ಭಾರತಿ ಸಜ್ಜನ್
ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಹಣತೆಗಳ ಖರೀದಿ ಜೋರು
ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬಗೆ ಬಗೆಯ ಮಣ್ಣಿನ ಹಣತೆಗಳ ಖರೀದಿಯಲ್ಲಿ ಗ್ರಾಹಕರು ನಿರತರಾಗಿದ್ದಾರೆ.
ನಗರದ ಪ್ರಮುಖ ಮಾರಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಅಗ್ರಹಾರದ ವಿವಿ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಮಾರುಕಟ್ಟೆಗಳಲ್ಲಿ ಹೊಸ ಹೊಸ ವಿನ್ಯಾಸವುಳ್ಳ ಮಣ್ಣಿನ ದೀಪಗಳು ಮಾರಾಟವಾಗುತ್ತಿವೆ.
ಮೈಸೂರು ತಾಲ್ಲೂಕಿನ ದೂರ ಗ್ರಾಮ, ಜಿಲ್ಲೆಯ ತಿ.ನರಸೀಪುರ ಮೊದಲಾದ ಊರುಗಳಲ್ಲಿನ ಕುಂಬಾರರು ಆಕರ್ಷಕ ಮಣ್ಣಿನ ಹಣತೆಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದಿದ್ದಾರೆ. ಸುಮಾರು ೨೫ ವರ್ಷಗಳಿಂದ ಮಣ್ಣಿನ ದೀಪಗಳನ್ನು ತಯಾರಿಸಲಾಗುತ್ತಿದೆ. ನಾವು ತಯಾರಿಸುವ ದೀಪಗಳಿಗೆ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಸಾಕಷ್ಟು ಬೇಡಿಕೆ ಬರುತ್ತಿದೆ. ಬಿಡದಿ ಬಳಿಯ ಕೆರೆಯಿಂದ ಮಣ್ಣನ್ನು ತಂದು, ಅದನ್ನು ಹದ ಮಾಡಿ, ದೀಪದ ರೂಪ ಕೊಟ್ಟು ಮನೆಯ ಒಳಗಿನ ತಾಪಮಾನದಲ್ಲಿಯೇ ೧೦ರಿಂದ ೧೫ ದಿನಗಳ ಕಾಲ ಅವುಗಳನ್ನು ಒಣಗಿಸಲಾಗುತ್ತದೆ. ತದನಂತರ ಸುಡಲಾಗುತ್ತದೆ. ದೀಪಗಳನ್ನು ತಯಾರಿಸುವಲ್ಲಿ ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ ಆಕರ್ಷಕ ಸಿದ್ಧಪಡಿಸಲಾಗುತ್ತದೆ.
ಪ್ರತಿವರ್ಷ ಅಂದಾಜು ಎಂಟರಿಂದ ಹತ್ತು ಸಾವಿರ ದೀಪಗಳನ್ನು ತಯಾರಿಸುತ್ತೇವೆ ಎನ್ನುತ್ತಾರೆ ತಿ.ನರಸೀಪುರ ತಾಲ್ಲೂಕಿನ ದೊಡ್ಡಮುಲಗೋಡು ಗ್ರಾಮದ ಮಣ್ಣಿನ ದೀಪ ತಯಾರಕರಾದ ಶ್ರುತಿ ಗೋವಿಂದ ಅವರು. ನಮ್ಮಲ್ಲಿ ತಾವರೆ ಹೂವಿನ ದೀಪ, ಮ್ಯಾಜಿಕ್ ಲ್ಯಾಂಪ್, ಗಣೇಶ, ನವಿಲು, ೫ ದೀಪ, ೯ ದೀಪ, ಗಣೇಶ ಮ್ಯಾಜಿಕ್ ಲ್ಯಾಂಪ್, ತೆಂಗಿನ ಕಾಯಿ ಮ್ಯಾಜಿಕ್ ಲ್ಯಾಂಪ್, ಕಳಸ ದೀಪ ಹೀಗೆ ಸುಮಾರು ೨೦ ವಿಧದ ದೀಪಗಳನ್ನು ತಯಾರಿಸುತ್ತೇವೆ. ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಮೂರು ತಿಂಗಳಿಂದ ವಿವಿಧ ರೀತಿಯ ದೀಪಗಳ ತಯಾರಿ ನಡೆಯುತ್ತಿದ್ದು, ೫ ರೂ.ಗಳಿಂದ ೫೦೦ ರೂ.ಗಳವರೆಗಿನ ಬೆಲೆ ಬಾಳುವ ದೀಪಗಳು ನಮ್ಮಲ್ಲಿ ಸಿಗುತ್ತವೆ.
” ವರ್ಷದಿಂದ ವರ್ಷಕ್ಕೆ ಪರಿಸರ ಸ್ನೇಹಿ ಮಣ್ಣಿನ ದೀಪಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಗ್ರಾಹಕರು ನೀಡುವ ಉತ್ತಮ ಪ್ರತಿಕ್ರಿಯೆಗಳೇ ನಮಗೆ ಪ್ರೇರಣೆ.”
ಶ್ರುತಿ ಗೋವಿಂದ, ಮಣ್ಣಿನ ದೀಪ ತಯಾರಕರು
” ವರ್ಷದಿಂದ ವರ್ಷಕ್ಕೆ ವಿಭಿನ್ನ ವಿನ್ಯಾಸಗಳ ದೀಪಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ. ನಮ್ಮಲ್ಲಿ ೫ ರೂ.ಗಳ ಚಿಕ್ಕ ದೀಪಗಳಿಂದ ಹಿಡಿದು ೧,೭೦೦ ರೂ.ಗಳವರೆಗಿನ ದೀಪಗಳು ದೊರೆಯಲಿವೆ. ಗ್ರಾಹಕರು ಖುಷಿಯಿಂದ ಖರೀದಿಸುತ್ತಾರೆ.”
ವಾಸುದೇವ ಮೂರ್ತಿ, ಮಾಲೀಕರು, ಕುಂಭ ಕಲಾ ಕುಟೀರ ದಿ ಪಾಟರಿ ಪಾಯಿಂಟ್
ಆಕರ್ಷಕ ದೀಪಗಳ ಖರೀದಿ ಜೋರು: ದೀಪಾವಳಿ ಹಬ್ಬದ ಪ್ರಯುಕ್ತ ಆನೆ ದೀಪ, ಬಾತುಕೋಳಿ ದೀಪ, ಹೂವಿನ ದೀಪ, ಮ್ಯಾಜಿಕ್ ಲ್ಯಾಂಪ್, ಕಾಲುದೀಪ ಸೇರಿದಂತೆ ೧೦ ರಿಂದ ೧೫ ವಿಧದ ಆಕರ್ಷಕ ದೀಪಗಳು ಈ ಬಾರಿ ಮಾರುಕಟ್ಟೆಯಲ್ಲಿ ಕಾಣ ಸಿಗುತ್ತವೆ.





