Mysore
26
broken clouds
Light
Dark

ಚಾ.ಬೆಟ್ಟ: ಸಮಗ್ರ ಅಭಿವೃದ್ಧಿಗೆ ಡಿಪಿಆ‌ರ್‌

ಪ್ರಾಧಿಕಾರದ ಸಭೆಯಲ್ಲಿ ಕೈಗೊಂಡ ತೀರ್ಮಾನ ಕುರಿತು ವಿವರಣೆ ನೀಡಿದ ಸಿಎಂ

ಮೈಸೂರು: ಚಾಮುಂಡೇಶ್ವರಿ ದೇವಿಯುನೆಲೆಸಿರುವ ಚಾಮುಂಡಿಬೆಟ್ಟ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಮತ್ತಷ್ಟು ಆಕರ್ಷಣೀಯವನ್ನಾಗಿ ಮಾಡಲು ಬೇಕಾದ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ರಚನೆಯಾದ ಬಳಿಕ ಇಂದು ಮೊದಲ ಸಭೆ ನಡೆಸಲಾಗಿದೆ. ಈ ಹಿಂದೆ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ಇತ್ತು. ದೇವಸ್ಥಾನದ ಅಭಿವೃದ್ಧಿ, ಮೂಲ ಸೌಕರ್ಯಗಳನ್ನು ಸಮಿತಿಯೇ ಕಲ್ಪಿಸುತ್ತಿತ್ತು. ಈಗ ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಸಲುವಾಗಿ ಮಹದೇಶ್ವರ ಬೆಟ್ಟ, ಹುಲಿಗೆಮ್ಮ ದೇವಸ್ಥಾನ, ಸವದತ್ತಿ ಎಲ್ಲಮ್ಮ, ಘಾಟ ಸುಬ್ರಹ್ಮಣ್ಯ ದೇವಸ್ಥಾನದ ಪ್ರಾಧಿಕಾರಗಳಂತೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದರು.

ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಮಂಗಳವಾರ, ಶುಕ್ರವಾರ, ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಭಕ್ತರ ಭೇಟಿ ಹೆಚ್ಚಾಗಿರುತ್ತದೆ. ಭಕ್ತರಿಗೆ ಈಗಾಗಲೇ ಮೂಲ ಸೌಲಭ್ಯ ಕಲ್ಪಿಸಲಾಗಿದ್ದು, ಕೆಲವು ಅಭಿವೃದ್ಧಿ ಕೆಲಸಗಳು ಆಗಿವೆ. ಬಸ್ ನಿಲ್ದಾಣ, ಪಾರ್ಕಿಂಗ್, ಮಳಿಗೆಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವು ಪೂರ್ಣವಾಗಿಲ್ಲ. ಕುಡಿಯುವ ನೀರಿನ ಕಾಮಗಾರಿ 2018ರಲ್ಲಿ ಆರಂಭವಾದರೂ ಇನ್ನೂ ಪೂರ್ಣವಾಗಿಲ್ಲ. ಹೀಗಾಗಿ ಈ ಹಿಂದೆ ಕೈಗೊಂಡಿರುವ ಎಲ್ಲಾ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಟಾಸ್ಕ್ ಫೋರ್ಸ್ ರಚನೆ:

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೂಕ್ತ ಭದ್ರತೆ ಕಲ್ಪಿಸುವ ಸಲುವಾಗಿ ಅಗತ್ಯ ಇರುವ ಕಡೆ ಸಿಸಿ ಕ್ಯಾಮೆರಾಗಳನ್ನು ಸಿಎಸ್‌ಆರ್ ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ) ನಿಧಿಯಡಿ ಅಳವಡಿಸಲು ತಿಳಿಸಿದ್ದೇನೆ. ಇದಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದವರು ಸಿಎಸ್‌ಆರ್‌ ನಿಧಿಯಡಿ ಅನುದಾನ ಕೊಡಲು ಮುಂದಾಗಿದ್ದಾರೆ. ಜತೆಗೆ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ, ಭದ್ರತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು. ದೇವಸ್ಥಾನದ ಖಾಯಂ ಸಿಬ್ಬಂದಿಗೆ ವೈದ್ಯಕೀಯ ಸೌಲಭ್ಯ, ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸಿವಿಲ್ ಕಾಮಗಾರಿ ಮುಗಿದಿದ್ದು, ವಿದ್ಯುದ್ದೀಕರಣ ಮಾಡುವುದು ಬಾಕಿ ಇರುವ ಕಾರಣ ಸೆ.31ರೊಳಗೆ ಸಂಪರ್ಕ ಕಲ್ಪಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ, ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದರು.

ಪ್ರಸಾದ್ ಯೋಜನೆಗೆ ಒಪ್ಪಿಗೆ:

ಈ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಗೆ ನೀಡಲಾಗಿದೆ. ಪ್ರಾಧಿಕಾರದಿಂದ ಒಪ್ಪಿಗೆ ಯೋಜನೆಯಡಿ ಪ್ರವಾಸೋದ್ಯಮ ಇಲಾಖೆಯು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಹೆಚ್ಚುವರಿಯಾಗಿ ಬೇಕಿರುವ 60 ಕೋಟಿ ರೂ. ಹಣವನ್ನು ಪ್ರಾಧಿಕಾರದಿಂದ ಭರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು. ದಾಸೋಹ ಭವನವು ಕೂಡ ಸ್ವಲ್ಪ ಪ್ರಮಾಣದಲ್ಲಿ ಚಿಕ್ಕದಾಗಿದ್ದು, ಕೆಟ್ಟು ಹೋಗಿರುವ ಸರಿಪಡಿಸುವುದು, ಕಟ್ಟಡವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಪ್ಲಾನ್ ಮಾಡುವಂತೆ ಹೇಳಲಾಗಿದೆ. ದಾಸೋಹಕ್ಕೆ ಬರುವ ಭಕ್ತರಿಗೆ ಗುಣಮಟ್ಟದ ಪ್ರಸಾದ ಒದಗಿಸುವುದು ಆದ್ಯ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ದಾಸೋಹ ವ್ಯವಸ್ಥೆ ಮಾಡಲಾಗುವುದು ಎಂದರು.

ದೇವಸ್ಥಾನದ ಆದಾಯ ಹೆಚ್ಚಳ: 

ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಿಲ್ಲ. ದೇವಸ್ಥಾನದ ಖಾತೆಯಲ್ಲಿ 169 ಕೋಟಿ ರೂ. ಇದೆ. ಇದರಲ್ಲಿ ನಿಶ್ಚಿತ ಠೇವಣಿಯೇ 162 ಕೋಟಿ ರೂ. ಇದೆ. ಪ್ರತಿವರ್ಷವೂ ಖರ್ಚು ಕಳೆದು ಹೆಚ್ಚಿನ ಆದಾಯ ಉಳಿಯುತ್ತಿದೆ. 2023-24ರಲ್ಲಿ 49.64 ಕೋಟಿ ರೂ. ಆದಾಯ ಬಂದಿದ್ದು, 21 ಕೋಟಿ ಖರ್ಚಾಗಿದೆ. 28.18 ಕೋಟಿ ರೂ. ಆದಾಯವಾಗಿದೆ. 2024ರ ನವರಿಯಿಂದ ಜುಲೈವರೆಗೆ 17.4 ಕೋಟಿ ರೂ. ಆದಾಯ ಬಂದಿದ್ದು, 6.9 ಕೋಟಿ ರೂ. ಖರ್ಚಾಗಿದೆ. ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಾಯವೂ ಹೆಚ್ಚಾಗುತ್ತಿದೆ. ಬೆಟ್ಟದ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳಿಗೆ ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಿದ್ದೇನೆ. ಶಾಸಕರು, ಮಂತ್ರಿಗಳು ಸಲಹೆನೀಡಿದ್ದು, ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಕೆಲಸ ಮಾಡಲಿದೆ ಎಂದರು.

ಸಚಿವರಾದ ಎಚ್‌.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್‌ ಗೌಡ, ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಯತೀಂದ್ರ ಸಿದ್ದರಾಮಯ್ಯ, ಕೆ.ವಿವೇಕಾನಂದ, ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಎಂ. ಸತ್ಯನಾರಾಯಣ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ. ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಬೆಟ್ಟದ ಖಜಾನೆ ದೊಡ್ಡದು
ನಿಶ್ಚಿತ ಠೇವಣಿ: 162 ಕೋಟಿ ರೂ. ದೇವಾಲಯದ ಪುದುವಟ್ಟು: 3.61 ಕೋಟಿ ರೂ. ದಾಸೋಹ ಪುದುವಟ್ಟು: 3.08 ಕೋಟಿ ರೂ. ಉಳಿತಾಯ ಖಾತೆ: 20.24 ಕೋಟಿ ರೂ.
49.347 ಕೆಜಿ ಚಿನ್ನದ ಪದಾರ್ಥಗಳು 241.803 ಕೆಜಿ ಬೆಳ್ಳಿ ಪದಾರ್ಥಗಳು

ರೋಪ್‌ವೇ ಹೊಸದೇನಲ್ಲ:
ಚಾಮುಂಡಿಬೆಟ್ಟಕ್ಕೆ ರೋಪ್ ವೇ ಯೋಜನೆ ಹೊಸದೇನಲ್ಲ. ನಮ್ಮ ಸರ್ಕಾರ ಮೊದಲೇ ತೀರ್ಮಾನ ಮಾಡಿತ್ತು. ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಯೋಜನೆ ಪ್ರಸ್ತಾವ ಹಾಗೆಯೇ ನಿಂತು ಹೋಯಿತು. ಈ ಸಭೆಯಲ್ಲಿ ಅಂತಹ ವಿಚಾರಗಳು ಪ್ರಸ್ತಾಪವಾಗಲಿಲ್ಲ. ಇದೇನೂ ಹೊಸ ಯೋಜನೆಯಲ್ಲ. ಬೆಟ್ಟಕ್ಕೆ ಡ್ರೆಸ್‌ ಕೋಡ್ ಜಾರಿಯ ಬಗ್ಗೆ ಸಮಾಲೋಚನೆ ನಡೆಯಲಿಲ್ಲ. ಯಾವುದೇ ಜಾತಿ, ಧರ್ಮದವರೂ ಮುಕ್ತವಾಗಿ ಪ್ರವೇಶ ಮಾಡಿ ದರ್ಶನ ಪಡೆಯಬಹುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ.

• ದೇವಾಲಯ ಹಿಂಭಾಗದಲ್ಲಿ ಹೊಸದಾಗಿ ಎಸ್ಎಎಸ್ ರೈಲಿಂಗ್ಸ್ ನಿಂದ ಸರತಿ ಸಾಲು ಹಾಗೂ ಬಹುಮಹಡಿ ವಾಹನ ನಿಲುಗಡೆ ಪ್ರದೇಶದ ಕಟ್ಟಡದಲ್ಲಿ ವಾಹನಗಳ ಭದ್ರತಾ ದೃಷ್ಟಿಯಿಂದ ಕಬ್ಬಿಣದ ರೈಲಿಂಗ್ಸ್ ನಿರ್ಮಾಣ ಮಾಡುವುದಕ್ಕೆ 80 ಲಕ್ಷ ರೂ.

• ಸಮೂಹ ದೇವಸ್ಥಾನಗಳಲ್ಲಿ ಸೇವಾ ಸಾಫ್ಟ್‌ ವೇರ್ ಮಾಡಿಸಲು, ಪಾರ್ಕಿಂಗ್ ವ್ಯವಸ್ಥೆಗೆ ಫಾಸ್ಟ್ ಟ್ಯಾಗ್, ಪ್ರೊಟೊಕಾಲ್ ಸಾಫ್ಟ್ ವೇರ್, ಆನ್‌ಲೈನ್‌ ಬುಕ್ಕಿಂಗ್ ಸಾಫ್ಟ್‌ವೇರ್ ಅಳವಡಿಸುವ ಕಾಮಗಾರಿ-30 ಲಕ್ಷ ರೂ.

• ದೇವಾಲಯಕ್ಕೆ 17 ಅಡಿ ಎತ್ತರದ ಮರದ ರಥವನ್ನು ಹಾಗೂ ಸಮೂಹ ದೇವಾಲಯಗಳಿಗೆ ಶೈವ ಸಂಪ್ರದಾಯ ಮತ್ತು ವೈಷ್ಣವ ಸಂಪ್ರದಾಯದಲ್ಲಿ 12 ಅಡಿ ಎತ್ತರದ 2 ಮರದ ರಥಗಳ ನಿರ್ಮಾಣ ಕಾಮಗಾರಿ, ಶ್ರೀದೇವಳಕ್ಕೆ ಚಿನ್ನದ ಹಾಗೂ ಬೆಳ್ಳಿ ರಥದ ನಿರ್ಮಾಣಕ್ಕಾಗಿ ಭಕ್ತಾದಿಗಳಿಂದ ದೇಣಿಗೆ ಸಂಗ್ರಹಿಸಲು ವಿಶೇಷ ಹುಂಡಿ ತೆರೆಯುವ ಬಗ್ಗೆ-40 ಲಕ್ಷ ರೂ.

• ಎಂ.ಜಿ.ರಸ್ತೆಯಲ್ಲಿರುವ ದಿವಾನ್ ಪೂರ್ಣಯ್ಯ ಛತ್ರದ ಸಂಪೂರ್ಣ ದುರಸ್ತಿ, ಬಣ್ಣದ ಕಾಮಗಾರಿಗೆ 1 ಕೋಟಿ ರೂ.

ಚಾಮುಂಡಿಬೆಟ್ಟದ ದೇವಾಲಯದ ಭದ್ರತೆಗೆ ಸಂಬಂಧಪಟ್ಟ ಸಿಸಿ ಕ್ಯಾಮೆರಾ ಮತ್ತ ಭದ್ರತೆ ಪರಿಕರಗಳನ್ನು ಖರೀದಿ ಮಾಡಿ ಅಳವಡಿಕೆ ಮಾಡುವುದು-1.50 ಕೋಟಿ ರೂ.

• ಅತಿಥಿಗೃಹದ ನವೀಕರಣ ಹಾಗೂ ಕಮರ್ಷಿಯಲ್ ವಾಷಿಂಗ್ ಮೆಷಿನ್ ಖರೀದಿಗೆ 50 ಲಕ್ಷ ರೂ.

ಸಮೂಹ ದೇವಾಲಯಗಳ ಐದು ದೇವಾಲಯಗಳ ದುರಸ್ತಿಗೆ 1 ಕೋಟಿ ರೂ.

• ಕಾರ್ಯದರ್ಶಿಗೆ ಹೊಸ ವಾಹನ ಖರೀದಿ ಮಾಡಲು 20 ಲಕ್ಷ ರೂ.

• 1 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಕಾಮಗಾರಿಗೆ 8ಕೋಟಿ ರೂ.

• ದಸರಾ ಪ್ರಯುಕ್ತ ಚಾಮುಂಡೇಶ್ವರಿ ದೇವಾಲಯ, ದಾಸೋಹ, ಅತಿಥಿಗೃಹ, ಮಂಟಪಗಳ ದುರಸ್ತಿಯೊಂದಿಗೆ ಬಣ್ಣದ ಕಾಮಗಾರಿಗೆ 42.42 ಲಕ್ಷ

• ಸಾರ್ವಜನಿಕರ ಸೇವೆಗೆ ಐದು ಹೊಸ ಬಸ್ ಖರೀದಿಗೆ 2.5 ಕೋಟಿ ರೂ.

• ದಾಸೋಹ ಭವನ ಸಂಪೂರ್ಣ ನವೀಕರಣ ಕಾಮಗಾರಿಗೆ 50 ಲಕ್ಷ ರೂ.

• ಲಾಡು ತಯಾರಿಕಾ ಘಟಕವನ್ನು ಸಂಪೂರ್ಣ ಆಟೋ ಮಷಿನ್ ಮಾಡುವ ಕಾಮಗಾರಿಗೆ-50 ಲಕ್ಷ ರೂ.