ಕಂಗಾಲಾದ ಕುಟುಂಬ; ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ಮನಕಲಕುವ ಘಟನೆ
ಶ್ರೀಧರ್ ಆರ್. ಭಟ್
ನಂಜನಗೂಡು: ತಾಯಿ ಪಡುತ್ತಿರುವ ಕಷ್ಟ ನೋಡಲಾಗದೆ ಪ್ರೌಢಶಾಲೆ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿರುವ ಮನಕಲಕುವ ಘಟನೆ ತಾಲ್ಲೂಕಿನ ಕೆಂಪಿ ಸಿದ್ದನಹುಂಡಿಯಲ್ಲಿ ನಡೆದಿದೆ.
೮ ವರ್ಷಗಳ ಹಿಂದೆ ತಂದೆಯನ್ನು ಕಳೆದು ಕೊಂಡಿದ್ದ ಬಾಲಕ ತಾಯಿಯೊಂದಿಗೆ ಅಜ್ಜಿ ಮನೆ ಕೆಂಪಿಸಿದ್ದನ ಹುಂಡಿಯಲ್ಲಿ ವಾಸವಾಗಿದ್ದ. ಅಜ್ಜ, ಅಜ್ಜಿ, ತಾನು ಹಾಗೂ ತಂಗಿ ಸೇರಿದಂತೆ ನಾಲ್ಕು ಜೀವಗಳನ್ನು ಸಾಕಲು ತಾಯಿ ಪಡುತ್ತಿರುವ ಕಷ್ಟ ನೋಡಲಾಗದೆ ಬಾಲಕ ಭರತ್ ಮನೆ ಬಿಟ್ಟಿದ್ದಾನೆ.
ತಾಯಿಯ ದುಡಿಮೆಯ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ. ನಾನು ದುಡಿದು ಸಂಪಾದನೆ ಮಾಡುವವರೆಗೂ ಮನೆಗೆ ಬರಲ್ಲ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಅಕ್ಟೋಬರ್ ೧೬ರಂದು ಪತ್ರ ಬರೆದಿಟ್ಟು ಮನೆಯಿಂದ ಹೋದ ಭರತ್ ೧೨ ದಿನಗಳಾದರೂ ಮನೆಗೆ ವಾಪಸ್ ಬಂದಿಲ್ಲ. ತಾಯಿ ಮಹದೇವಮ್ಮ ಗ್ರಾಮದ ಕನಕದಾಸ ಪ್ರೌಢಶಾಲೆಯಲ್ಲಿ ಬಿಸಿಯೂಟದ ಅಡುಗೆ ಸಿಬ್ಬಂದಿಯಾಗಿದ್ದಾರೆ. ಮಗ ಭರತ್ ಅದೇ ಶಾಲೆಯ ೧೦ ನೇ ತರಗತಿಯ ವಿದ್ಯಾರ್ಥಿ. ಶಾಲೆಯಲ್ಲಿ ಹಾಗೂ ಮನೆಯಲ್ಲಿ ಹೆತ್ತಮ್ಮ ದುಡಿಯುವುದನ್ನು ಪ್ರತಿನಿತ್ಯ ನೋಡುತ್ತಿದ್ದ ಬಾಲಕ ಅಮ್ಮನ ದುಡಿಮೆಯ ಕಷ್ಟ ನೋಡಲಾಗದೇ ಮನೆ ಬಿಟ್ಟು ಹೋಗಿದ್ದಾನೆ.
ಮಗ ಮನೆಯನ್ನು ಬಿಟ್ಟುಹೋದ ಬಳಿಕ ಈಗ ಮನೆಯಲ್ಲಿ ನೀರವ ಮೌನ ಆವರಿಸಿದೆ. ಭರತ್ ನನ್ನು ನೆನಪಿಸಿಕೊಂಡು ಅಜ್ಜ ಮಲ್ಲಯ್ಯ, ಅಜ್ಜಿ ಮಲ್ಲಮ್ಮ ಹಾಗೂ ತಾಯಿ ಮಹದೇವಮ್ಮ ಕಣ್ಣೀರು ಹಾಕುತ್ತಿದ್ದಾರೆ. ಸಂಬಂಧಿಕರ ಮನೆಯನ್ನೆಲ್ಲಾ ಜಾಲಾಡಿದ ಅವರು ಈಗ ಬಾಲಕ ನನ್ನು ಪತ್ತೆ ಮಾಡಿಕೊಡಬೇಕೆಂದು ನಂಜನಗೂಡು ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ದಾರೆ.
೮ ವರ್ಷಗಳ ಹಿಂದೆ ಜಾಂಡೀಸ್ ಕಾಯಿಲೆಯಿಂದ ಅಳಿಯ ನಾಗರಾಜ ಮೃತಪಟ್ಟ ಬಳಿಕ ಮಗಳು ಇಬ್ಬರೂ ಮಕ್ಕಳೊಂದಿಗೆ ನಮ್ಮೊಡನೆಯೇ ಇದ್ದಾರೆ. ಮಗಳಿಗೆ ನಮ್ಮನ್ನು ಬಿಟ್ಟರೆ ಬೇರ‍್ಯಾರೂ ದಿಕ್ಕಿಲ್ಲ. ನಮಗೆ ಮಗಳು, ಮೊಮ್ಮಕ್ಕಳನ್ನು ಬಿಟ್ಟರೆ ಬೇರ‍್ಯಾರೂ ಇಲ್ಲ. ಇಂತಹ ಸ್ಥಿತಿಯಲ್ಲಿ ಮನೆ ಬಿಟ್ಟು ಹೋಗಿರುವ ಭರತ್‌ನನ್ನು ಮನೆಗೆ ಕರೆದುಕೊಂಡು ಬನ್ನಿ ಎಂದು ಮಲ್ಲಯ್ಯ ಕಂಡವರೆಲ್ಲರನ್ನೂ ಅಂಗಲಾಚಿಸುವ ಪರಿ ಎಂತಹವರ ಹೃದಯವನ್ನೂ ಕಲಕುತ್ತದೆ.
ಭರತ್ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತ ಮನೆ ಬಿಟ್ಟು ಹೋಗಿರುವ ವಿಷಯ ತಿಳಿದು ನಾವೂ ಕೂಡ ದಿಗ್ಮೂಢರಾಗಿದ್ದೇವೆ. -ಮಂಜುನಾಥ್, ಮುಖ್ಯಶಿಕ್ಷಕ, ಕನಕದಾಸ ಪ್ರೌಢಶಾಲೆ





