ಮಂಜು ಕೋಟೆ
ಗುರುವಾರ ಚುನಾವಣೆ: ಅಧಿಕಾರ ಹಿಡಿಯಲು ಪಕ್ಷಗಳ ಪೈಪೋಟಿ; ಜನರಲ್ಲಿ ಕುತೂಹಲ
ಹೆಚ್.ಡಿ.ಕೋಟೆ: ಬಿಜೆಪಿ-ಜಾ.ದಳ ಮೈತ್ರಿ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಪೈಪೋಟಿ ಕಣವಾಗಿರುವ ತಾಲ್ಲೂಕಿನ ಟಿಎಪಿಸಿಎಂಎಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ದಿನಾಂಕ ಕೊನೆಗೂ ಎರಡನೇ ಬಾರಿಗೆ ನಿಗದಿಯಾಗಿದ್ದು, ಸೆ.೧೦ರಂದು ಗುರುವಾರ ಚುನಾವಣೆ ನಡೆಯಲಿದೆ.
ಒಂದೂವರೆ ತಿಂಗಳಿನಿಂದ ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತಾಲ್ಲೂಕಿನಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಮತ್ತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ನಿರ್ದೇಶಕರ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷದ ನಾಲ್ವರು ಬೆಂಬಲಿತರು ಆಯ್ಕೆಯಾಗಿದ್ದು, ನಾಮನಿರ್ದೇಶಿತ ಸದಸ್ಯರಾದ ಸಣ್ಣಸ್ವಾಮಿ, ಶಾಸಕ ಅನಿಲ್ ಚಿಕ್ಕಮಾದು ಹಾಗೂ ಸಹಕಾರ ಇಲಾಖೆಯ ಅಧಿಕಾರಿಯ ಒಂದು ಮತ ಸೇರಿ ಒಟ್ಟು ಏಳು ಜನರ ಬೆಂಬಲವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದ್ದು, ಈ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಹಿರೇಹಳ್ಳಿ ಸೋಮೇಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಬುಧವಾರ ಸಂಜೆ ಅನಿಲ್ ಚಿಕ್ಕಮಾದು ತೀರ್ಮಾನಿಸಲಿದ್ದಾರೆ.
ಬಿಜೆಪಿ ಮತ್ತು ಜಾ.ದಳ ಮೈತ್ರಿಯಿಂದ ಎಂಟು ಜನ ನಿರ್ದೇಶಕರು ಗೆಲುವು ಸಾಧಿಸಿದ್ದು, ಮೊತ್ತ ಬಸವರಾಜಪ್ಪ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಯವರು ಬುಧವಾರ ಸಂಜೆ ಅಂತಿಮ ಹೆಸರನ್ನು ಪ್ರಕಟಿಸಲಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳ ಗದ್ದಿಗೆ ಹಿಡಿಯಲು ೮ ಮತಗಳ ಬಹುಮತ ಬೇಕಾಗಿದ್ದು, ಮೈತ್ರಿಯವರಿಗೆ ಬಹುಮತವಿದ್ದರೂ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ರಾಜಕೀಯ ತಂತ್ರಗಾರಿಕೆ ಹಾಗೂ ಇನ್ನಿತರ ಘಟನೆಗಳಿಂದಾಗಿ ಚುನಾವಣೆ ಕುತೂಹಲ ಮೂಡಿಸಿದೆ.
ಮೈತ್ರಿ ಪಕ್ಷದ ಮಾದಯ್ಯ ಪ್ರವಾಸದಿಂದ ದೂರ ಉಳಿದು ಪೊಲೀಸ್ ಠಾಣೆ ಮೆಟ್ಟಿಲೇರಿ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಮಾಡಿ, ಬಸವರಾಜಪ್ಪ ಅವರಿಗೆ ಮತ ಹಾಕುವುದಾಗಿ ಹೇಳಿ ದೂರ ಉಳಿದಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ, ಜಾ.ದಳ ಈ ಮೂರೂ ಪಕ್ಷಗಳ ಮುಖಂಡರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವುದು ಕಂಡುಬರುತ್ತಿದೆ. ಚುನಾವಣೆಯ ಅಧಿಕಾರಿಗಳಾಗಿ ತಹಸಿಲ್ದಾರ್ ಶ್ರೀನಿವಾಸ್, ಅನಸೂಯ,ನಿಂಗರಾಜು ಕಾರ್ಯನಿರ್ವಹಿಸಲಿದ್ದಾರೆ. ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ್ ಬಂದೋಬಸ್ತ್ ವ್ಯವಸ್ಥೆ ಮಾಡಲಿದ್ದಾರೆ.
” ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷದವರು ನಾವೇ ಅಧಿಕಾರ ಹಿಡಿಯುತ್ತೇವೆ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಒಂದು ಮತ ಅಸಿಂಧು ಅಥವಾ ಗೈರಾದರೆ ಲಾಟರಿ ಮೂಲಕ ಅದೃಷ್ಟ ಪರೀಕ್ಷೆ ಎದುರಾಗಲಿದೆ ಅಥವಾ ಎಂಟು ಮತ ಪಡೆದುಕೊಳ್ಳುವವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.”




