ಪುನೀತ್ ಮಡಿಕೇರಿ
ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ; ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳ ದಾಸ್ತಾನು
ಮಡಿಕೇರಿ: ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಎದುರಾಗುವ ವಿಭಿನ್ನ ಸಮಸ್ಯೆಗಳನ್ನು ಪರಿಹರಿಸಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್ ಸಜ್ಜಾಗಿದೆ.
ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ರಭಸದ ಗಾಳಿಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳುವುದು, ವಿದ್ಯುತ್ ಸರಬರಾಜು ಸಾಮಗ್ರಿಗಳಿಗೆ ಹಾನಿಯಾಗುವುದು ಸಾಮಾನ್ಯ. ಜಿಲ್ಲೆಯ ಮಳೆಯ ಬಗ್ಗೆ ಅರಿತಿರುವ ಸೆಸ್ಕ್ ಈಗಾಗಲೇ ಮುಂಗಾರು ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು ಹಾಗೂ ವಾಹಕಗಳನ್ನು ದಾಸ್ತಾನು ಮಾಡಿಕೊಂಡಿದೆ. ಪ್ರತಿ ತಿಂಗಳು ಆದ್ಯತೆ ಮೇರೆಗೆ ಹೆಚ್ಚುವರಿಯಾಗಿ ಕಂಬಗಳನ್ನು ದಾಸ್ತಾನು ಮಾಡಿಕೊಳ್ಳುವ ಕಾರ್ಯವನ್ನು ಮಾಡುತ್ತಿದೆ.
ಕೊಡಗಿನಲ್ಲಿ ಗಿಡ-ಮರಗಳ ನಡುವೆಯೇ ವಿದ್ಯುತ್ ಕಂಬ, ತಂತಿ ಹಾದು ಹೋಗಿರುವುದು ಸಾಮಾನ್ಯ. ಮಳೆಗಾಲದಲ್ಲಿ ಗಾಳಿಯಿಂದ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬೀಳುವುದು ಸಹಜ. ಹೀಗಾಗಿ ಮಳೆಗಾಲಕ್ಕೂ ಮುನ್ನವೇ ಸೆಸ್ಕ್ ವಿದ್ಯುತ್ ಕಂಬಕ್ಕೆ ಹಾನಿ ಉಂಟು ಮಾಡಬಹುದಾದ ಮರದ ಕೊಂಬೆಗಳನ್ನು ತೆರವುಗೊಳಿಸುತ್ತಿದೆ. ವಿದ್ಯುತ್ ಸಂಪರ್ಕ ಲೈನ್‌ನ ಅಕ್ಕಪಕ್ಕ ದಲ್ಲಿರುವ ರೆಂಬೆಗಳನ್ನಷ್ಟೇ ತೆಗೆಯಲು ಅನುಮತಿ ಇದ್ದು, ಅದರಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಮತ್ತು ಗ್ರಾಮೀಣ ಭಾಗಗಳಲ್ಲಿ ತೋಟಗಳು, ಅರಣ್ಯಗಳ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ಗಳ ಮೇಲೆ ಪ್ರತಿ ವರ್ಷ ಮಳೆ-ಗಾಳಿಗೆ ಮರಗಳು ಬಿದ್ದು, ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ಕೆಲವು ಕಡೆ ವಾರಗಟ್ಟಲೆ ವಿದ್ಯುತ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿದ್ಯುತ್ ಲೈನ್ ಪಕ್ಕದಲ್ಲಿರುವ ಅಪಾಯಕಾರಿ ಮರಗಳು, ರೆಂಬೆಗಳನ್ನು ತೆರವುಗೊಳಿಸುವ ಕಾರ್ಯ ವನ್ನು ಈಗಾಗಲೇ ಸೆಸ್ಕ್ ಪೂರ್ಣಗೊಳಿಸಿದೆ.
ಆ ಮೂಲಕ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೊದಲ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶೀಘ್ರವಾಗಿ ಸಮಸ್ಯೆಯನ್ನು ಸರಿಪಡಿಸಲು ಲೈನ್‌ಮನ್‌ಗಳ ಅಗತ್ಯವಿದೆ. ಈಗಾಗಲೇ ೭೦ ಸಿಬ್ಬಂದಿಗಳನ್ನುನಿಯೋಜಿಸಿದ್ದು, ಈ ಬಾರಿ ಹೆಚ್ಚುವರಿಯಾಗಿ ೫೦ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಹೇಳಿದ್ದಾರೆ.
ಸೌಜನ್ಯದಿಂದ ವರ್ತಿಸಿ: ಮಳೆಗಾಲದಲ್ಲಿ ಸೆಸ್ಕ್ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡ ಬೇಕಾಗುತ್ತದೆ. ಗಾಳಿ-ಮಳೆಯ ನಡುವೆ ಸಾರ್ವಜನಿಕರಿಗೆ ವಿದ್ಯುತ್ ಒದಗಿಸಲು ದಿನವಿಡೀ ದುಡಿಯುತ್ತಾರೆ. ಸಾರ್ವಜನಿಕರು ಈ ಬಗ್ಗೆ ಅರಿತು ಸಿಬ್ಬಂದಿ ಗಳೊಂದಿಗೆ ಮಾನವೀಯತೆಯಿಂದ ವರ್ತಿಸಬೇಕಿದೆ. ಹಾಗೆಯೇ ಅಧಿಕಾರಿಗಳು, ಸಿಬ್ಬಂದಿಗಳು ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಮರ ಬಿದ್ದು ವಿದ್ಯುತ್ ತಂತಿಗಳು ನೆಲದ ಮೇಲೆ ಬಿದ್ದಿರುತ್ತವೆ. ಆದ್ದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ವಿದ್ಯುತ್ ತಂತಿ ಮುಟ್ಟಬಾರದು. ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರದಕೊಂಬೆಗಳನ್ನೂ ನೇರವಾಗಿ ತೆಗೆಯಲು ಯತ್ನಿಸಬಾರದು. ಇಂತಹ ಘಟನೆಗಳು ಕಂಡುಬಂದಾಗ ಮೊದಲು ಸೆಸ್ಕ್ ಕಚೇರಿಗೆ ಮಾಹಿತಿ ನೀಡಬೇಕು ಎಂದು ಸೆಸ್ಕ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಯಾವುದೇ ಸಮಸ್ಯೆಗಳಿದ್ದಲ್ಲಿ ೧೯೧೨ ಸಂಪರ್ಕಿಸಿ…:
ಪ್ರಸಕ್ತ ಸಾಲಿನ ಮಳೆಗಾಲದ ಅವಧಿಯಲ್ಲಿ ಅಪಘಾತಗಳನ್ನು ತಡೆಯಲು ಮತ್ತು ವಿದ್ಯುತ್ ಅಡಚಣೆಯಾದ ಸಂದರ್ಭದಲ್ಲಿ ಇಲಾಖೆಯ(೨೪೭) ಕೇಂದ್ರೀಯ ದೂರು ಕೇಂದ್ರ ೧೯೧೨ ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು.
ದೂರುಗಳಿದ್ದಲ್ಲಿ ಸಂಪರ್ಕಿಸಿ
ಮಡಿಕೇರಿ ಸರ್ವಿಸ್ ಸ್ಟೇಷನ್: ೦೮೨೭೨-೨೨೮೪೫೪
ವಿರಾಜಪೇಟೆ ಸರ್ವಿಸ್ ಸ್ಟೇಷನ್: ೯೪೪೮೨೮೯೪೦೯
ಸೋಮವಾರಪೇಟೆ ಸರ್ವಿಸ್ ಸ್ಟೇಷನ್: ೯೪೪೮೨೮೩೩೯೩
” ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ ನಿಭಾಯಿಸಲು ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಂಗಲ್ ಕಟ್ಟಿಂಗ್, ಲೈನ್ ಸ್ಟ್ರೆಂಥನಿಂಗ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿ ಜತೆ ೭೦ ಗ್ಯಾಂಗ್‌ಮನ್ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಒಪ್ಪಿಗೆ ನೀಡಿದ್ದು, ೫೦ ಗ್ಯಾಂಗ್‌ಮ್ಯಾನ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.”
-ರಾಮಚಂದ್ರ, ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್




