Mysore
30
clear sky

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ರಾಮ್ ಜೀ ಸಕ್ಪಾಲ್ ಬಡಾವಣೆಯಲ್ಲಿ ಮೂಲಸೌಕರ್ಯ ಮರೀಚಿಕೆ

ಕೃಷ್ಣ ಸಿದ್ದಾಪುರ

ನೀರಿಗೂ ಪರದಾಟ, ಕತ್ತಲಲ್ಲೇ ಮಕ್ಕಳ ವಿದ್ಯಾಭ್ಯಾಸ 

 ಸಿದ್ದಾಪುರ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್ ಮೊಟ್ಟೆ ಗ್ರಾಮದ ರಾಮ್ ಜೀ ಸಕ್ಪಾಲ್ ಬಡಾವಣೆಯಲ್ಲಿ ಕುಡಿಯುವ ನೀರು, ವಿದ್ಯುತ್ ಮೊದಲಾದ ಮೂಲಸೌಕರ್ಯವಿಲ್ಲದೇ ಅಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಾಣ-ಒಕ್ಕಲೆಬ್ಬಿಸುವ ಭೀತಿ: ಎರಡು ವರ್ಷಗಳ ಹಿಂದೆ ಜೈ ಭೀಮ್ ಸಂಘಟನೆಯ ನೇತೃತ್ವದಲ್ಲಿ ನಿವೇಶನ ರಹಿತರು ಹೋರಾಟ ನಡೆಸಿ, ಇಲ್ಲಿನ ಸರ್ಕಾರಿ ಜಾಗದಲ್ಲಿ ೩೦ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಬದುಕಿನ ಮೂಲಭೂತ ಅಗತ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳಿಲ್ಲದೆ ಈ ಕುಟುಂಬಗಳು ದಿನದೂಡುತ್ತಿವೆ. ರಾತ್ರಿ ಕತ್ತಲು ಆವರಿಸಿದರೆ ಮೇಣದಬತ್ತಿಯೇ ಬೆಳಕಿನ ಆಸರೆ. ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಮಕ್ಕಳು ಕೂಡ ಇದೇ ಬೆಳಕಿನಲ್ಲಿ ಓದಬೇಕಾದ ಅನಿವಾರ್ಯತೆ ಎದುರಾಗಿದೆ.

ಬಡಾವಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ಕೆರೆಯ ನೀರನ್ನೇ ಅವಲಂಬಿಸಿದ್ದಾರೆ. ಈ ಹಿಂದೆ ಇದ್ದ ನೀರಿನ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ ಎಂಬುದು ನಿವಾಸಿಗಳ ಆರೋಪ. ಹೀಗಾಗಿ ಕೆರೆಯ ಕಲುಷಿತ ನೀರಿನ ಬಳಕೆಯಿಂದ ಮಕ್ಕಳಲ್ಲಿ ಕಜ್ಜಿ, ತುರಿಕೆಯಂತಹ ಚರ್ಮರೋಗಗಳು ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಬವಣೆ ಎದುರಾಗಿರುವುದು ನಿವಾಸಿಗಳ ಚಿಂತೆಯನ್ನು ಹೆಚ್ಚಿಸಿದೆ.

ಒಂದೆಡೆ ಮಕ್ಕಳ ಆರೋಗ್ಯದ ಆತಂಕ, ಮತ್ತೊಂದೆಡೆ ವಿದ್ಯುತ್ ಇಲ್ಲದೆ ವಿದ್ಯಾಭ್ಯಾಸಕ್ಕೆ ತೊಂದರೆ. ಇನ್ನೊಂದೆಡೆ ತಾವು ವಾಸಿಸುತ್ತಿರುವ ಗುಡಿಸಲುಗಳನ್ನು ತೆರವುಗೊಳಿಸಬಹುದೆಂಬ ಭೀತಿ. ಹೀಗೆ ಮೂಲಸೌಕರ್ಯಗಳ ಕೊರತೆಯ ಜತೆಗೆ ಅನಿಶ್ಚಿತತೆಯಲ್ಲೇ ಕುಟುಂಬಗಳು ಬದುಕು ಸಾಗಿಸುತ್ತಿವೆ.

ನಿವಾಸಿಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಮತದಾನದ ಹಕ್ಕು ದೊರೆತಿದ್ದರೂ, ತಾವು ವಾಸಿಸುತ್ತಿರುವ ಜಾಗಕ್ಕೆ ಹಕ್ಕುಪತ್ರ ನೀಡಲಾಗಿಲ್ಲ. ನಿವೇಶನ ರಹಿತರ ಪಟ್ಟಿಯಲ್ಲಿ ಹೆಸರು ಸೇರಿದ್ದರೂ ಶಾಶ್ವತ ನೆಲೆ ಕಲ್ಪಿಸದಿರುವುದು ಬಡ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಬಡಾವಣೆಯ ನಿವಾಸಿಗಳು ತಮ್ಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಕಡಿತಗೊಳಿಸಿರುವ ಕುಡಿಯುವ ನೀರಿನ ಸಂಪರ್ಕವನ್ನು ಮರುಸ್ಥಾಪಿಸಿ, ವಿದ್ಯುತ್ ಸೌಲಭ್ಯ ಕಲ್ಪಿಸುವುದರ ಜತೆಗೆ ಹಕ್ಕುಪತ್ರದ ವಿಚಾರದಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಚುನಾವಣೆ ಬಹಿಷ್ಕರಿಸುವುದರ ಜತೆಗೆ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

” ಪ್ರತಿವರ್ಷ ಬಾಡಿಗೆ ಮನೆ ಹಾಗೂ ಲೈನ್ ಮನೆಗಳಲ್ಲಿ ಅಲೆದಾಡಿ ಸುಸ್ತಾಗಿದೆ. ನಿವೇಶನ ರಹಿತರ ಪಟ್ಟಿಯಲ್ಲಿ ನಮ್ಮ ಹೆಸರಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾನದ ಹಕ್ಕು ದೊರೆತಿದ್ದರೂ ಕುಡಿಯುವ ನೀರು, ಹಕ್ಕುಪತ್ರ ಹಾಗೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಕೂಡಲೇ ಸೌಲಭ್ಯ ಕಲ್ಪಿಸದಿದ್ದರೆ ಶಾಸಕರ ಮನೆ ಮುಂದೆ ಧರಣಿ ನಡೆಸುತ್ತೇವೆ.”

-ಸುಮಿತ್ರ, ರಾಮ್ ಜೀ ಸಕ್ಪಾಲ್ ಬಡಾವಣೆ ನಿವಾಸಿ

” ರಾಮ್ ಜೀ ಸಕ್ಪಾಲ್ ಬಡಾವಣೆಯಲ್ಲಿ ನೀರು, ವಿದ್ಯುತ್ ಮೊದಲಾದ ಸೌಕರ್ಯವಿಲ್ಲದೇ  ಇರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”

-ಎಸ್.ಜೆ. ಸೋಮಶೇಖರ್,  ಕೊಡಗು ಜಿಲ್ಲಾಧಿಕಾರಿ

” ಪೊನ್ನತ್ ಮೊಟ್ಟೆಯ ನಿರಾಶ್ರಿತರಿಗೆ ಹಕ್ಕು ಪತ್ರದೊಂದಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶೀಘ್ರವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.”

-ಮಂಥರ್ ಗೌಡ, ಶಾಸಕ

” ಮತ ಪಡೆಯುವ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಽಗಳು ನಮ್ಮ ಬಳಿಗೆ ಬರುತ್ತಾರೆ. ನಂತರ ನಮ್ಮ ಸಂಕಷ್ಟವನ್ನು ಆಲಿಸುವವರಿಲ್ಲ. ನಿವೇಶನ ರಹಿತರಾದ ನಾವು ಅರ್ಜಿ ಸಲ್ಲಿಸಿ ಪೊನ್ನತ್ ಮೊಟ್ಟೆಯ ಸರ್ಕಾರಿ ಜಾಗದಲ್ಲಿ ಪ್ಲಾಸ್ಟಿಕ್ ಶೆಡ್‌ಗಳನ್ನು ನಿರ್ಮಿಸಿಕೊಂಡು ಎರಡು ವರ್ಷಗಳಿಂದ ವಾಸಿಸುತ್ತಿದ್ದೇವೆ. ಇದೀಗ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಕುಡಿಯುವ ನೀರಿನ  ಸಂಪರ್ಕ ಕಡಿತಗೊಳಿಸಲಾಗಿದೆ. ಈ ಬಗ್ಗೆ ವಿಚಾರಿಸಲು ಪಂಚಾಯಿತಿಗೆ ಹೋದಾಗ, ಬುಲ್ಡೋಜರ್ ತಂದು ಗುಡಿಸಲುಗಳನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.”

-ಶೌಕತ್ ಅಲಿ, ಮುಖಂಡರು, ರಾಮ್ ಜೀ ಸಕ್ಪಾಲ್ ಬಡಾವಣೆ 

 

 

Tags:
error: Content is protected !!