ಸ್ಚಚ್ಛ ಸರ್ವೇಕ್ಷಣ್‌ಗೆ ಸಹಕಾರಿಯಾದ ಪಾಲಿಕೆಯ ತೋಟಗಾರಿಕೆ ವಿಭಾಗ
ಸಾಲೋಮನ್
ಮೈಸೂರು: ‘ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ…’ ಎಂಬ ಜನಪ್ರಿಯ ಹಾಡು ಮೈಸೂರು ‘ಮಲ್ಲಿಗೆ ನಗರಿ’ ಎಂಬ ಬ್ರ್ಯಾಂಡ್ ನೇಮ್‌ಗೆ ಕಾರಣವಾಗಿದೆ. ಸ್ವಚ್ಛ ಸರ್ವೇಕ್ಷಣ್‌ಗೆ ಸಹಕಾರಿಯಾಗುವಂತೆ ಮೈಸೂರು ಮಹಾನಗರ ಪಾಲಿಕೆಯ ತೋಟಗಾರಿಕಾ ವಿಭಾಗವು ವಿವಿಧ ಅಲಂಕಾರಿಕ ಹೂ ಗಿಡಗಳು ಹಾಗೂ ಕ್ರೋಟನ್ ಗಿಡಗಳನ್ನು ಬೆಳೆಸಿ ನಗರದ ಸ್ವಚ್ಛತೆ ಹಾಗೂ ಅಂದ ಹೆಚ್ಚಿಸಲು ಮುಂದಾಗಿದೆ.
ನಾಡಹಬ್ಬ ದಸರಾ ವೇಳೆ ರಸ್ತೆ ವಿಭಜಕಗಳ ನಡುವೆ ಗಿಡ ನೆಟ್ಟು ಬೆಳೆಸಿ, ನೀರು ಹಾಕಿ ಪೋಷಿಸುತ್ತಾ ಸಂರಕ್ಷಣೆ ಮಾಡಿರುವ ಫಲವಾಗಿ ಈಗ ವಿಭಜಕಗಳ ನಡುವೆ ಬೆಳೆದಿರುವ ಗಿಡಗಳಲ್ಲಿ ಹೂ ಅರಳಿದ್ದು, ನಗರದ ಅಂದ ಹೆಚ್ಚಿಸಿವೆ. ಹೂಗಳಿಂದ ಅಲಂಕೃತವಾದ ಮೈಸೂರಿನ ರಸ್ತೆಗಳು ಈಗ ಹೂದೋಟದ ಸಾಲುಗಳಂತೆ ಕಂಗೊಳಿಸುತ್ತಿವೆ.
ನಗರದ ಬೀದಿಗಳಲ್ಲಿ ಕಸ ಗುಡಿಸುವುದು ಹಾಗೂ ತ್ಯಾಜ್ಯ ವಿಲೇವಾರಿ ಮಾತ್ರವಲ್ಲದೆ, ಗಿಡಗಳನ್ನು ಬೆಳೆಸಿ ರಸ್ತೆ ಉದ್ದಕ್ಕೂ ಹಸಿರು ಕಂಗೊಳಿಸುವಂತೆ ಹಾಗೂ ಗಿಡಗಳಲ್ಲಿ ಹೂಗಳು ಅರಳುವಂತೆ ನೋಡಿಕೊಂಡಿರುವ ತೋಟಗಾರಿಕೆ ವಿಭಾಗದ ಜವಾಬ್ದಾರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಪ್ರಮುಖ ರಸ್ತೆಗಳಾದ ಜೆಎಲ್‌ಬಿ ರಸ್ತೆ, ವಿಶ್ವ ಮಾನವ ಜೋಡಿ ರಸ್ತೆ, ಚಾಮರಾಜ ಜೋಡಿ ರಸ್ತೆ (ಇಲ್ಲಿ ಗಿಡಗಳು ಹಾಳಾಗಿವೆ), ವಾಣಿವಿಲಾಸ ರಸ್ತೆ, ಮೈಸೂರು-ಹುಣಸೂರು ರಸ್ತೆ, ಮೈಸೂರು-ಬೆಂಗಳೂರು ರಸ್ತೆ, ಮೈಸೂರು-ನೀಲಗಿರಿ ರಸ್ತೆ, ಮಾನಂದವಾಡಿ ರಸ್ತೆ ಮುಂತಾದ ಕಡೆಗಳಲ್ಲಿ ರಸ್ತೆ ವಿಭಜಕಗಳಲ್ಲಿ ಬೆಳೆಸಿದ್ದ ಅಲಂಕಾರಿಕ ಗಿಡಗಳು ಹಾಗೂ ಹೂ ಗಿಡಗಳಲ್ಲಿ ಈಗ ಅಂದವಾಗಿ ಅರಳಿರುವ ಹೂಗಳು ಕಣ್ಮನ ಸೆಳೆಯುತ್ತಿವೆ.
ಈಗಾಗಲೇ ಸ್ವಚ್ಛ ಸರ್ವೇಕ್ಷಣ್ ಆರಂಭವಾಗಿದ್ದು ಈ ಬಾರಿ ಮತ್ತೆ ಮೈಸೂರು ನಗರವನ್ನು ಮೊದಲ ಸ್ಥಾನಕ್ಕೆ ತರಲು ಮಹಾನಗರ ಪಾಲಿಕೆ ಭಾರೀ ಪ್ರಯತ್ನ ನಡೆಸುತ್ತಿದೆ. ರಸ್ತೆ ಮಗ್ಗುಲಲ್ಲಿರುವ ತ್ಯಾಜ್ಯ ವಿಲೇವಾರಿ ಜೊತೆಗೆ ರಸ್ತೆಗಳಿಗೆ ಮತ್ತಷ್ಟು ಮೆರುಗು ನೀಡುವ ಸಲುವಾಗಿ ಬೆಳೆಸಿದ ಅಲಂಕಾರಿಕ ಗಿಡಗಳು ಈಗ ಬೆಳೆದು ನಿಂತಿದ್ದು, ನಗರದ ರಸ್ತೆಗಳ ಅಂದವನ್ನು ಹೆಚ್ಚಿಸಿವೆ. ಗಿಡಗಳಲ್ಲಿ ಅರಳಿರುವ ಅಂದವಾದ ಹೂಗಳೂ ಕೂಡ ಜನಮನ ಗೆಲ್ಲುತ್ತಿವೆ.
ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ದೇಶದಲ್ಲಿ ಜನವರಿ ತಿಂಗಳಿಂದಲೇ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ತೋಟಗಾರಿಕೆ ವಿಭಾಗ ತೆಗೆದುಕೊಂಡಿರುವ ಕ್ರಮ ಮಹತ್ವzಗಿದೆ. ನಗರವನ್ನು ಅಂದವಾಗಿ ಹಾಗೂ ಶುಚಿಯಾಗಿಡಲು ಮಹಾನಗರ ಪಾಲಿಕೆ ನಿರಂತರವಾಗಿ ಶ್ರಮಿಸುತ್ತಿದೆ. ಪಾಲಿಕೆಯ ಶ್ರಮದ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸಿ ನಗರದ ಸ್ವಚ್ಛತೆಯನ್ನು ಕಾಪಾಡಲು ಸಹಕರಿಸಿದರೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮತ್ತೆ ಮೈಸೂರು ದೇಶದಲ್ಲೇ ಸ್ವಚ್ಛ ನಗರ ಎಂಬ ಹೆಸರನ್ನು ಮರಳಿ ಪಡೆಯುವ ನಿರೀಕ್ಷೆ ಇದೆ.
ಗಿಡ ಬೆಳೆಯಲು ಅನನುಕೂಲತೆ: ನಗರದ ವಿವಿಧೆಡೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದ್ದು, ಕೆಲವೆಡೆ ಗಿಡಗಳು ಬೆಳೆಯುವುದಕ್ಕೆ ತೊಡಕುಗಳು ಎದುರಾಗಿವೆ. ಸಾರ್ವಜನಿಕರು ರಸ್ತೆಯನ್ನು ದಾಟುವಾಗ ಗಿಡಗಳನ್ನು ತುಳಿಯುವುದರಿಂದ ಗಿಡಗಳು ಹಾಳಾಗಿವೆ. ಬಿದಿರು ಕಡ್ಡಿಗಳ ರಕ್ಷಣೆ ನೀಡಿದ್ದರೂ ಜನರು ಕಿತ್ತು ಬಿಸಾಡಿದ್ದಾರೆ. ಕೆಲವು ಕಡೆಗಳಲ್ಲಿ ಬಿಡಾಡಿ ದನಗಳು ರಸ್ತೆ ವಿಭಜಕಗಳ ನಡುವೆ ಮಲಗುವುದು, ಗಿಡಗಳನ್ನು ತಿನ್ನುವುದರಿಂದ ಗಿಡಗಳು ಬೆಳೆಯಲು ಸಾಧ್ಯವಾಗಿಲ್ಲ.ವಾಹನಗಳ ದಟ್ಟವಾದ ಹೊಗೆಯೂ ಕೂಡ ಗಿಡಗಳ ಬೆಳವಣಿಗೆಗೆ ಅಡ್ಡಿಯಾಗಿದೆ. ಗಿಡಗಳ ರಕ್ಷಣೆ ಮಾಡುತ್ತಿರುವ ತೋಟಗಾರಿಕೆ ವಿಭಾಗದ ಸಿಬ್ಬಂದಿಗೆ ರಘುಲಾಲ್ ಅಂಡ್ ಕಂಪೆನಿಯವರು ಟೀ ಶರ್ಟ್ ಮತ್ತು ಟ್ರೀ ಗಾರ್ಡ್‌ಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.
ಅರಳಿದ ಹೂಗಳು: ಬೋಗನ್ ವಿ, ಪ್ಲುಮೇರಿಯಾ, ಪುಡಿಕ, ಕಣಗಲೆ, ಎಮಿಲಿಯ, ನಂದಿಬಟ್ಟಲು, ಜಟ್ರೋಪ ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ವಿವಿಧ ಜಾತಿಯ ಹೂ ಗಿಡಗಳಿವೆ
ಸಾಂಸ್ಕೃತಿಕ ನಗರಿ ಮೈಸೂರು ಇತ್ತೀಚಿನ ವರ್ಷಗಳಲ್ಲಿ ಸ್ವಚ್ಛತೆಯಲ್ಲಿ ಹಿಂದುಳಿದಿದೆ. ಈ ಬಾರಿ ಸ್ವಚ್ಛ ನಗರಿಯಾಗಿ ಹೊರಹೊಮ್ಮಲು ಪ್ರಯತ್ನಗಳು ಭರದಿಂದ ಸಾಗಿವೆ. ೨೦೧೫-೧೬ರಲ್ಲಿ ೧ನೇ ಸ್ಥಾನ ಪಡೆದಿತ್ತು. ನಂತರದ ವರ್ಷಗಳಲ್ಲಿ ರ‍್ಯಾಂಕಿಂಗ್‌ನಲ್ಲಿ ಕುಸಿತಕಂಡಿತ್ತು. ೨೦೧೭ರಲ್ಲಿ ೫ನೇ ಸ್ಥಾನ, ೨೦೧೮ರಲ್ಲಿ ೮ನೇ ಸ್ಥಾನ, ೨೦೧೯ರಲ್ಲಿ ೩ನೇ ಸ್ಥಾನಕ್ಕೆ ಜಿಗಿತ, ೨೦೨೦ರಲ್ಲಿ ಮತ್ತೆ ೫ನೇ ಸ್ಥಾನಕ್ಕೆ ಕುಸಿತ, ೨೦೨೧ರಲ್ಲಿ ೧೧ನೇ ಸ್ಥಾನ, ೨೦೨೨ರಲ್ಲಿ ೮ ಹಾಗೂ ೨೦೨೩ರಲ್ಲಿ ೨೭ನೇ ಸ್ಥಾನಕ್ಕೆ ಕುಸಿತ ಕಂಡಿತ್ತು