Mysore
20
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಕಾವಾ ಕಾಲೇಜಿಗೆ ಕೊನೆಗೂ ದಕ್ಕಿದ ಸಿ ಅಂಡ್ ಆರ್ ರೂಲ್

ಕೆ.ಬಿ.ರಮೇಶನಾಯಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸಲಿರುವ ಕಾವಾ

ಮೈಸೂರು: ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಕಲಾ ಶಿಕ್ಷಣ ನೀಡುವ ರಾಜ್ಯದ ಏಕೈಕ ಕಾಲೇಜಾಗಿದ್ದು, ಇದು (ಕಾವಾ)ಪದವಿ ಕಾಲೇಜಾಗಿ ಪರಿ ವರ್ತನೆಗೊಂಡಿದ್ದರೂ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಸೇರಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಸ್ಪಂದಿಸದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನಕ್ಕೆ ಸೇರಿಸಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಾವಳಿ ರೂಪಿಸಿ(ಸಿ ಅಂಡ್ ಆರ್ ರೂಲ್) ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

ದಶಕಗಳಿಂದ ಪ್ರಭಾರ ಡೀನ್ ಕಾರ್ಯಭಾರದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಚಾಮರಾಜೇಂದ್ರ ಕಾಲೇಜಿಗೆ ಸ್ವಾಯತ್ತತೆ ಅಥವಾ ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸಬೇಕೆಂಬ ಕೂಗಿಗೆ ಮನ್ನಣೆ ನೀಡದ ರಾಜ್ಯ ಸರ್ಕಾರ ಅಂತಿಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಒಳಪಡಿಸಿ ಸಿ ಅಂಡ್ ಆರ್ ನಿಯಮಗಳನ್ನು ರೂಪಿಸಿ ಘೋಷಣೆ ಮಾಡಿ ರುವುದಲ್ಲದೆ, ೧೫ ದಿನಗಳಲ್ಲಿ ಆಕ್ಷೇಪಣೆಗಳಿದ್ದಲ್ಲಿ ಸರ್ಕಾರದ ಕಾರ್ಯದರ್ಶಿಗೆ ಸಲ್ಲಿಸಬಹುದೆಂದು ಹೇಳಿದೆ. ಹೊಸ ವೃಂದ ಮತ್ತು ನೇಮಕಾತಿ ನಿಯಮ ಗಳ ಪ್ರಕಾರ ಡೀನ್ ಕಂ ಪ್ರಾಂಶುಪಾಲರು ಕಾಲೇಜಿಗೆ ಮುಖ್ಯಸ್ಥರಾಗಿದ್ದು, ಡೀನ್ ಹುದ್ದೆಗೆ ಕೆಎಎಸ್ ಅಧಿಕಾರಿಯನ್ನು ನಿಯೋಜಿಸುವುದಕ್ಕೆ ಅವಕಾಶ ನೀಡಿರುವುದು ಕಾವಾ ಆಂತರಿಕ ವಲಯ ದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸಯ್ಯಾಜಿರಾವ್ ರಸ್ತೆಯ ಕಟ್ಟಡದಲ್ಲಿ ೧೯೮೨ರಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ತಮ್ಮದೇ ಚಿತ್ರಕಲೆಯ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ನಂತರದ ವರ್ಷಗಳಲ್ಲಿ ಕಾಲೇಜನ್ನು ವಿಶಾಲವಾದ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕೆಂಬ ಒತ್ತಾಯ ಬಂದಿದ್ದರಿಂದ ಸಿದ್ಧಾರ್ಥ ನಗರದಲ್ಲಿರುವ ಜರ್ಮನ್ ಪ್ರೆಸ್ ಆವರಣದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿ ಸ್ಥಳಾಂತರಿಸಲಾಗಿತ್ತು.

ನಂತರ, ವಿರೋಧ, ನಾನಾ ಸಮಸ್ಯೆಗಳ ನಡುವೆಯೂ ಈಗ ಅತ್ಯುತ್ತಮವಾಗಿ ನಡೆಯುತ್ತಿದ್ದರೂ ಖಾಯಂ ಡೀನ್ ಇಲ್ಲದೆ ಪ್ರಭಾರ ಡೀನ್ ಕಾರ್ಯ ಭಾರದಲ್ಲೇ ನಡೆಯುತ್ತಿರುವುದು ಗಮನಾರ್ಹ.

ತ.ಮ.ವಿಜಯಭಾಸ್ಕರ್ ವರದಿ ಮೂಲೆಗೆ: ನಿವೃತ್ತ ಐಎಎಸ್ ಅಽಕಾರಿ ತ.ಮ.ವಿಜಯಭಾಸ್ಕರ್ ನೇತೃತ್ವದ ೭ನೇ ಆಡಳಿತ ಸುಧಾರಣಾ ಆಯೋಗ ತನ್ನ ವರದಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿನ ಆಡಳಿತಾತ್ಮಕ ಸುಧಾರಣೆಗಾಗಿ ೫೪ ಶಿ-ರಸ್ಸುಗಳನ್ನು ಮಾಡಿತ್ತು. ಇದರಲ್ಲಿ ಕಾವಾಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಆರ್ಥಿಕ, ಸಮಾಜ ಕಲ್ಯಾಣ ಮತ್ತು ಆಡಳಿತ ಸುಧಾರಣೆ ಇಲಾಖೆಗಳಿಗೆ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಆದರೆ, ಸ್ವಾಯತ್ತ ಸಂಸ್ಥೆ ಅಥವಾ ಉನ್ನತ ಶಿಕ್ಷಣ ಇಲಾಖೆ ಆಡಳಿತ ವ್ಯಾಪ್ತಿಗೆ ಬಿಡದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ಉಳಿಸಿಕೊಂಡು ಸಿ ಅಂಡ್ ಆರ್ ನಿಯಮಾ ವಳಿಗಳನ್ನು ರೂಪಿಸಿ ಜ.೧೩ರಂದು ರಾಜ್ಯಪತ್ರ ಹೊರಡಿಸಿದೆ.

ಇದರಿಂದಾಗಿ ಯುಜಿಸಿ ವೇತನ, ಉನ್ನತ ಶಿಕ್ಷಣ ಇಲಾಖೆಯ ಸೌಲಭ್ಯಗಳನ್ನು ಪಡೆಯಬಹುದೆಂಬ ನಿರೀಕ್ಷೆಯ ಲ್ಲಿದ್ದ ಬೋಧಕ- ಬೋಧಕೇತರ ಸಿಬ್ಬಂದಿ ಯಲ್ಲಿ ನಿರಾಶೆ ಮೂಡಿಸಿದೆ.

೧೦ ವರ್ಷಗಳಿಂದ ಪ್ರಭಾರ ಡೀನ್‌ಗಳ ಕಾರ್ಯಭಾರ: ೨೦೧೪ರವರೆಗೆ ದೃಶ್ಯ ಕಲಾ ಕಲಾವಿದ ವಿ.ಎ. ದೇಶಪಾಂಡೆ ಡೀನ್ ಆಗಿದ್ದನ್ನು ಬಿಟ್ಟರೆ ಪ್ರಭಾರ ಡೀನ್ ಗಳೇ ಕಾರ್ಯ ನಿರ್ವಹಿಸುತ್ತಿದ್ದು, ಡಾ.ಸಿ.ಜಿ.ಬೆಟಸೂರ ಮಠ, ಬಸವರಾಜ ಮುಸಾವಳಗಿ, ಎನ್.ಆರ್.ವಿಶು ಕುಮಾರ್, ವಿಜಯರಾವ್, ಶಿಲ್ಪಾನಾಗ್, ಬಿ.ಆರ್. ಪೂರ್ಣಿಮಾ, ಟಿ.ವೆಂಕಟೇಶ್, ಬಿ.ಆರ್.ಪೂರ್ಣಿಮಾ ಅವರ ನಂತರದಲ್ಲಿ ಈಗ ಪ್ರಾಚ್ಯ ವಸ್ತು,ಪರಂಪರೆ ಮತ್ತು ಸಂಗ್ರಹಾಲಯಗಳ ಇಲಾಖೆ ಆಯುಕ್ತ ಎ.ದೇವರಾಜು ಅವರು ಡೀನ್ ಆಗಿದ್ದಾರೆ. ಹೊಸ ನಿಯಮಾವಳಿ ಪ್ರಕಾರ ಕೆಎಎಸ್ ಅಧಿಕಾರಿಯನ್ನು ನಿಯೋಜಿಸಬಹುದಾಗಿದ್ದು, ರೀಡರ್ ವೃಂದದಿಂದ ಕನಿಷ್ಠ ೫ ವರ್ಷಗಳ ನಿರಂತರ ಸೇವಾನುಭವ ಹೊಂದಿರುವವರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಜ್ಯೇಷ್ಠತೆ ಆಧಾರದ ಮೇಲೆ ಕಾವಾ ರೀಡರ್ ಹುದ್ದೆಗೆ ಅರ್ಹತೆ ಬರುವ ತನ ಕವೂ ಕೆಎಎಸ್ ಅಧಿಕಾರಿಯೇ ಡೀನ್ ಜವಾಬ್ದಾರಿ ಹೊಂದುವುದರಿಂದ ಕೆಲವರ ಅಸಮಾಧಾನಕ್ಕೆ ಕಾರಣ ವಾಗಿದೆಯಲ್ಲದೆ, ಚಿತ್ರ ಕಲಾ ವಿಷಯವನ್ನೇ ಅರಿಯದರನ್ನು ನೇಮಿಸುವುದರಿಂದ ಪ್ರಯೋಜನವಿಲ್ಲ ಎಂಬ ಅಸಮಾಧಾನ ಬೋಧಕರಿಂದ ವ್ಯಕ್ತವಾಗಿದೆ.

” ಉನ್ನತ ಶಿಕ್ಷಣ ಇಲಾಖೆ ನಿಯಮಗಳನ್ನು ಅಳವಡಿಸಿಕೊಳ್ಳದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಯಮಾವಳಿ ರೂಪಿಸಿರುವುದು ಸರಿಯಲ್ಲ. ನಾವು ಆಕ್ಷೇಪಣೆ ಸಲ್ಲಿಸುತ್ತೇವೆ. ಕೆಲವರು ವೈಯಕ್ತಿಕ ಇಚ್ಛಾನುಸಾರ ನಿಯಮಾವಳಿ ರೂಪಿಸಿ ಅನು ಮೋದನೆ ಪಡೆದುಕೊಂಡಿರುವುದು ಸರಿಯಲ್ಲ.”

-ಹೆಸರು ಹೇಳಲಿಚ್ಚಿಸದ ಸಿಬ್ಬಂದಿ

” ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಮೋದನೆ ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ನಡೆಯದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಎಎಸ್ ಅಧಿಕಾರಿಯನ್ನು ನೇಮಿಸಲು ಅವಕಾಶ ಇದ್ದರೂ ರೀಡರ್ ಇಲ್ಲದ ಸಂದರ್ಭದಲ್ಲಿ ಎಂಬುದನ್ನು ತೋರಿಸಲಾಗಿದೆ.”

-ಎ.ದೇವರಾಜು, ಪ್ರಭಾರ ಡೀನ್.

 

 

Tags: