ಪ್ರಶಾಂತ್ ಎಸ್.
ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಅನಾಹುತಕ್ಕೆ ಹಾದಿ
ಎನ್.ಎಚ್.ಪಾಳ್ಯ,ಟೋಲ್‌ಗೇಟ್, ಶಿವಪುರ ತಿರುವಿನಲ್ಲಿ ರಿಫ್ಲೆಕ್ಟರ್,ಬ್ಯಾರಿಕೇಡ್ ಅಳವಡಿಕೆ ಅಗತ್ಯ
ಮೈಸೂರು: ಮೈಸೂರು- ಮಾನಂದವಾಡಿ ಹೆದ್ದಾರಿಯಲ್ಲಿರುವ ಅಶೋಕಪುರಂ ರೈಲ್ವೆ ವರ್ಕ್‌ಶಾಪ್, ನಾಚನಹಳ್ಳಿ ಪಾಳ್ಯ, ಟೋಲ್‌ಗೇಟ್, ಶಿವಪುರ ತಿರುವುಗಳು ‘ಬ್ಲಾಕ್ ಸ್ಪಾಟ್’ಗಳಾಗಿ ಮಾರ್ಪಟ್ಟಿವೆ.
ನಿತ್ಯ ಇಲ್ಲಿ ಒಂದಲ್ಲಾ ಒಂದು ಅಪಾಘಾತ ಸಂಭವಿಸುತ್ತಿದೆ.ಈ ಸ್ಥಳಗಳಲ್ಲಿ ಅಪಘಾತ ವಲಯ ಎಂಬ ಸೂಚನಾ ಫಲಕವಾಗಲಿ, ರಿಫ್ಲೆಕ್ಟರ್, ಬ್ಯಾರಿಕೇಡ್ ಅಥವಾ ರಸ್ತೆ ವಿಭಜಕವನ್ನಾಗಲಿ ಅಳವಡಿಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸವಾರರು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ.
ಬೇಕಿದೆ ರಿಫ್ಲೆಕ್ಟರ್: ಈ ರಸ್ತೆಯಲ್ಲಿ ರಿಫ್ಲೆಕ್ಟರ್, ಬ್ಯಾರಿಕೇಡ್ ಮತ್ತು ಅತ್ಯಾಧುನಿಕ ಸೂಚನಾ ಫಲಕಗಳನ್ನು ಅಳವಡಿಸಬೇಕಿದೆ. ರಸ್ತೆಯ ಇಕ್ಕೆಲಗಳಲ್ಲಿ ರಾತ್ರಿ ವೇಳೆ ಹೊಳೆಯುವ ರಿಫ್ಲೆಕ್ಟರ್ಗಳನ್ನಾದರೂ ಅಳವಡಿಸಿದರೆ ಅಪಘಾತಗಳು ನಿಯಂತ್ರಣಕ್ಕೆ ಬರಲಿವೆ. ಸ್ವಲ್ಪ ಮೈ ಮರೆತರೂ ಮೂರೂ ದಿಕ್ಕುಗಳಿಂದಲೂ ನುಗ್ಗುವ ವಾಹನಗಳ ವೇಗವನ್ನು ನಿಯಂತ್ರಣ ಮಾಡದಿದ್ದರೆ, ಅಪಾಯ ಉಂಟಾಗಲಿದೆ.
ಬೇಕಿದೆ ಬ್ಯಾರಿಕೇಡ್ : ಅಶೋಕಪುರಂ ರೈಲ್ವೆ ವರ್ಕ್ ಶಾಪ್‌ನಿಂದ ಶಿವಪುರ ತಿರುವಿನವರೆಗಿನ ರಸ್ತೆ ಅಲ್ಲಲ್ಲಿ ಹಳ್ಳ ದಿಣ್ಣೆಗಳಿಂದ ಕೂಡಿದೆ. ದಿಣ್ಣೆ ಹತ್ತಿದ ವಾಹನಗಳು ಮತ್ತೆ ಇಳಿಯಬೇಕಾದರೆ ಬ್ರೇಕ್ ಹಾಕಿ ನಿಯಂತ್ರಿಸಬೇಕಾಗಿದೆ. ಈ ಹಿಂದೆ ಸಾರ್ವಜನಿಕರ ದೂರನ್ನು ಆಲಿಸಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಅಂದಿನಿಂದ ಇಲ್ಲಿ ಅಪಘಾತವಾಗುವುದು ತುಸು ಕಡಿಮೆಯಾಗಿತ್ತು. ಆದರೆ,ಇದೀಗ ಬ್ಯಾರಿಕೇಡ್‌ಗಳು ಕಣ್ಮರೆಯಾಗಿದ್ದರಿಂದ ಎದುರು -ಬದುರು ಚಲಿಸುವ ವಾಹನಗಳಿಗೂ ತೊಂದರೆ ಆಗುತ್ತಿದೆ. ಎರಡು ದಿನಗಳ ಹಿಂದೆ ಕೂಡ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿ ಎರಡೂ ವಾಹನಗಳು ಜಖಂಗೊಂಡಿವೆ.
” ಅಶೋಕಪುರಂ ರೈಲ್ವೆ ವರ್ಕ್‌ಶಾಪ್, ನಾಚನಹಳ್ಳಿ ಪಾಳ್ಯ, ಟೋಲ್ ಗೇಟ್, ಶಿವಪುರ ತಿರುವು ಬಳಿ ಬ್ಯಾರಿಕೇಡ್ ಅಳವಡಿಸಬೇಕು. ಇದರಿಂದ ಮೂರೂ ದಿಕ್ಕುಗಳಿಂದ ಬರುವ ವಾಹನಗಳ ಅಪಘಾತ ನಿಯಂತ್ರಣವಾಗುತ್ತದೆ. ಸವಾರರು ಜಾಗ್ರತೆಯಿಂದ ರಸ್ತೆಯಲ್ಲಿ ಸಂಚರಿಸಬಹುದು. ಪೊಲೀಸ್ ಇಲಾಖೆ ಕೂಡಲೇ ಸಮಸ್ಯೆ ಬಗೆಹರಿಸಬೇಕಿದೆ.”
-ಚಕ್ರವರ್ತಿ, ಬೈಕ್ ಸವಾರ





