Mysore
28
overcast clouds

Social Media

ಶನಿವಾರ, 23 ಮೇ 2026
Light
Dark

ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಹೆಚ್ಚಿನ ಬೇಡಿಕೆ ನಿರೀಕ್ಷೆ

ಗಿರೀಶ್ ಹುಣಸೂರು

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ ಹಿನ್ನೆಲೆ

ಮೈಸೂರು: ಶೈಕ್ಷಣಿಕ ವರ್ಷದ ಆರಂಭಕ್ಕೆ ದಿನಗಣನೆ ಆರಂಭ ವಾಗಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಬಿರುಸಿನಿಂದ ನಡೆದಿದ್ದರೆ, ಶಿಕ್ಷಣ ಬಯಸಿ ಹಳ್ಳಿಗಾಡಿನಿಂದ ತಾಲ್ಲೂಕು ಕೇಂದ್ರದಲ್ಲಿರುವ ಶಾಲೆಗಳು, ಜಿಲ್ಲಾ ಕೇಂದ್ರಗಳಲ್ಲಿರುವ ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಆಶ್ರಯ ಕಲ್ಪಿಸುವ ವಿದ್ಯಾರ್ಥಿನಿಲಯಗಳಿಗೂ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ.

ಸಮಾಜ ಕಲ್ಯಾಣ ಇಲಾಖೆಯಡಿ ಮೈಸೂರು ಜಿಲ್ಲೆಯ ೮೨ ಸೇರಿದಂತೆ ರಾಜ್ಯಾದ್ಯಂತ ೨,೧೪೭ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳೂ ಸೇರಿ ಕಳೆದ ಸಾಲಿನಲ್ಲಿ ೨.೫೦ ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ವರ್ಷ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಉತ್ತೀರ್ಣರಾಗಿ,ಉನ್ನತ ಶಿಕ್ಷಣ ಬಯಸಿ ನಗರ ಪ್ರದೇಶಗಳಲ್ಲಿನ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ‘ದಾಖಲೆ ಪ್ರಮಾಣ’ದಲ್ಲಿಯೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಹೀಗೆ ಉನ್ನತ ಶಿಕ್ಷಣ ಅರಸಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಬರುವ ಬಡ-ಮಧ್ಯಮವರ್ಗದ ವಿದ್ಯಾರ್ಥಿಗಳ ಆಯ್ಕೆ ‘ವಿದ್ಯಾರ್ಥಿನಿಲಯ’ಗಳೇ ಆಗಿವೆ. ಕೆಲವು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡು ಮನೆ-ಕಾಲೇಜುಗಳ ನಡುವೆ ಓಡಾಡುತ್ತಲೇ ಶಿಕ್ಷಣ ಪೂರೈಸುತ್ತಾರೆ. ಆದರೆ, ಹೆಚ್ಚಿನವರು ವಿದ್ಯಾರ್ಥಿನಿಲಯಗಳಲ್ಲಿದ್ದು ಶಿಕ್ಷಣ ಪಡೆಯಲು ಆಸಕ್ತಿ ತೋರುತ್ತಾರೆ. ಇನ್ನು ಮೇಲ್ಮಧ್ಯಮ ವರ್ಗ ಮತ್ತು ಸ್ಥಿತಿವಂತ ಕುಟುಂಬಗಳವರು ತಮ್ಮ ಮಕ್ಕಳನ್ನು ವಿದ್ಯಾರ್ಥಿನಿಲಯಗಳಲ್ಲಿರಿಸಲು ಬಯಸದೆ ‘ಪೇಯಿಂಗ್ ಗೆಸ್ಟ್’ (ಪಿಜಿ)ಗಳಲ್ಲಿ ಉಳಿಸುತ್ತಾರೆ. ಆದರೆ, ಬಹುತೇಕ ವಿದ್ಯಾರ್ಥಿಗಳ ಆಯ್ಕೆ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ನಿರ್ವಹಿಸುವ ವಿದ್ಯಾರ್ಥಿನಿಲಯಗಳೇ ಆಗಿವೆ.

ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಮೆಟ್ರಿಕ್ ಪೂರ್ವ ೪೭, ಮೆಟ್ರಿಕ್ ನಂತರದ ೩೫ ವಿದ್ಯಾರ್ಥಿನಿಲಯಗಳು ಹಾಗೂ ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ೧ ರಿಂದ ೫ನೇ ತರಗತಿವರೆಗಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿವೆ. ೯ ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಸೇರಿ ಜಿಲ್ಲೆಯಲ್ಲಿ ಒಟ್ಟಾರೆ ೭ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ವರ್ಷ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ ಎಂಬ ನಿರೀಕ್ಷೆ ಸಹಜವಾಗಿಯೇ ಇದೆ.

ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಶೈಕ್ಷಣಿಕವಾಗಿ ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತಿ ಜಿಲ್ಲೆಗೆ ೧೫೦ ಸಂಖ್ಯಾಬಲದ ಒಂದು ಬಾಲಕಿಯರ ಮತ್ತು ಒಂದು ಬಾಲಕರ ಒಟ್ಟು ೬೨ ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದು, ಈ ವಿದ್ಯಾರ್ಥಿನಿಲಯ ಗಳ ಕಾರ್ಯಾರಂಭಕ್ಕೆ ಸರ್ಕಾರ ಇನ್ನಷ್ಟೇ ಆದೇಶ ಹೊರಡಿಸಬೇಕಿದೆ.

ಇದಲ್ಲದೆ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಸೌಲಭ್ಯಗಳಾದ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್, ಸೋಲಾರ್ ವಾಟರ್ ಹೀಟರ್ ಮತ್ತು ಡೈನಿಂಗ್ ಟೇಬಲ್‌ಗಳನ್ನು ಒದಗಿಸಲು ಬಜೆಟ್ನಲ್ಲಿ ೨೫ ಕೋಟಿ ರೂ. ಮೀಸಲಿರಿಸಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಿಂದ ೬,೫೬೨ ವಸತಿ ನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಪ್ರಸ್ತುತ ೮.೫೦ ಲಕ್ಷ ನಿಲಯಾರ್ಥಿಗಳಿದ್ದು, ಇವುಗಳ ನಿರ್ವಹಣೆಯಲ್ಲಿ ಸುಧಾರಣೆ ತರಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹೇಳಲಾಗಿದ್ದು, ಈ ಬಗ್ಗೆಯೂ ಸರ್ಕಾರ ಆದೇಶ ಹೊರಡಿಸಬೇಕಿದೆ.

ದಶಕಗಳ ಹಿಂದೆ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಿ, ದುಂಬಾಲು ಬಿದ್ದು ಗಣ್ಯರಿಂದ ಶಿ-ರಸು ಮಾಡಿಸಿ ಕಾಯಬೇಕಿತ್ತು. ಆದರೆ, ಈಗಿನ ಪರಿಸ್ಥಿತಿ ಭಿನ್ನ. ‘ಹಾಸ್ಟೆಲ್ ಫಾರ್ ಆಲ್’ ಎಂಬುದು ಸಮಾಜ ಕಲ್ಯಾಣ ಇಲಾಖೆಯ ಆಶಯ. ಅದರಂತೆಯೇ ಶಾಲಾ-ಕಾಲೇಜುಗಳಿಗೆ ದಾಖಲಾಗಿ ಬರುವ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ.

” ಎಲ್ಲರಿಗೂ ವಿದ್ಯಾರ್ಥಿನಿಲಯ’ ಎಂಬುದು ಸಮಾಜ ಕಲ್ಯಾಣ ಇಲಾಖೆಯ ಆಶಯ. ಸದ್ಯ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್ ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ದಾಖಲಾಗಿ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಕಲ್ಪಿಸಲಾಗುವುದು.”

ಬಿ.ರಂಗೇಗೌಡ, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮೈಸೂರು

 

 

Tags:
error: Content is protected !!