ಇಂದಿನ ದುಬಾರಿ ಕಾಲದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೈಭವದ ಮದುವೆಗಳನ್ನು ನಡೆಸಬೇಕೆ ಎಂಬ ಪ್ರಶ್ನೆ ಏಳುತ್ತದೆ. ಮದುವೆ ಹೇಗೆ ಮಾಡಬೇಕೆಂಬುದು ವ್ಯಕ್ತಿಯ ವೈಯಕ್ತಿಕ ವಿಚಾರ ಹಾಗೂ ಅವರ ಹಣಕಾಸಿನ ಸ್ಥಿತಿಯ ಮೇಲೆ ನಿರ್ಣಯವಾಗುತ್ತದೆ ಎಂಬುದು ಸತ್ಯ. ಆದರೆ ಸಾರ್ವಜನಿಕ ಜೀವನದಲ್ಲಿ ಅದರಲ್ಲೂ ಸರಳತೆಯ ಪಾಠ ಮಾಡುವ ರಾಜಕಾರಣಗಳು ಈ ವಿಚಾರದಲ್ಲಿ ನುಡಿದಂತೆ ನಡೆದರೆ ಅದು ಬೇರೆಯವರಿಗೆ ಒಂದು ಪಾಠವಾಗುತ್ತದೆ ಎಂಬುದಕ್ಕೆ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನಡೆ ಉದಾಹರಣೆಯಾಗಿ ನಿಲ್ಲುತ್ತದೆ. ಹಿರಿಯರ ಹಾಗೂ ಬಂದು ಮಿತ್ರರ ಸಮ್ಮುಖದಲ್ಲಿ ರಾಷ್ಟ್ರಕವಿ ಕುವೆಂಪುರವರ ರಚಿಸಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾವಿಧಿಗಳಾದ ಪರಸ್ಪರ ಪ್ರೀತಿ, ವಿಶ್ವಾಸ, ಮತ್ತು ಗೌರವದಿಂದ ಬಾಳುತ್ತೇವೆ ಹಾಗೂ ಕಷ್ಟ ಸುಖಗಳಲ್ಲಿ ಸಮಬಾಳು ಹೊಂದಿರುತ್ತೇವೆ ಎಂದು ಪ್ರಮಾಣವಚನ ಹೇಳಿ ತಾಳಿ ಕಟ್ಟುವ ಮೂಲಕ ಶಾಸಕರು ಸರಳ ವಿವಾಹವಾಗಿರುವುದು ಮಾದರಿ ಎಂದೇ ಹೇಳಬಹುದು.
-ಪಿ. ಸಿ. ಕಂಗಾಣಿಸೋಮು, ಮೈಸೂರು


