Mysore
33
few clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ | ಗಾಂಧಿ ಆತ್ಮಕತೆಯ ಆಯ್ದ ತುಣುಕು ; ಬಾಲ್ಯ ವಿವಾಹವೆಂಬ ನಾಚಿಕೆಗೇಡಿನ ಸಂಗತಿ

ನನ್ನ ಮದುವೆ, ನನ್ನ ಹದಿಮೂರನೆಯ ವಯಸ್ಸಿನಲ್ಲಿ ನಡೆಯಿತೆಂಬುದನ್ನು ನಾನು ವ್ಯಥೆಯಿಂದ ಇಲ್ಲಿ ಬರೆಯಬೇಕಾಗಿದೆ.

ನಾನು ಮಾತಾಪಿತೃ ನಿಷ್ಠೆಯಿಂದ ಕೂಡಿದ್ದೆ. ಆದರೆ ನನ್ನ ವಿಷಯಾಸಕ್ತಿಯೂ ಭೋಗಲಾಲಸೆಯೂ ಕಡಿಮೆಯಾಗಿರಲಿಲ್ಲ. ಶ್ರದ್ಧಾಪೂರ್ವಕವಾಗಿ ನನ್ನ ಎಲ್ಲ ಸುಖಗಳನ್ನೂ ಬಿಡಬೇಕೆಂಬುದನ್ನು ನಾನು ಇನ್ನೂ ಕಲಿತಿರಲಿಲ್ಲ. ನನ್ನ ಭೋಗೇಚ್ಛೆಗಾಗಿ ನನ್ನನ್ನು ಶಿಕ್ಷಿಸುವುದಕ್ಕೋ ಎಂಬಂತೆ ನಡೆದ ಒಂದು ದುರ್ಘಟನೆ, ನನ್ನ ಜೀವಮಾನವೆಲ್ಲಾ ಮನಸ್ಸಲ್ಲಿ ಕೊರೆಯುತ್ತಿದೆ. ಆ ಸಂಗತಿಯನ್ನು ಮುಂದೆ ತಿಳಿಸುವೆನು. ನಿಷ್ಕುಲಾನಂದರು ಹೀಗೆ ಹಾಡುತ್ತಾರೆ:

ಭೋಗವನ್ನು ಸವಿಯುವ ಆಸೆಯನ್ನು ಬಿಡದೆ ಭೋಗ ಸಾಮಗ್ರಿಯನ್ನು ಮಾತ್ರ ಬಿಟ್ಟರೆ ವೈರಾಗ್ಯ ಲಭಿಸುವುದಿಲ್ಲ. ತ್ಯಾಗವೆಂಬುದು ಒಂದು ಮನೋವೃತ್ತಿ. ಮನಸ್ಸು ಸ್ವಾಧೀನದಲ್ಲಿಲ್ಲದೆ ಬಾಹ್ಯವರ್ತನೆಯಿಂದ ಶಾಶ್ವತ ಫಲ ದೊರೆಯುವುದಿಲ್ಲ…. ನನ್ನ ಪಾಡಿಗೆ ನಾನು ಈ ಹಾಡನ್ನು ಹಾಡಿ ಕೊಂಡಾಗಲಾಗಲೀ, ಇತರರು ಹಾಡಿದಾಗಲಾಗಲೀ ಆ ದುರ್ಘಟನೆ ಮತ್ತು ಕಹಿಪ್ರಸಂಗ ನನಗೆ ಜ್ಞಾಪಕ ಬಂದು ನನ್ನಲ್ಲಿ ಲಜ್ಜೆಯನ್ನು ತುಂಬುತ್ತದೆ.

ನಮ್ಮ ತಂದೆ ತಾಯಿ ನನಗೆ ಬಾಲ್ಯ ವಿವಾಹವನ್ನು ಮಾಡಿದುದಕ್ಕಾಗಿ ಅವರನ್ನು ನಾನು ಮುಂದೆ ಟೀಕಿಸ ಬೇಕಾಗಬಹುದೆಂದು ನನಗೆ ಸ್ಪಪ್ನದಲ್ಲಿಯೂ ಆಗ ಹೊಳೆಯಲಿಲ್ಲ. ಆ ಸಮಯದಲ್ಲಿ ನನಗೆ ಎಲ್ಲವೂ ಯೋಗ್ಯವಾಗಿ, ಉಚಿತವಾಗಿ, ಇಷ್ಟವಾಗಿ ತೋರಿತು. ವಿವಾಹವಾಗಲು ನಾನೂ ತುಂಬ ಉತ್ಸುಕನಾಗಿದ್ದೆ. ಆಗ ನಮ್ಮ ತಂದೆ ಮಾಡಿದುದೆಲ್ಲ ನನಗೆ ನಿರ್ದುಷ್ಟವಾಗಿ ತೋರಿದುದರಿಂದ, ನಡೆದ ಸಂಗತಿಗಳೆಲ್ಲ ನನಗೆ ಸ್ಪಷ್ಟವಾಗಿ ನೆನಪಿದೆ.

ನಮ್ಮಲ್ಲಿ ಪರಸ್ಪರ ಸ್ಪಲ್ಪ ಭಯವೂ ಲಜ್ಜೆಯೂ ಇದ್ದಿತು. ಕ್ರಮೇಣ ಒಬ್ಬರನ್ನೊಬ್ಬರು ಅರಿತುಕೊಂಡು ನಿರಾತಂಕದಿಂದ ಮಾತನಾಡತೊಡಗಿದೆವು. ನಾವಿಬ್ಬರೂ ಒಂದೇ ವಯಸ್ಸಿನವರಾಗಿದ್ದೆವು. ಆದರೆ ನಾನು ಗಂಡನ ಅಧಿಕಾರವನ್ನು ವಹಿಸಿ ಕೊಳ್ಳಲು ತಡಮಾಡಲಿಲ್ಲ.

 

Tags:
error: Content is protected !!