Mysore
22
overcast clouds

Social Media

ಸೋಮವಾರ, 29 ಜೂನ್ 2026
Light
Dark

ರಾಮಮಂದಿರದಲ್ಲಿ ಅಕ್ರಮ; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

Over 5.5 Crore Devotees Have Visited Ayodhya Ram Temple So Far

ಉತ್ತರ ಪ್ರದೇಶದ ಅಯೋಧ್ಯಾ ರಾಮಮಂದಿರದಲ್ಲಿ ಕಾಣಿಕೆ ಹಣ ಹಾಗೂ ದೇಣಿಗೆಯನ್ನು ದುರ್ಬಳಕೆ ಮಾಡಿರುವುದು ಅನೂಹ್ಯ ಪ್ರಕರಣ. ಇದರಿಂದ ಕೋಟ್ಯಂತರ ಜನರ ನಂಬಿಕೆಯ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ. ಮೂರು ವರ್ಷಗಳ ಹಿಂದೆ ಅಸಂಖ್ಯಾತ ಜನರ ಧಾರ್ಮಿಕ ಮನೋಭಾವದ ಪ್ರತೀಕವಾಗಿ ರಾಮಮಂದಿರವನ್ನು ಉದ್ಘಾಟಿಸಲಾಯಿತು. ಬಡವ- ಬಲ್ಲಿದ ಎಂಬ ಭೇದಭಾವ ಇಲ್ಲದೆ ಬಹುತೇಕ ಎಲ್ಲ ಜನರೂ ಇದಕ್ಕೆ ತನು ಮನ ಧನದ ಮೂಲಕ ಬೆಂಬಲ ನೀಡಿದ್ದು ಅವಿಸ್ಮರಣೀಯ. ಆದರೆ, ಈಗ ‘ಬೇಲಿಯೇ ಎದ್ದು ಹೊಲ ಮೇಯಿತು’ ಎಂಬಂತಾಗಿದೆ.

ಪ್ರಕರಣದ ಆರೋಪಿಗಳಾಗಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯ ಕಾರು ಚಾಲಕ ಸೇರಿದಂತೆ ೮ ಮಂದಿಯನ್ನು ಈಗಾಗಲೇ ವಿಶೇಷ ತನಿಖಾ ದಳ (ಎಸ್ ಐಟಿ) ಬಂಧಿಸಿದೆ. ಕಾಣಿಕೆ ಹಣ ಹಾಗೂ ದೇಣಿಗೆಯನ್ನು ಅಕ್ರಮವಾಗಿ ಹೇಗೆ ವರ್ಗಾವಣೆ ಮಾಡಲಾಯಿತು. ಎಷ್ಟು ಮೊತ್ತ ನಗದು ಕಳವು ಮಾಡಲಾಗಿದೆ ಎಂಬುದರ ಕುರಿತು ಎಸ್‌ಐಟಿ ತನಿಖೆ ಯನ್ನು ಮುಂದುವರಿಸಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.

ರಾಮಮಂದಿರದ ಆಡಳಿತ ಮಂಡಳಿಯು ‘ಪ್ರಮಾಣಿತ ಕಾರ್ಯಾಚರಣಾ ವಿಧಾನ’ (ಎಸ್‌ಒಪಿ)ವನ್ನು ಅನುಸರಿಸಿಲ್ಲ ಎಂದು ಎಸ್‌ಐಟಿ ತನಿಖೆಯ ಪ್ರಾಥಮಿಕ ವರದಿಯಲ್ಲಿ ಹೇಳಿದೆಯಂತೆ. ದೇಣಿಗೆ ಲೆಕ್ಕದ ವೇಳೆ ಸೆರೆಹಿಡಿದ ಸಿಸಿಟಿವಿ ದೃಶ್ಯಗಳನ್ನು ೧೮೦ ದಿನಗಳವರೆಗೆ ರಕ್ಷಿಸಿಡುವುದು ಇತ್ಯಾದಿ ಸಂದರ್ಭಗಳಲ್ಲಿ ಎಸ್ ಒಪಿ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಇದೆ. ಎಸ್‌ಒಪಿ ಪ್ರಕಾರ ಕಾಣಿಕೆ ಎಣಿಕೆ ಮಾಡುವ ಸಿಬ್ಬಂದಿ ಜೇಬು ಇರದ ಉಡುಪು ಧರಿಸಿರಬೇಕು. ಸೈನಿಕ್ ಸೆಕ್ಯೂರಿಟಿ ಸರ್ವೀಸಸ್ (ಎಸ್‌ಐಎಸ್)ನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬುದೂ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ. ದೇಣಿಗೆ ಎಣಿಕೆ ಸ್ಥಳದ ಪಕ್ಕದ ಶೌಚಾಲಯದಲ್ಲಿ ೨.೫ ಲಕ್ಷ ರೂ. ನಗದು ಪತ್ತೆಯಾಗಿದೆಯಂತೆ. ಇದು ಜನಸಾಮಾನ್ಯರು ಟ್ರಸ್ಟ್ ಮೇಲಿಟ್ಟಿದ್ದ ನಂಬಿಕೆಯನ್ನು ಘಾಸಿಗೊಳಿಸಿದೆ. ಹಿಂದೂ ಪರ ಸಂಘಟನೆಗಳು, ರಾಮ ಭಕ್ತರು ದೀರ್ಘ ಹೋರಾಟ ನಡೆಸಿದ್ದರ ಫಲವಾಗಿ ರಾಮಮಂದಿರ ನಿರ್ಮಾಣ ಮಾಡಲಾಯಿತು. ಇಂತಹದ್ದೊಂದು ನಾಚಿಕೆಗೇಡು ಸಂಗತಿ ನಡೆಯತ್ತದೆ ಎಂಬುದರ ಕಲ್ಪನೆ ಯಾರಿಗೂ ಇರಲಿಲ್ಲ. ಇದೇ ವೇಳೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್ ಹಾಗೂ ಸದಸ್ಯ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಆದರೆ, ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರಕರಣವನ್ನು ಭೇದಿಸಲು ಎಸ್‌ಐಟಿಗೆ ಸಹಕಾರ ನೀಡಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಜೈಲಿಗೆ ಕಳುಹಿಸಬೇಕು. ಇಂತಹ ಪ್ರಕರಣಗಳು ಧಾರ್ಮಿಕ ಮನೋಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.

ಅಲ್ಲದೆ, ಟ್ರಸ್ಟ್ ಆಡಳಿತ ಮಂಡಳಿಯು ಈ ಪ್ರಕರಣದ ಪಾರದರ್ಶಕ ತನಿಖೆಗೆ ಪ್ರಾಮಾಣಿಕವಾಗಿ ಬೆಂಬಲ ನೀಡಬೇಕಾಗಿದೆ. ಜನರು ತಮ್ಮ ಸಂಕಷ್ಟಗಳ ನಿವಾರಣೆಗಾಗಿ ಕಾಣಿಕೆ ನೀಡಿದ್ದರೆ, ಹಲವರು ದೇವಾಲಯದ ಅಭಿವೃದ್ಧಿಗಾಗಿ ದೇಣಿಗೆ ನೀಡಿರುತ್ತಾರೆ. ನಂಬಿದ್ದವರೇ ದೇವಸ್ಥಾನಕ್ಕೆ ಕನ್ನ ಹಾಕಿಬಿಟ್ಟರೆ ಸಾಮಾನ್ಯ ಜನರ ಪಾಡೇನಾಗಬೇಕು? ಪ್ರಕರಣದಲ್ಲಿ ೮ ಮಂದಿಯನ್ನು ಬಂಧಿಸಿರುವುದರಿಂದ ಎಸ್‌ಐಟಿ ತನಿಖೆಯುಸರಿಯಾದ ದಾರಿಯಲ್ಲಿ ಸಾಗಿದೆ ಎಂದು ಅಂದಾಜು ಮಾಡಬಹುದು. ಬಹುಶಃ ತನಿಖಾ ತಂಡ ಯಾವುದೇ ಪ್ರಭಾವಕ್ಕೆ ಒಳಗಾಗಿಲ್ಲ ಅನಿಸುತ್ತದೆ. ಪ್ರಕರಣದ ಅಂತ್ಯದವರೆಗೂ ತನಿಖೆಯು ಯಾವುದೇ ವಶೀಲಿಬಾಜಿಗೆ ಒಳಗಾಗದೆ ಮುನ್ನಡೆಯಬೇಕು. ಅದಕ್ಕೆ ಸಂಬಂಧಪಟ್ಟ ಸರ್ಕಾರ, ಟ್ರಸ್ಟ್‌ನ ಆಡಳಿತ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳು ಅವಕಾಶ ಮಾಡಿಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಒತ್ತಾಸೆಯಾಗಿ ನಿಲ್ಲಬೇಕು

” ದೇಣಿಗೆ ಲೆಕ್ಕದ ವೇಳೆ ಸೆರೆಹಿಡಿದ ಸಿಸಿಟಿವಿ ದೃಶ್ಯಗಳನ್ನು ೧೮೦ ದಿನಗಳವರೆಗೆ ರಕ್ಷಿಸಿಡುವುದು ಇತ್ಯಾದಿ ಸಂದರ್ಭಗಳಲ್ಲಿ ಎಸ್‌ಒಪಿ  ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಇದೆ. ಎಸ್‌ಒಪಿ ಪ್ರಕಾರ ಕಾಣಿಕೆ ಎಣಿಕೆ ಮಾಡುವ ಸಿಬ್ಬಂದಿ ಜೇಬು ಇರದ ಉಡುಪು ಧರಿಸಿರಬೇಕು. ಸೈನಿಕ್ ಸೆಕ್ಯೂರಿಟಿ ಸರ್ವೀಸಸ್ (ಎಸ್‌ಐಎಸ್)ನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬುದೂ ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಸಲಾಗಿದೆ ಎಂದು ಹೇಳಲಾಗಿದೆ.”

 

 

Tags:
error: Content is protected !!