Mysore
31
clear sky

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಕೊಡಗಿನಲ್ಲಿ ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸಜ್ಜು

ಬೇಸಿಗೆ ಆರಂಭವಾಗುತ್ತಿದ್ದಂತೆ ಅಗತ್ಯ ಮುಂಜಾಗ್ರತಾ ಕ್ರಮ; ಜನ ಜನ ಜಾಗೃತಿ ಮೂಡಿಸಲು ಸಿದ್ಧತೆ

ನವೀನ್‌ ಡಿಸೋಜ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿಧಾನವಾಗಿ ಚಳಿಯ ಜೊತೆಗೆ ತಾಪಮಾನ ಕೂಡ ಹೆಚ್ಚಳವಾಗುತ್ತಿದ್ದು, ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಬೆಂಕಿ ರೇಖೆ ನಿರ್ಮಾಣ ಕಾರ್ಯ ಮಾಡಿ ಕೊಂಡಿರುವ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ಜನವರಿ ನಾಲ್ಕನೇ ವಾರದಲ್ಲಿ ಚಳಿಯ ಜತೆ ಜತೆಗೆ ಬಿಸಿಲು ಕಂಡುಬರುತ್ತಿದೆ. ಚಳಿ ಕಡಿಮೆಯಾಗುತ್ತಿದ್ದಂತೆಯೇ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗಲಿದ್ದು, ಕಾಡ್ಗಿಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಈಗಾಗಲೇ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಅರಣ್ಯ ಇಲಾಖೆ ಜಾಗೃತಿಯ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮಡಿಕೇರಿ, ವಿರಾಜಪೇಟೆ ವನ್ಯಜೀವಿ ವಲಯ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ವಲಯಗಳಲ್ಲಿ ಬೆಂಕಿಯ ಅವಘಡಗಳು ಸಂಭವಿಸದಂತೆ ಈಗಿನಿಂದಲೇ ಎಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಬೆಂಕಿ ರೇಖೆ (ಫೈರ್ ಲೈನ್) ನಿರ್ಮಾಣ ಮಾಡಲಾಗುತ್ತಿದ್ದು, ಒಂದೆಡೆ ಬೆಂಕಿ ಕಾಣಿಸಿಕೊಂಡರೇ ಅದು ಮತ್ತೊಂದು ಭಾಗಕ್ಕೆ ಹರಡದಂತೆ ಎಚ್ಚರ ವಹಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಬದಿಯ ಫೈರ್ ಲೈನ್ ಸಮೀಪದ ಕುರುಚಲು ಕಾಡುಗಳನ್ನು ಸುಟ್ಟು ಕಾಡಿಗೆ ಬೆಂಕಿ ಬೀಳದಂತೆ, ಬಿದ್ದರೂ ವ್ಯಾಪಿಸದಂತೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಬೇಸಿಗೆಗಾಗಿಯೇ ಫೈರ್ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ಪಡೆಯೂ ಒಳಗೊಂಡಂತೆ ಅಗ್ನಿ ಅಪಾಯದಿಂದ ಕಾಡನ್ನು ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ವಾಚ್ ಟವರ್‌ಗಳ ನಿರ್ಮಾಣ, ಫೈರ್ ವಾಚರ್‌ಗಳ ಗಸ್ತಿನ ಜತೆಗೆ, ಕ್ಯಾಮೆರಾ, ನೈಟ್ ವಿಷನ್ ಬೈನಾಕ್ಯುಲರ್, ಥರ್ಮಲ್ ಡ್ರೋನ್‌ಗಳ ಮೂಲಕವೂ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಅಗ್ನಿಶಾಮಕ ದಳದೊಂದಿಗೆ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ.

ಅರಣ್ಯಗಳಲ್ಲಿ ಹುಲ್ಲು ಒಣಗುತ್ತಿದಂತೆ ಮತ್ತೆ ಹಸಿರು ಹುಲ್ಲು ಚಿಗುರಬೇಕೆಂಬ ಕಾರಣಕ್ಕೆ ಅಲ್ಲಲ್ಲಿ ಕುರುಚಲು ಗುಡ್ಡಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳೂ ನಡೆಯುತ್ತವೆ. ಹೀಗೆ ಬೆಂಕಿ ಹಚ್ಚುವುದರಿಂದಲೂ ಅರಣ್ಯಕ್ಕೆ ಅದು ವ್ಯಾಪಿಸಿ ಭಾರೀ ಅರಣ್ಯ ನಾಶವಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ಇಂತಹವರ ಪತ್ತೆಗಾಗಿಯೂ ಫೈರ್ ವಾಚರ್‌ಗಳನ್ನು ಇಲಾಖೆ ನೇಮಿಸುತ್ತಿದೆ.

ಕಾಡ್ಗಿಚ್ಚಿನ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಜಿಲ್ಲೆಯ ನಾನಾ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ ಬೀದಿ ನಾಟಕಗಳ ಮೂಲಕ ಕಾಡ್ಗಿಚ್ಚು ಜಾಗೃತಿ ಮೂಡಿಸಲು ಮುಂದಾಗಿದ್ದು, ಮುಂದಿನ ವಾರದಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಇದಲ್ಲದೇ ಅಗ್ನಿಶಾಮಕ ದಳದ ಸಹಯೋಗದಲ್ಲಿ ಅಲ್ಲಲ್ಲಿ ಪ್ರಾತ್ಯಕ್ಷಿಕೆ ನಡೆಸಲು ಇಲಾಖೆ ಮುಂದಾಗಿದೆ. ಈಗಾಗಲೇ ಒಂದೆರಡು ಕಡೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗಿದೆ.

ಕಾಡ್ಗಿಚ್ಚು ಸಾಧ್ಯತೆ ಕಡಿಮೆ
ಈ ಬಾರಿ ದೀರ್ಘಾವಧಿಗೆ ಮಳೆಯಾದ ಕಾರಣ ಜಿಲ್ಲೆಯ ಕಾಡುಗಳಲ್ಲಿ ಇನ್ನೂ ಹಸಿರಿದ್ದು, ಕೆರೆ, ಕಟ್ಟೆಗಳಲ್ಲಿಯೂ ನೀರಿದೆ. ಹೆಚ್ಚು ಮಳೆಯಾದ ಹಿನ್ನೆಲೆ ಯಲ್ಲಿ ಭೂಮಿಯಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇನ್ನೂ ಕೆಲ ದಿನಗಳ ಮಟ್ಟಿಗೆ ದೊಡ್ಡ ಮಟ್ಟದ ಕಾಡ್ಗಿಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಕೊಂಚ ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಸಮಯದಲ್ಲಿಯೂ ಆಗೊಮ್ಮೆ ಈಗೊಮ್ಮೆ ಮಳೆಯಾದರೆ ಬೆಂಕಿಯ ಅಪಾಯ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಅಽಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಶೋಲಾ ಕಾಡುಗಳಲ್ಲಿ ಬೆಂಕಿ ಅಪಾಯ ಹೆಚ್ಚಿದ್ದು, ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ಹೆಚ್ಚು ಮಳೆಯಾಗಿರುವುದರಿಂದ ಇನ್ನೂ ಹಸಿರಿದ್ದು, ನಮಗೆ ಸಹಕಾರಿಯಾಗಿದೆ. -ರ್ ವಾಚರ್‌ಗಳ ನೇಮಕ ಮಾಡಿಕೊಳ್ಳಲಾಗಿದ್ದು, ಬೀದಿ ನಾಟಕ, ಪ್ರಾತ್ಯಕ್ಷಿಕೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಆರಂಭಿಸಿದ್ದೇವೆ. ಕೆ. ಎ. ನೆಹರು, ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ ಮಡಿಕೇರಿ.

ನಾಗರಹೊಳೆ ವ್ಯಾಪ್ತಿಯಲ್ಲಿ ಫೈರ್ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಫೈರ್ ಲೈನ್ ನಿರ್ಮಾಣವೂ ಆಗಿದೆ. ವಾಚ್ ಟವರ್‌ಗಳ ಮೂಲಕ ನಿರಂತg ವಾಗಿ ವೀಕ್ಷಣೆ ಮಾಡಲಾಗುತ್ತಿದೆ. ನೈಟ್ ವಿಷನ್ ಬೈನಾಕುಲರ್, ಕ್ಯಾಮೆರಾ, ಥರ್ಮಲ್ ಡ್ರೋನ್‌ಗಳನ್ನು ಕೂಡ ಬಳಿಸಿಕೊಳ್ಳಲಾಗುತ್ತಿದ್ದು, ಕಾಡ್ಗಿಚ್ಚಿನ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ.  ಸೀಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ, ನಾಗರಹೊಳೆ.

 

Tags: