನ ಬಗ್ಗೆ ನಂಬಿಕೆ ಹುಟ್ಟಿಸುವ ಗುರುವೇ ನಿಮಗೆ ಶರಣು
ಡಾ.ಸರ್ಜಾಶಂಕರ್ ಹರಳಿಮಠ

‘ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ಕನಿಷ್ಠ ನೂರಕ್ಕೆ ಐವತ್ತಷ್ಟಾದರೂ ಕಾರಣ ನಾನಲ್ಲ. ‘ನಾನು’ ಎನ್ನುವ ‘ನನ್ನನ್ನು’ ರೂಪಿಸಿದ ನನ ಕುಟುಂಬವಿದೆ, ನನ ಸುತ್ತಲ ಸಮಾಜವಿದೆ, ಒಂದಷ್ಟು ಮಿತಿಗಳ ನಡುವೆಯೂ ನನ್ನನ್ನು ನನ್ನಿಷ್ಟದಂತೆ ಬದುಕಲು ಹಿರಿಯರು ಹೋರಾಟದ ಮೂಲಕ ತಂದ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ, ಸಂವಿಧಾನವಿದೆ.

ಬಹಳ ಮುಖ್ಯವಾಗಿ ‘ನನಗೆ ಪ್ರತ್ಯಕ್ಷವಾಗಿ ಬೋಧಿಸಿದ ಅಥವಾ ಪರೋಕ್ಷವಾಗಿ ಮಾರ್ಗದರ್ಶನ ಮಾಡಿದ ಶಿಕ್ಷಕರಿದ್ದಾರೆ. ಈ ‘ಶಿಕ್ಷಕರು’ ಎಲ್ಲರೂ ವೃತ್ತಿಯಿಂದ ಶಿಕ್ಷಕರಲ್ಲದೇ ಇರಬಹುದು, ಆದರೆ ಗೊಂದಲಗಳ, ಅಸ್ಪಷ್ಟತೆಗಳಿಂದ ಮುಸುಕಿದ ಮಬ್ಬಿನಲಿ ‘ನನ್ನ ಪಾಲಿಗೆ ಅವರು ಶಿಕ್ಷಕರಂತೆ ಕೈಹಿಡಿದು ಮುನ್ನಡೆಸಿದ್ದಾರೆ. ಕರುಣೆಯ ಬೆಳಕಾಗಿದ್ದಾರೆ…’

ಇದು ಪ್ರತಿಯೊಬ್ಬ ‘ನಾನು’ಗೂ ಅನ್ವಯ. ಆದರೆ ಅಪರೂಪಕ್ಕೊಬ್ಬರು ಇದನ್ನು ಮನಗಾಣುತ್ತಾರೆ. ಇಂತಹ ಅಪರೂಪದಲ್ಲೊಬ್ಬರು ಡಾ.ಪಿ.ವಿ.ನಾಗರಾಜ್. ನಾಗರಾಜ್ ಅವರ ‘ಗುರುವೇ ನಿಮಗೆ ಶರಣು’ ಕೃತಿಯ ಪ್ರತಿಪುಟವೂ ತಮ್ಮ ಗುರುಗಳ ಕುರಿತ ಆದ್ರ್ರ ಕೃತಜ್ಞತೆಯಿಂದ ಮಿಂದೆದ್ದು ಬಂದಿದೆ. ಇಲ್ಲಿನ ಗುರುವೃಂದದಲ್ಲಿ ಬಹುಭಾಷೆ ಕಲಿಸಿದವರು, ಸಾಹಿತ್ಯವಿಮರ್ಶೆ ಕಲಿಸಿದವರು, ತಂತ್ರಜ್ಞಾನ ಹೇಳಿಕೊಟ್ಟವರು. ಬೌದ್ಧಿಕಪ್ರಜ್ಞೆಯನ್ನು ವಿಸ್ತರಿಸಿದವರು, ತನ್ನಂತರಂಗವನ್ನು ತೆರೆಸಿದವರು, ತಾಯ್ತನದ ಪ್ರೀತಿ ಧಾರೆಯೆರೆದವರು… ಹೀಗೆ ಎಲ್ಲರೂ ಇದ್ದಾರೆ. ಹಾಗೆಂದು ಇವುಗಳು ಗುರುಗಳಿಗೆ ಕೃತಜ್ಞತೆ ಹೇಳುವ ವಿದ್ಯಾರ್ಥಿದಿಸೆಯ ಕೊನೆಯ ದಿನದ ಔಪಚಾರಿಕ ಮಾತುಗಳಲ್ಲ. ಪ್ರಾಥಮಿಕ ತರಗತಿಯಿಂದ ಪಿಎಚ್.ಡಿ. ಪದವಿ ಪಡೆಯುವವರೆಗಿನ ಹಾದಿಯಲ್ಲಿ ದಾರಿ ತೋರಿದ ಪ್ರತಿಯೊಬ್ಬ ಗುರುವೂ ತನಗೆ ಕಲಿಸಿದ್ದನ್ನು ವಿವರವಾಗಿ ನಿವೇದಿಸುವ ಆಪ್ತಬರಹಗಳಿವು. ಹೊರಗಿನ ಕಣ್ಣು ಆಕಸ್ಮಿಕವಾಗಿ ಕಳಕೊಂಡರೂ ತಮ್ಮ ಅಗಾಧ ನೆನಪಿನ ಶಕ್ತಿಯಿಂದ ದಶಕಗಳ ಹಿಂದೆ ಕಲಿತಿದ್ದನ್ನೂ ಮರುಜೀವಗೊಳಿಸುವ ವಿಸ್ಮಯಗಳಿವು.

ಎಲ್ಲರಿಗೂ ತಮಗೆ ವಿಶಿಷ್ಟವಾದುದನ್ನು ದಯಪಾಲಿಸಿದ ಕೆಲವರಾದರೂ ಗುರುಗಳಿರುತ್ತಾರೆ. ಆದರೆ ಇವರನ್ನೆಲ್ಲ ಕೃತಜ್ಞತೆಯಿಂದ ಕಾಣುವ ಕಣ್ಣು ಇರುವುದಿಲ್ಲ. ಅಂತಹ ಕಣ್ಣಿದ್ದರೂ ಇದನ್ನೆಲ್ಲ ಹಲವು ಜನರ ಕಣ್ಣಿಗೆ, ಕಿವಿಗೆ ಬೀಳಿಸಬಲ್ಲ ಅಕ್ಷರಕ್ಕೋ, ಧ್ವನಿಗೋ ಪರಿವರ್ತಿಸುವ ಒಳಗಿನ ಒರತೆಯಲ್ಲಿ ಜೀವಜಲ ಇರುವುದಿಲ್ಲ. ವ್ಯಕ್ತಿ ತೀವ್ರಗತಿಯಲ್ಲಿ ಸಮುದಾಯಪ್ರಜ್ಞೆಯಿಂದ ವ್ಯಕ್ತಿವಾದಿಯಾಗುತ್ತಿರುವ ವಿಷಮ ಕಾಲಘಟ್ಟದ ಸಮಕಾಲೀನ ಸಂದರ್ಭದಲ್ಲಿ ‘ವಿಶೇಷ ಕಣ್ಣಿನ’ ಮೂಲಕ ಹುಟ್ಟಿಬಂದ ‘ಗುರುವೇ ನಿಮಗೆ ಶರಣು’ ಕೃತಿ ಮನುಷ್ಯನ ಬಗ್ಗೆ ನಂಬಿಕೆ ಹುಟ್ಟಿಸುವ ಭರವಸೆ ಮೂಡಿಸುತ್ತಿದೆ.