Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕುಂಡೆ ಹಬ್ಬದ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ

ವಾಹನ ತಡೆದು ಹಣ ವಸೂಲಿ; ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಕೆ. ಬಿ. ಶಂಶುದ್ದೀನ್

ಕುಶಾಲನಗರ: ಕುಂಡೆ (ಬೇಡು) ಹಬ್ಬದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಆದಿವಾಸಿಗಳು ಹಣ ಸಂಗ್ರಹ ಮಾಡುವುದು ಸಾಮಾನ್ಯ. ಆದರೆ ಹಬ್ಬದ ಹೆಸರಿನಲ್ಲಿ ವಾಹನ ತಡೆದು ಹಣ ವಸೂಲಿ ಮಾಡುವುದು, ಅವಾಚ್ಯ ಶಬ್ದಗಳನ್ನು ಬಳಸುವ ಮೂಲಕ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರದ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಕೊಡಗಿನ ಬುಡಕಟ್ಟು ಜನಾಂಗವಾದ ಜೇನು ಕುರುಬರ ಪ್ರಸಿದ್ಧವಾದ ಬೇಡು ಹಬ್ಬ ಕುಂಡೆ ಹಬ್ಬವೆಂದು ಪ್ರಖ್ಯಾತಿ. ಪ್ರತಿ ವರ್ಷ ನಡೆಯುವ ಈ ಹಬ್ಬಕ್ಕೆ ಆದಿವಾಸಿಗಳು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಹಣ ಸಂಗ್ರಹ ಮಾಡುತ್ತಾರೆ. ಸಾರ್ವಜನಿಕರು ಕೂಡ ಹಣ ನೀಡುತ್ತಾರೆ. ಆದರೆ ಇತ್ತೀಚೆಗೆ ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದು, ಸಾರ್ವಜನಿ ಕರಿಗೆ ಕಿರುಕುಳ ಉಂಟಾಗುತ್ತಿದೆ.

ವಾಹನ ತಡೆದು ಹಣ ವಸೂಲಿ: ಬೇಡು ಹಬ್ಬದ ಹೆಸರನ್ನು ಹೇಳಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಒಂದೆಡೆ ಇದರಿಂದ ಸಾರ್ವಜನಿಕರಿಗೆ ಕಿರುಕುಳವಾದರೆ ಮತ್ತೊಂದೆಡೆ ಕಿಲೋ ಮೀಟರ್‌ಗಟ್ಟಲೇ
ವಾಹನಗಳು ಸರತಿ ಸಾಲು ನಿಂತು ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿದೆ. ಸ್ಥಳದಲ್ಲಿ ಪೊಲೀಸರೂ ಇರುವುದಿಲ್ಲ. ಇದರಿಂದಾಗಿ ವಾಹನ ಚಾಲಕರು ಕಾದು ನಿಲ್ಲಬೇಕಾಗಿದೆ. ಕುಶಾಲನಗರದ ಬೈಚನಹಳ್ಳಿಯಲ್ಲಿ ಆದಿವಾಸಿಗಳು ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್‌ನಿಂದ ವಾಹನಗಳು ಸರತಿ ಸಾಲು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಹಲವೆಡೆ ಆದಿವಾಸಿಗಳಿಂದ ಸಾರ್ವಜನಿಕರಿಗೆ ಕಿರುಕುಳ ಉಂಟಾಗುತ್ತಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಣ ನೀಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದನೆ: ಬೇಡು ಹಬ್ಬದ ಹೆಸರನ್ನು ಹೇಳಿ ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಹಣ ನೀಡದಿದ್ದಲ್ಲಿ ಆದಿವಾಸಿಗಳು ಅವಾಚ್ಯ ಶಬ್ದಗಳನ್ನು ಬಳಸಿ ಸಾರ್ವಜನಿಕರನ್ನು ನಿಂದಿಸುತ್ತಿದ್ದಾರೆ. ಮದ್ಯದ ಅಮಲಿನಲ್ಲಿರುವವರೊಂದಿಗೆ ಹೆಚ್ಚು ಮಾತನಾಡಲು ಸಾಧ್ಯವಾಗದೇ, ಇವರ ಕಿರುಕುಳವನ್ನೂ ಸಹಿಸಲಾಗದೆ ಜನಸಾಮಾನ್ಯರು ಹೈರಾಣಾಗಿದ್ದಾರೆ. ಈ ರೀತಿ ಸಾರ್ವಜನಿ ಕರಿಗೆ ತೊಂದರೆ ನೀಡುವುದರ ಬಗ್ಗೆ ಪೊಲೀಸರು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Tags:
error: Content is protected !!