ಸಾಲೋಮನ್
ಕಲಾವಿದೆ ಅಭಿರಾಮಿ ಚಿತ್ರಿಸಿದ ಅಮ್ಮನ ಬದುಕು–ಬವಣೆ ಬಹುರೂಪಿಯಲ್ಲಿ ಅನಾವರಣ
ಮೈಸೂರು: ಈ ಜೀವ ಎಂದಿಗೂ ಮರೆಯಲೇ ಬಾರದ ಒಂದು ಸಂಬಂಧ ಹಾಗೂ ನೆನಪುಗಳೆಂದರೆ ಅದು ಅಮ್ಮನು ತಾನೇ. ಅಮ್ಮ ಎದೆ ತುಂಬಾ ಆವರಿಸಿಕೊಂಡಿರುತ್ತಾಳೆ. ಕೆಲವರು ಮಾತಿನ ಮೂಲಕ, ಮತ್ತೆ ಕೆಲವರು ತಮ್ಮ ಬರವಣಿಗೆಯ ಮೂಲಕ ಅಮ್ಮನ ಬಗ್ಗೆ ಹೇಳಿಕೊಂಡಿzರೆ. ಆದರೆ, ಇಲ್ಲೊಬ್ಬರು ಚಿತ್ರ ಕಲಾವಿದೆ ಇಡೀ ಗ್ಯಾಲರಿಯ ಗೋಡೆಗಳಲ್ಲಿ ತುಂಬಾ ಅಮ್ಮನ ನಿತ್ಯದ ಬದುಕು, ಬವಣೆ ಹಾಗೂ ನಿರ್ವಹಿಸುವ ಜವಾಬ್ದಾರಿಗಳನ್ನು ಚಿತ್ರಿಸಿದ್ದಾರೆ.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕಿರುರಂಗಮಂದಿರದ ಕಲಾಗ್ಯಾಲರಿಯಲ್ಲಿ ಮೈಸೂರಿನ ಕಾವಾದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅಭಿರಾಮಿ ರಾಜೇಂದ್ರ ಅವರು ‘ಕ್ರಿಯೇಟರ್’ ಎಂಬ ಪರಿಕಲ್ಪನೆಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿ ಸಿದ್ದು, ಗ್ಯಾಲರಿಯ ಗೋಡೆಗಳ ಮೇಲೆ ಕುಟುಂಬದಲ್ಲಿ ಅಮ್ಮ ನಿರ್ವಹಿಸುವ ಜವಾಬ್ದಾರಿಗಳನ್ನು ನೈಜವಾಗಿ ಚಿತ್ರಿಸಿದ್ದಾರೆ.
ಮುಂಜಾನೆಯಿಂದ ರಾತ್ರಿವರೆಗೂ ಮನೆಯ ಕೆಲಸಗಳೆಲ್ಲವನ್ನೂ ಮಾಡುವ ಅಮ್ಮನ ಸುಮಾರು ೩೦ಕ್ಕೂ ಹೆಚ್ಚು ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಬೆಳಿಗ್ಗೆ ಎದ್ದು ಒಲೆ ಮುಂದೆ ನಿಲ್ಲುವ ಅಮ್ಮ, ಬಟ್ಟೆ ಒಗೆದು ಒಣಗಿಸುವುದು, ಮನೆ ಸ್ವಚ್ಛ ಮಾಡುವುದು, ನೀರು ತುಂಬುವುದು, ತೋಟಕ್ಕೆ ನೀರು ಹಾಯಿಸುವುದು, ಅಡುಗೆ ಮಾಡುವುದು ಹೀಗೆ ನಿತ್ಯವೂ ಸಾಲು ಸಾಲು ಕೆಲಸಗಳನ್ನು ಮಾಡುವ ಚಿತ್ರಗಳನ್ನು ಬಿಡಿಸಿ ಅಮ್ಮನ ಕಾಯಕಕ್ಕೆ ಜೀವ ತುಂಬಿದ್ದಾರೆ.
ಮೂಲತಃ ಕೇರಳದ ಕೊಟ್ಟಾಯಂನ ಕಲಾವಿದೆ ಅಭಿರಾಮಿ ಅವರು ರಾಜೇಂದ್ರ-ಬಿಂದು ದಂಪತಿಯ ಮುದ್ದಿನ ಮಗಳು. ಈಕೆಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವ ಹವ್ಯಾಸ. ಅಕ್ಷರಕಲಿಯುವು ದಕ್ಕಿಂತ ನೋಟ್ ಪುಸ್ತಕದಲ್ಲಿ ಚಿತ್ರ ಬಿಡಿಸಿದ್ದೇ ಹೆಚ್ಚು. ಪಿಯುಸಿ ಮುಗಿದಾಗ ಚಿತ್ರಕಲೆಯ ಮುಂದುವರಿಯಬೇಕು ಎನಿಸಿ ದಾಗ ಮೈಸೂರಿನ ಕಾವಾಗೆ ಬಂದರು. ಈ ಬಾರಿ ಬಹು ರೂಪಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಸಿಕ್ಕ ಅವಕಾಶದಲ್ಲಿ ಕುಟುಂಬದ ನಿರ್ವಹಣೆಯಲ್ಲಿ ಅಮ್ಮನ ಜವಾಬ್ದಾರಿ, ಸಂಕಷ್ಟ, ಸಂತೋಷ, ನೋವು, ನಲಿವುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
” ಅಮ್ಮ ಮದುವೆಗೂ ಮುಂಚೆ ಅಥ್ಲ್ಲೀಟ್ ಆಗಿದ್ದರು. ನಂತರ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಮದುವೆಯಾಗಿ ಮಕ್ಕಳಾದ ಮೇಲೆ ತನ್ನೆಲ್ಲ ಕನಸುಗಳನ್ನು ಬದಿಗಿಟ್ಟು ಸಂಸಾರದ ಜವಾಬ್ದಾರಿಯನ್ನುನಿರ್ವಹಿಸಿದ್ದಾರೆ. ಮನೆಯಲ್ಲಿರುವ ಮುದ್ದಿನ ನಾಯಿ, ಬೆಕ್ಕುಗಳು ಅಮ್ಮನಿಗೆ ಸಂಗಾತಿಗಳಾಗಿವೆ. ಗಂಡ – ಮಕ್ಕಳಿಗಾಗಿ ಅಮ್ಮ ದೊಡ್ಡ ಜವಾಬ್ದಾರಿ ನಿರ್ವಹಿಸುತ್ತಾರೆ.”
–ಅಭಿರಾಮಿ ರಾಜೇಂದ್ರ, ಚಿತ್ರ ಕಲಾವಿದೆ