ಮಂಜು ಕೋಟೆ
ಎಚ್. ಡಿ. ಕೋಟೆ: ನಕ್ಸಲ್ ತಂಡದ ನಾಯಕ ಕೋಟೆ ಹೊಂಡಾರಳ್ಳಿ ರವಿ ಪತ್ತೆಗಾಗಿ ಕೋಟೆಯ ಪೊಲೀಸ್ ಪೇದೆ ರಮೇಶ್ ರಾವ್ ಮಾರುವೇಷದಲ್ಲಿ ತಿಂಗಳುಗಟ್ಟಲೆ ಕಾಡಿನಲ್ಲಿ ಓಡಾಡಿಕೊಂಡು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ಕೋಟೆ ಪಟ್ಟಣದ ಹನುಮಂತನಗರದ ನಿವಾಸಿ, ರಾಜ್ಯ ಗುಪ್ತಚರ ಇಲಾಖೆಯ ಸಿಬ್ಬಂದಿ ರಮೇಶ್ ರಾವ್ ಅವರು ಲುಂಗಿ ಧರಿಸಿ, ಗಡ್ಡ ಬಿಟ್ಟು, ಹೆಗಲಿ ಗೊಂದು ಟವೆಲ್ ಹಾಕಿಕೊಂಡು ಸಾಮಾನ್ಯರಂತೆ ವಾರಗಟ್ಟಲೆ ಕೂಲಿ ಮಾಡಿಕೊಂಡು ಅಲ್ಲಿನ ಹಳ್ಳಿಗಳಲ್ಲಿ ಸಂಚರಿಸುತ್ತಾ ನಕ್ಸಲ್ ನಾಯಕನ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶೃಂಗೇರಿ ಸಮೀಪದ ಕೋಟೆ ಹೊಂಡಾರಳ್ಳಿ ರವಿ ಪತ್ತೆಗೆ ಇವರು ಮಾರುವೇಷದಲ್ಲಿ ಕಾಡಿನಲ್ಲಿರುವ ಒಂಟಿ ಮನೆ ಮನೆಗಳಿಗೆ ತೆರಳಿ ರಹಸ್ಯವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದರು. ಕಿಗ್ಗದ ಹುಲ್‌ಗಾರ್ ಬೈಲಿನ ವಾಸಿ ಗುಡಿಗರಡಿ ಅರಣ್ಯದಲ್ಲಿರುವ ಒಂಟಿ ಮನೆಯ ರಮೇಶ್ ಎಂಬವರ ಮನೆಗೆ ಶುಕ್ರವಾರ ರಾತ್ರಿ ಕೋಟೆ ರವಿ ಬರುತ್ತಾನೆ ಎಂಬ ಮಾಹಿತಿ ತಿಳಿದು, ಶರಣಾಗತಿ ಸಮಿತಿ ಸದಸ್ಯರಾದ ಶ್ರೀಪಾಲ್‌ರವರಿಗೆ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದು, ರಮೇಶ್ ರಾವ್‌ರವರು ಕಾಡಿನಲ್ಲಿರುವ ಒಂಟಿ ಮನೆಗೆ ಭಯವಿಲ್ಲದೇ ಹೋಗಿ ರವಿಯನ್ನು ಪತ್ತೆ ಮಾಡಿ ಮಧ್ಯರಾತ್ರಿವರೆಗೆ ಮನವೊಲಿಸಿ, ಶರಣಾಗತಿ ಸಮಿತಿಯ ಶ್ರೀಪಾಲ್‌ರವರಿಗೆ ತಿಳಿಸಿ ಅವರಿಂದಲೂ ಮನವೊಲಿಕೆ ಯತ್ನ ನಡೆಸಿದ್ದರು.
ಸುಮಾರು ೧೦ ದಿನಗಳ ಗುಪ್ತ ಕಾರ್ಯಾ ಚರಣೆಯನ್ನು ಗುಪ್ತಚರ ಇಲಾಖೆಯ ಅಽಕಾರಿ ಗಳು ರಹಸ್ಯವಾಗಿ ನಡೆಸಿದ್ದರು. ಗುಪ್ತಚರ ಇಲಾಖೆಯ ಸಿಬ್ಬಂದಿ, ಮೈಸೂರಿನ ಎಚ್. ಡಿ. ಕೋಟೆಯ ರಮೇಶ್ ರಾವ್, ಶ್ರೀಪಾಲ ಮತ್ತು ಅಧಿಕಾರಿ ಗಿರೀಶ್‌ರವರು ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ಕೋಟೆ ಹೊಂಡಾರಳ್ಳಿ ರವಿಯನ್ನು ಕರೆದುಕೊಂಡು ಹೋಗಿ ಶರಣಾಗತಿ ಮಾಡಿಸಿದ್ದಾರೆ.
ರಮೇಶ್ ರಾವ್ ಮತ್ತು ಸಿಬ್ಬಂದಿ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ. ಎಚ್. ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅನೇಕ ದರೋಡೆ, ಕೊಲೆ, ಕಳ್ಳತನ ಇನ್ನಿತರ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದರು. ಕೆಲಸದಲ್ಲಿ ಬಹಳ ನಿಷ್ಠೆ, ಶ್ರದ್ಧೆ ಹೊಂದಿರುವ ರಮೇಶ್ ರಾವ್ ಅವರಿಗೆ ಹತ್ತು ವರ್ಷಗಳ ಹಿಂದೆಯೇ ಮುಖ್ಯಮಂತ್ರಿಗಳ ಚಿನ್ನದ ಚಿನ್ನದ ಪದಕ ಲಭಿಸಿತ್ತು. ಈಗ ಮತ್ತೊಂದು ಸಾಧನೆ ಮಾಡಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿ ಎನ್ನುತ್ತಾರೆ ಅವರ ಪರಿಚಿತರು.
ಸರ್ಕಾರಿ ಹುದ್ದೆ ಅದರಲ್ಲೂ ಪೊಲೀಸ್ ಹುದ್ದೆ ಸಿಕ್ಕಿರುವುದು ಅದೃಷ್ಟ. ಕೋಟೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ಇತ್ತು. ಈಗ ನಕ್ಸಲ್ ಕಾರ್ಯಾಚರಣೆಯಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಯಶಸ್ವಿಯಾಗಿದ್ದೇವೆ. ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ. -ರಮೇಶ್ ರಾವ್, ಗುಪ್ತಚರ ಇಲಾಖೆಯ ಸಿಬ್ಬಂದಿ