Mysore
26
scattered clouds

Social Media

ಶನಿವಾರ, 28 ನವೆಂಬರ್ 2026
Light
Dark

ಓದುಗರ ಪತ್ರ: ಸಂವಿಧಾನ ದಿನಾಚರಣೆ ಒಂದು ಪಕ್ಷದ ಕಾರ್ಯಕ್ರಮವೇ?

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಹಾಗಿರುವಾಗ ಎಲ್ಲ ಪಕ್ಷಗಳ ಶಾಸಕರನ್ನೂ ಆಹ್ವಾನಿಸಿ ಒಗ್ಗಟ್ಟಿನಿಂದ ಆಚರಿಸಬಹುದಿತ್ತಲ್ಲವೇ?

ಇದು ಯಾವುದೇ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವಾಗಿರಲಿಲ್ಲ, ಇಡೀ ರಾಜ್ಯದ ಜನರನ್ನು ಪ್ರತಿನಿಧಿಸುವ ಸರ್ಕಾರದ ಕಾರ್ಯಕ್ರಮವಾಗಿತ್ತು. ಹಾಗಾದರೆ ಸಂವಿಧಾನ ಇರುವುದು ಒಂದೇ ಪಕ್ಷದ ಶಾಸಕರು ಮತ್ತು ಸಚಿವರಿಗೆ ಮಾತ್ರವೇ? ಬೇರೆ ಪಕ್ಷದ ಶಾಸಕರು ಭಾರತ ಸಂವಿಧಾನದ ಅಡಿಯಲ್ಲಿ ಬರುವುದಿಲ್ಲವೇ? ಅವರೂ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಲ್ಲವೇ? ಅವರಿಗೂ ಸಂವಿಧಾನದ ಮೇಲೆ ಗೌರವ, ಅಭಿಮಾನ ಮತ್ತು ಹಕ್ಕುಗಳಿಲ್ಲವೇ?

ಒಂದೇ ಪಕ್ಷದ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆಸುವ ಬದಲು ಎಲ್ಲ ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದರೆ ಸಂವಿಧಾನದ ಆಶಯಕ್ಕೆ ಗೌರವ ಸಲ್ಲಿಸಿದಂತಾಗುತ್ತಿತ್ತು. ಸರ್ಕಾರದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಆಹ್ವಾನ ನೀಡುವ ವಿಶಾಲ ಮನಸ್ಸು ಇರಬೇಕಿತ್ತು.

ಸಂವಿಧಾನದ ದಿನಾಚರಣೆಯ ರಾಜಕೀಯ ಭಿನ್ನತೆಗಳು ಕಾಣಿಸಿಕೊಂಡರೆ ಅದಕ್ಕಿಂತ ನೋವಿನ ಸಂಗತಿ ಬೇರೇನಿದೆ? ವೇದಿಕೆಯ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವು ಹಾಕಿ, ಭಾಷಣಗಳಲ್ಲಿ ಸಂವಿಧಾನದ ಮಹತ್ವ ಸಾರಿದರೆ ಮಾತ್ರ ಸಾಲದು, ಅವರ ಆಶಯಗಳನ್ನು ನಮ್ಮ ನಡೆಗಳಲ್ಲೂ ಪಾಲಿಸಬೇಕು. ವಿರೋಧ ಪಕ್ಷದ ಶಾಸಕರನ್ನೂ ಆಹ್ವಾನಿಸಿ ಎಲ್ಲರೂ ಒಂದೇ ವೇದಿಕೆಯಲ್ಲಿ ನಿಂತಿದ್ದರೆ ಅದು ಮೈಸೂರಿನಿಂದ ಇಡೀ ದೇಶಕ್ಕೆ ಸಮಾನತೆ ಮತ್ತು ಸಹೋದರತ್ವದ ಸಂದೇಶ ನೀಡುತ್ತಿತ್ತು. ಸಂವಿಧಾನ ದಿನಾಚರಣೆ ರಾಜಕೀಯ ಪ್ರದರ್ಶನವಾಗದೆ, ರಾಜಕೀಯ ಭೇದ ಮರೆತು ಎಲ್ಲರೂ ಒಂದಾಗುವ ಪವಿತ್ರ ವೇದಿಕೆಯಾಗಬೇಕಿತ್ತು.

-ಮಹದೇವ ಎಂ., ಕರಿಯನಪುರ,ಕೊಳ್ಳೇಗಾಲ ತಾ.

Tags:
error: Content is protected !!