Mysore
29
overcast clouds

Social Media

ಶನಿವಾರ, 27 ಜೂನ್ 2026
Light
Dark

ಗಾಂಧೀ ಅಭಿಯಾನ ಅರಿವಿನ ಯಾನ | ಗಾಂಧೀಜಿ ಅಹಿಂಸಾ ಮಾರ್ಗಕ್ಕೆ ಮೈಲಾರ ಮಹಾದೇವ

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ ಮಹದೇವಪ್ಪನವರು. ಹಾವೇರಿ ಜಿಲ್ಲಯ ಮೋಟೆ ಬೆನ್ನೂರಿನಲ್ಲಿ ಮಾರ್ತಾಂಡಪ್ಪ ಹಾಗೂ ಬಸಮ್ಮ ದಂಪತಿಯ ಪುತ್ರರಾಗಿ ೧೯೧೧ ಜೂನ್ ೮ರಂದು ರೈತಾಪಿ ಕುಟುಂಬದಲ್ಲಿ ಮಹದೇವಪ್ಪ ಜನಿಸುತ್ತಾರೆ.

೧೪ನೇ ವಯಸ್ಸಿನಲ್ಲಿಯೇ ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಂಡು ಶಾಲೆ, ಮನೆ, ಹುಟ್ಟೂರನ್ನು ತೊರೆದು ಹೋರಾಟದ ಕೇಂದ್ರಗಳಾದ ಧಾರವಾಡ, ಕಲಾದಿಗಳಲ್ಲಿ ವಿಧೇಯಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹೊರಟರು. ಅವಶ್ಯಕ ತರಬೇತಿ ಪಡೆದ ನಂತರ, ಧಾರವಾಡ ಯುವಕರ ಸಂಘದಲ್ಲಿದ್ದ ಹಿರಿಯರಾದ ರಂಗನಾಥ್ ದಿವಾಕರ್, ಹಳ್ಳಿಕೇರಿ ಗುದ್ಲೆಪ್ಪ ಮುಂತಾದ ಹಿರಿಯ ಹೋರಾಟಗಾರರ ಸಂಪರ್ಕ ದೊರೆತು ಅತ್ಯುತ್ಸಾಹದಿಂದ ಮಹದೇವಪ್ಪ ತಾನು ಇನ್ನೂ ಹೆಚ್ಚಿನ ಪಾತ್ರವಹಿಸಬೇಕು. ಸ್ವಾತಂತ್ರ್ಯ ಆಂದೋಲನದಲ್ಲಿ ಎಂದು ಅಂದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಒಂದು ಸುದಿನ ಅವರನ್ನು ಅರಸಿಕೊಂಡು ಬಂದೇ ಬಿಟ್ಟಿತು. ಈತನ ಮನೋ ಇಂಗಿತವನ್ನು ಅರಿತ ದಿವಾಕರರು ಗಾಂಧೀಜಿಯವರ ಕೋರಿಕೆಯಂತೆ, ಮಹದೇವ ಅವರನ್ನು ಸಬರಮತಿಗೆ ಕಳುಹಿಸಿಕೊಡಲು ಮುಂದಾದರು. ಇದನ್ನೇ ಕಾಯುತ್ತಿದ್ದ ಆತ ಅತ್ಯುತ್ಸಾಹದಿಂದ ಅಲ್ಲಿಗೆ ಹೊರಟ. ದಿನಕಳೆದಂತೆ ಮಹದೇವಪ್ಪನವರ ಮನದಲ್ಲಿ ದೇಶಭಕ್ತಿ ಮತ್ತು ಗಾಂಧಿ ಭಕ್ತಿ ಹೆಚ್ಚಾಗತೊಡಗಿತು. ಕಾರಣ ಪ್ರಾಥಮಿಕ ಪಡೆಯುವಾಗ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಸಕ್ರಿಯ ಭಾಗವಹಿಸುವಿಕೆ ಹಾಗೂ ಅವರ ತತ್ವ ಆದರ್ಶಗಳು ಎಳೆಯ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವವನ್ನುಂಟು ಮಾಡಿದ್ದವು. ಮಹದೇವಪ್ಪನವರು ಸಬರಮತಿ ಆಶ್ರಮಕ್ಕೆ ಹೋದಾಗ ೧೭ ವರ್ಷದ ತರುಣ.

ಯುವಕನನ್ನು ನೋಡಿದ ಗಾಂಧೀಜಿಯವರು ಕೆಲವು ಪ್ರಶ್ನೆಗಳನ್ನು ಕೇಳಿದರು ಮತ್ತು ಕೆಲವು ಪರೀಕ್ಷೆಗಳನ್ನು ಮಾಡಿದರು. ಮಹಾದೇವಪ್ಪನವರು ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಜೊತೆಗೆ ಅವರು ಸಬರಮತಿ ಆಶ್ರಮದಲ್ಲಿ ಉಳಿಯಲು ಅನುಮತಿಯನ್ನೂ ನೀಡಿದರು. ಮಹದೇವಪ್ಪ ಅವರ ತಂದೆಯವರು ಮಗನನ್ನು ಕೃಷಿಯಲ್ಲಿ ತೊಡಗಿಸಲು ಪ್ರಯತ್ನಿಸಿದರು. ಆದರೆ ಮಹದೇವಪ್ಪನವರು ತಮ್ಮ ಅಂತರಂಗದಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು. ೧೬ನೇ ವಯಸ್ಸಿನಲ್ಲಿಯೇ ಮಹಾದೇವಪ್ಪನವರು ಸಿದ್ಧಮ್ಮ ಎಂಬವರೊಂದಿಗೆ ವಿವಾಹವಾದರು.

ಮುಂದೆ ಮಹದೇವಾ ಅವರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಹಲವು ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹ ಬಹಳ ಮುಖ್ಯವಾದದ್ದಾಗಿದೆ. ಈ ಚಳವಳಿಯಲ್ಲಿ ಕರ್ನಾಟಕದ ಏಕೈಕ ಪ್ರತಿನಿಧೀಯಾಗಿ ಮೈಲಾರ ಮಹದೇವ ಭಾಗವಹಿಸಿದ್ದು ವಿಶೇಷ. ಬ್ರಿಟಿಷ್ ಸರ್ಕಾರವು ಜನರಿಗೆ ಉಪ್ಪು ತಯಾರಿಸುವ ಇದ್ದ ಹಕ್ಕನ್ನು ರದ್ದುಪಡಿಸಿತು. ದಿನನಿತ್ಯ ಬೇಕಾದ ಉಪ್ಪನ್ನು ಜನರು ತಾವಾಗಿಯೇ ತಯಾರಿಸದಂತಾದರು. ಉಪ್ಪಿನ ಮೇಲೆ ಕರ ಹೇರಿದ್ದರಿಂದ ಜನರಿಗೆ ಅದನ್ನು ಭರಿಸುವುದು ಸಾಧ್ಯವಾಗಲಿಲ್ಲ. ಉಪ್ಪನ್ನು ತಯಾರಿಸಲು ಹೇರಿದ ನಿರ್ಬಂಧ ತೆಗೆದು ಹಾಕಬೇಕು ಹಾಗೂ ತೆರಿಗೆಯನ್ನು ರದ್ದುಪಡಿಸಬೇಕು ಎಂದು ವೈಸ್ರಾಯ್ ಲಾರ್ಡ್ ಇರ್ವಿನ್ ಅವರಿಗೆ ಗಾಂಽಜಿಯವರು ಮಾಡಿದ ಮನವಿಯನ್ನು ತಿರಸ್ಕರಿಸಿದ್ದರಿಂದ ಗಾಂಧೀಜಿಯವರು ಉಪ್ಪಿನ ಕಾಯಿದೆಯನ್ನು ಉಲ್ಲಂಘನೆ ಮಾಡಬೇಕೆಂದು ತೀರ್ಮಾನಿಸಿದರು.

ಸಬರಮತಿ ಆಶ್ರಮದಿಂದ ಸುಮಾರು ೨೪೧ ಮೈಲಿ ದೂರದಲ್ಲಿ ಅರಬ್ಬಿ ಸಮುದ್ರದ ದಂಡೆಯ ಮೇಲಿರುವ ‘ದಾಂಡಿ’ ಎಂಬ ಗ್ರಾಮಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಅಲ್ಲಿ ಉಪ್ಪಿನ ಕಾಯ್ದೆಯನ್ನು ಉಲ್ಲಂಘನೆ ಮಾಡಲು ತೀರ್ಮಾನಿಸಿದರು. ಈ ಕಾರ್ಯದಲ್ಲಿ ಒಟ್ಟು ೭೮ ಆಶ್ರಮವಾಸಿಗಳನ್ನು ಈ ಸತ್ಯಾಗ್ರಹದಲ್ಲಿ ಭಾಗವಹಿಸಲು ಆರಿಸಿಕೊಂಡರು. ಜೀವದ ಹಂಗನ್ನು ತೊರೆದು ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಗಾಂಽಜಿ ಸತ್ಯಾಗ್ರಹಿಗಳಿಗೆ ಕರೆಕೊಟ್ಟರು.

೧೨ನೇ ಮಾರ್ಚ್, ೧೯೩೦ ರಂದು ಮಹಾತ್ಮ ಗಾಂಧೀಜಿಯವರು ತಾವೇ ಸ್ವತಃ ಆರಿಸಿಕೊಂಡ ೭೮ ಸ್ವಾತಂತ್ರ್ಯ ವೀರರೊಂದಿಗೆ ಸಬರಮತಿಯಿಂದ ದಾಂಡಿಯವರೆಗೆ ಯಾತ್ರೆಯನ್ನು ಆರಂಭಿಸಿದರು. ಈ ಗುಂಪಿನಲ್ಲಿ ಕರ್ನಾಟಕದ ಏಕೈಕ ಪ್ರತಿನಿಽಯಾಗಿದ್ದವರು ಮೈಲಾರ ಮಹಾದೇವಪ್ಪ ಅವರೊಬ್ಬರೇ. ಅವರ ಉಪಸ್ಥಿತಿಯು ಹೊಳೆಯುವ ನಕ್ಷತ್ರದಂತೆ ಸದಾ ನೆನಪಿನಲ್ಲಿ ಉಳಿಯುವಂತಿತ್ತು. ಈ ಯಾತ್ರೆಯಲ್ಲಿ ಸಾವಿರಾರು ಜನ ಭಾರತೀಯರು ಪಾಲ್ಗೊಂಡರು. ಬ್ರಿಟಿಷರ ಚಕ್ರಾಧಿಪತ್ಯವನ್ನು ಅಲುಗಾಡಿಸಿದಂತಹ ಹಾಗೂ ಬಹಳ ಯಶಸ್ಸು ಕಂಡಂತಹ ಚಳವಳಿಯಾಗಿತ್ತು. ಈ ಚಳವಳಿಯಲ್ಲಿ ಗಾಂಧೀಜಿಯವರ ಜೊತೆ ಮಹದೇವಪ್ಪನವರಿಗೂ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲು ಶಿಕ್ಷೆಯಾಗಿದ್ದರಿಂದ ಗಾಂಧೀಜಯವರ ಜೊತೆಗೆ ಒಟ್ಟಿಗೆ ಇಡುವಂತಹ ಅದೃಷ್ಟ ನನ್ನದಾಯಿತು ಎಂದು ಮಹದೇವಪ್ಪ ಆನಂದಪಟ್ಟರು.

ಗುಜರಾತಿನಿಂದ ಕರ್ನಾಟಕಕ್ಕೆ ವಾಪಸ್ಸು ಬಂದ ಇವರನ್ನು ಧಾರವಾಡ, ಹಾವೇರಿ ಮತ್ತು ಮೋಟೆಬೆನ್ನೂರಿನ ನಾಗರೀಕರು ಭವ್ಯ ಸ್ವಾಗತ ನೀಡಿದರು. ಹಾವೇರಿ ಜಿಲ್ಲೆಯಲ್ಲಿರುವ ವರದಾ ನದಿಯ ಎಡ ದಂಡೆಯಲ್ಲಿರುವ ಕೊರಡೂರು ಎಂಬ ಹಳ್ಳಿಯಲ್ಲಿ ಸಬರಮತಿ ಆಶ್ರಮದಂತೆಯೇ ‘ಗ್ರಾಮ ಸೇವಾಶ್ರಮವನ್ನು’ ಸ್ಥಾಪಿಸಿದರು. ಈ ಸೇವಾಶ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಮತ್ತು ವಿವಿಧ ಜಾತಿಗಳ ಜನರಿದ್ದರು. ಇಲ್ಲಿ ನಿಸರ್ಗ ಚಿಕಿತ್ಸೆ, ಯೋಗಾಸನ, ಅಕ್ಷರ ಅಭ್ಯಾಸ ಹಾಗೂ ಚರಕದಿಂದ ನೂಲನ್ನು ತೆಗೆಯುವ ಕೆಲಸವನ್ನು ಆಶ್ರಮವಾಸಿಗಳಿಗೆ ಕಲಿಸುತ್ತಿದ್ದರು. ಇವುಗಳ ಜೊತೆಗೆ ಸ್ವಾತಂತ್ರ್ಯ ಚಳವಳಿಯ ವಿಚಾರಗಳನ್ನು ಜನರ ಬಳಿಗೆ ತಲುಪಿಸುತ್ತಿದ್ದರು. ಬಡತನ ಮತ್ತು ಅಜ್ಞಾನ ತುಂಬಿ ತುಳುಕುತ್ತಿದ್ದ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವುದೇ ಗ್ರಾಮ ಸೇವಾಶ್ರಮದ ಉದ್ದೇಶವಾಗಿತ್ತು.

ಹೀಗೆ ಸಬರಮತಿ ಆಶ್ರಮದಲ್ಲಿ ಗಾಂಧಿಜಿ ಹಾಗೂ ಕಸ್ತೂರಬಾ ಅವರ ಜೊತೆಯಲ್ಲಿದ್ದು ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿ ಜೈಲುವಾಸ ಅನುಭವಿಸಿದ ದಂಪತಿ ಸಿಗುವುದು ದೇಶದಲ್ಲಿಯೇ ಅಪರೂಪ ಎಂದು ಹೇಳಬಹುದು. ಬಹುದೊಡ್ಡ ಪ್ರಮಾಣದಲ್ಲಿ ಯುವಕರನ್ನು ಹೋರಾಟಕ್ಕೆ ಸೆಳೆಯಬೇಕೆಂಬ ಮಹದೇವ ಅವರ ಹಂಬಲ ಎಂತವರನ್ನು ಚಕಿತಗೊಳಿಸುತ್ತಿತ್ತು. ರೈತರಿಂದ ಅನ್ಯಾಯವಾಗಿ ಕಂದಾಯ ವಸೂಲಿ ಮಾಡುತ್ತಿದ್ದ ಕ್ರಮವನ್ನು ಖಂಡಿಸಿದರು. ಬ್ರಿಟಿಷ್ ಸರ್ಕಾರ ಮಹದೇವಪ್ಪ ಅವರನ್ನು ಹಿಡಿದುಕೊಟ್ಟವರಿಗೆ ಬಹುದೊಡ್ಡ ಬಹುಮಾನವನ್ನು ಘೋಷಿಸಿತು. ಆದರೆ ಮಹದೇವ ಇದಕ್ಕೆಲ್ಲಾ ಎದೆಗುಂದಲಿಲ್ಲ. ೧೯೪೩ರ ಏಪ್ರಿಲ್ ೧ರಂದು ಬೆಳಗಿನ ೭ ರ ಹೊತ್ತಿಗೆ ಬ್ರಿಟಿಷ್ ಪಡೆ ಮಹದೇವ ಅವರ ಮೇಲೆ ಗುಂಡಿನ ಮಳೆ ಸುರಿಸತೊಡಗಿತು. ಇವರಲ್ಲಿಯೂ ಬಂದೂಕುಗಳು ಇದ್ದರೂ ಮಹದೇವಪ್ಪನವರು ಅಹಿಂಸಾ ತತ್ವಕ್ಕೆ ಕಟಿಬದ್ಧರಾಗಿದ್ದರಿಂದ ಯಾರೂ ಬ್ರಿಟಿಷರ ಮೇಲೆ ಗುಂಡು ಹಾರಿಸಬಾರದೆಂದು ಆಜ್ಞೆ ಮಾಡಿಬಿಟ್ಟರು. ಆದರೆ ಎದುರಾಳಿಗಳ ೩-೪ ಬುಲೆಟ್ಗಳು ಮೈಲಾರರ ಎದೆ ಸೀಳಿಬಿಟ್ಟವು. ಆಗ ಅವರ ವಯಸ್ಸು ಕೇವಲ ೩೨. ಹೀಗೆ ರೈತರಿಂದ ಅನ್ಯಾಯವಾಗಿ ವಸೂಲಿ ಮಾಡಿದ ಕಂದಾಯವನ್ನು ಮರಳಿ ಪಡೆಯುವಾಗ ಮೈಲಾರ ಮಹದೇವ ಹುತಾತ್ಮರಾದರು. ಇವರ ಗೌರವಾರ್ಥ ೨೦೧೮ರಲ್ಲಿ ಭಾರತ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.

ಲೇಖಕರು:
ಡಾ.ಎಂ.ಡಿ.ಉಮೇಶ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

Tags:
error: Content is protected !!