ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಅಧಿಕಾರಿಗಳು ಕೇಂದ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ದೇಶದಲ್ಲಿ ಇನ್ನೂ ಪ್ರಕರಣ ಪತ್ತೆಯಾಗಿಲ್ಲ, ಅಕ್ಕ ಪಕ್ಕದ ದೇಶಗಳಲ್ಲಿಯೂ ಎಬೋಲಾ ಪ್ರಕರಣ ದಾಖಲಾಗಿಲ್ಲ. ಆದರೂ ಕೂಡ ನಾವು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಆಫ್ರಿಕನ್ ದೇಶಗಳಾದ ಉಗಾಂಡಾ, ಕಾಂಗೋ ಮುಂತಾದ ದೇಶಗಳಿಂದ ಬಂದವರನ್ನು ೨೧ ದಿನಗಳ ಕಾಲ ನಿಗಾದಲ್ಲಿ ಇರಿಸಲಾಗುವುದು. ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಲು ಸೂಚಿಸಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸುತ್ತೇನೆ. ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ವಹಿಸಿದೆ. ಕೇಂದ್ರ ಸರ್ಕಾರವೂ ಮಾರ್ಗಸೂಚಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಮುಂಬರುವ ದಿನಗಳಲ್ಲಿ ಭಾರತ ದೊಡ್ಡ ಸಮಸ್ಯೆಗೆ ಸಿಲುಕಲಿದೆ. ದೇಶದ ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ರಾಹುಲ್ ಗಾಂಧಿಯವರು ಆರು ತಿಂಗಳ ಹಿಂದೆಯೇ ಹೇಳಿದ್ದರು.
ಅನವಶ್ಯಕವಾಗಿ ನಡೆಯುತ್ತಿರುವ ಯುದ್ಧದಿಂದ ಈ ಪರಿಸ್ಥಿತಿ ಬಂದಿದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಕೇಂದ್ರ ಸರ್ಕಾರ ಮೊದಲಿನಿಂದಲೂ ಸರಿಯಾಗಿ ನಡೆದುಕೊಂಡಿಲ್ಲ. ಭಾರತದ ನಿಲುವು ಏನು ಎನ್ನುವುದನ್ನು ಹೇಳಿಲ್ಲ. ಪ್ರವಾಸ ಮಾಡಬೇಡಿ, ಚಿನ್ನ ಖರೀದಿಸಬೇಡಿ ಇಂತಹ ಹೇಳಿಕೆ ನೀಡುತ್ತ ಮೋದಿಯವರು ಕಾಲ ಕಳೆಯುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸೋತಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಮಟ್ಟದಲ್ಲಿ ನೀಟ್ ಪರೀಕ್ಷೆ ನಡೆಸಲು ಸಿದ್ಧ
ಕೇಂದ್ರ ಅನುಮತಿ ನೀಡಿದರೆ ರಾಜ್ಯಮಟ್ಟದಲ್ಲಿ ನಾವು ನೀಟ್ ಪರೀಕ್ಷೆ ನಡೆಸಲು ಸಿದ್ಧ. ಪ್ರತಿ ವರ್ಷವೂ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯಲ್ಲಿ ಒಂದಲ್ಲ ಒಂದು ಎಡವಟ್ಟು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ. ಜವಾಬ್ದಾರಿಯುತವಾಗಿ ಪರೀಕ್ಷೆ ನಡೆಸದೆ, ಹೊಣೆಗಾರಿಕೆಯಿಲ್ಲದಂತೆ ವ್ಯವಹರಿಸುತ್ತಿದೆ. ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಪೋಷಕರ ಗೋಳು ಕೇಳುವವರು ಯಾರು?. ಜನಸಾಮಾನ್ಯರ ಕಷ್ಟ ಕೇಂದ್ರ ಸರ್ಕಾರಕ್ಕೆ ಅರ್ಥವೇ ಆಗುತ್ತಿಲ್ಲ. ನಾವು ಪ್ರಾರಂಭಿಸಿದ ಸಿಇಟಿ ಮಾದರಿಯಾಗಿ ನಡೆಯುತ್ತಿದೆ. ಹಾಗಾಗಿ ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.




