Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಶತಮಾನ ದಾಟಿದ ಮಹಾರಾಣಿ ಕಾಲೇಜು ಕಟ್ಟಡ

ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ; ಕಾಲೇಜು- ಹಾಸ್ಟೆಲ್‌ಗೆ ಸ್ಕೈವಾಕ್ ನಿರ್ಮಾಣಕ್ಕೆ ಮನವಿ

ಸಾಲೋಮನ್

ಮೈಸೂರು: ಶೈಕ್ಷಣಿಕವಾಗಿ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಪಡೆಯಬೇಕೆಂಬ ಉದ್ದೇಶದಿಂದ 1917ರಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು ಝಾನ್ಸಿರಾಣಿ ಲಕ್ಷ್ಮೀ ಬಾಯಿ ರಸ್ತೆಯಲ್ಲಿ ಆರಂಭಿಸಿದ ಮೈಸೂರು ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜಿಗೆ ಈಗ 107ನೇ ವಸಂತದ ಸಂಭ್ರಮ. ಈ ಕಾಲೇಜು ಆರಂಭವಾದ ಹಲವು ವರ್ಷಗಳ ನಂತರ ಕಾಲೇಜಿನ ಎದುರುಗಡೆ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿನಿಲಯವನ್ನೂ ಆರಂಭಿಸಲಾಯಿತು. ನೂರು ವರ್ಷಗಳನ್ನು ದಾಟಿರುವ ಕಾಲೇಜು ಹಾಗೂ ಸುಮಾರು 60 ವರ್ಷಗಳಾಗಿರುವ ವಿದ್ಯಾರ್ಥಿನಿಲಯ ಕಟ್ಟಡಗಳು ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಶಿಥಿಲಗೊಂಡಿದ್ದು, ಕೆಲ ವರ್ಷಗಳ ಹಿಂದೆ ವಿಜ್ಞಾನ ಕಾಲೇಜಿನ ಕಟ್ಟಡದ ಒಂದು ಭಾಗ ಕುಸಿದಿತ್ತು, ಹಾಸ್ಟೆಲ್ ಕಟ್ಟಡವೂ ಶಿಥಿಲಗೊಂಡು ಆತಂಕ ಉಂಟು ಮಾಡಿತ್ತು.

ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ನಾಯಕತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಮಹಾರಾಣಿ ವಿಜ್ಞಾನ ಕಾಲೇಜು ಹಾಗೂ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಲಯ, ಎರಡು ನೂತನ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದೆ.

ಈಗಾಗಲೇ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡಗಳು ಹೇಗಿರುತ್ತವೆ ಎಂಬುದರ ಬಗ್ಗೆ ತಿಳಿಸಲಾಗಿದೆ. ಅತ್ಯಾಧುನಿಕ ಸೌಕರ್ಯ, ವ್ಯವಸ್ಥೆಗಳನ್ನೊಳಗೊಂಡ ಐದು ಅಂತಸ್ತಿನ ಹಾಸ್ಟೆಲ್ ಕಟ್ಟಡ ಹಾಗೂ ಸುಸಜ್ಜಿತ ಕಾಲೇಜು ಕಟ್ಟಡವನ್ನು ನಿರ್ಮಿಸಲು ಸರ್ಕಾರ ಈಗಾಗಲೇ ಡಿಪಿಆರ್ ಮಾಡಿ ಹಣ ಬಿಡುಗಡೆ ಮಾಡಿದೆ.

‘ವಾಕ್’ ನಿರ್ಮಾಣಕ್ಕೆ ಪ್ರಸ್ತಾವನೆ:
ಈಗಾಗಲೇ ಮಹಾರಾಣಿ ವಿಜ್ಞಾನ ಕಾಲೇಜು ಹಾಗೂ ಹಾಸ್ಟೆಲ್ ಹೇಗಿರುತ್ತದೆ ಎಂಬ ನಕ್ಷೆ ಸೇರಿದಂತೆ ಯೋಜನೆಯು ಸಿದ್ಧವಾಗಿದೆ. ಆನಂತರದಲ್ಲಿ ಮತ್ತಿನ್ನೇನು ಸವಲತ್ತುಗಳ ಅಗತ್ಯ ಇದೆ ಎನ್ನುವ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಹಾರಾಣಿ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಪ್ರೊ, ಅಬ್ದುಲ್ ರಹೀಮಾನ್‌ ಅವರು ಕಾಲೇಜು ಹಾಗೂ ಹಾಸ್ಟೆಲ್ ನಡುವೆ ಹೆಚ್ಚು ದಾಹನದಟ್ಟಣೆ ಇರುವ ಕಾರಣ ಇವೆರಡರ ನಡುವೆ ‘ವಾಕ್’ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಶಾಸಕ ಹರೀಶ್ ಗೌಡ ಅವರೊಂದಿಗೆ ಚರ್ಚಿಸಿದ್ದಾರೆ. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಹೋಗಿದೆ ಎನ್ನಲಾಗಿದೆ.

ಆಯುಕ್ತರಿಂದ ಸ್ಥಳ ಪರಿಶೀಲನೆ:
ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ವಿದ್ಯಾರ್ಥಿನಿಲಯ ಕಟ್ಟಡಗಳ ಶಂಕುಸ್ಥಾವನೆ ನಡೆದ ಎರಡೇ ದಿನಗಳಲ್ಲಿ ಮಹಾನಗರ ಪಾಲಿಕೆ ಆಯುಕ್ತ ಆಶಾದ್ ಉ‌ರ್ ರೆಹಮಾನ್ ಶರೀಫ್ ಅವರು ಇಂಜಿನಿಯರುಗಳು, ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ “ಸ್ಕೈ ವಾಕ್’ ಹೇಗಿರುತ್ತದೆ? ಅದರ ಉದ್ದ ಅಗಲ ಎತ್ತರ ಎಷ್ಟು? ನಿರ್ಮಾಣಕ್ಕೆ ತಗಲುವ ವೆಚ್ಚ ಸೇರಿದಂತೆ ಡಿಪಿಆರ್ ಸಿದ್ಧವಾಗಬೇಕಿದೆ. ಈ ನಿಟ್ಟಿನಲ್ಲಿ ಇನ್ನೂ ಅನೇಕ ಸಭೆಗಳನ್ನು ನಡೆಸುವ ಅಗತ್ಯವೂ ಇದೆ ಎಂಬುದಾಗಿ ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುವಾಲ ಪ್ರೊ.ಎಂ.ಅಬ್ದುಲ್ ರಹೀಮಾನ್ ಹೇಳುತ್ತಾರೆ.‌

ಸ್ಕೈವಾಕ್ ಸೇತುವೆ ನಿರ್ಮಾಣಕ್ಕೆ ಮನವಿ:
ಹಾಸ್ಟೆಲ್‌ನಿಂದ ಪಾಲೇಜಿಗೆ ಬರುವಾಗ ಅಥವಾ ಹೋಗುವಾಗ ವಿದ್ಯಾರ್ಥಿನಿಯರು, ಪೋಷಕರು ವಾಹನಗಳ ಭರಾಟೆಯ ನಡುವೆ ರಸ್ತೆಯನ್ನು ದಾಟುವುದಲ್ಲಿ ಬಹಳ ಕಷ್ಟವಾಗುತ್ತಿದೆ. ಇಷ್ಟು ದೊಡ್ಡ ಮಟ್ಟದ ಕಾಮಗಾರಿ ನಡೆಯುವಾಗಲೇ ಅಗತ್ಯವಿರುವ ಸ್ಕೈವಾಕ್’ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದ್ದೇನೆ.
-ಪ್ರೊ.ಎಂ.ಅಬ್ದುಲ್ ರಹೀಮಾನ್, ಪ್ರಾಂಶುಪಾಲರು, ಮಹಾರಾಣಿ ವಿಜ್ಞಾನ ಕಾಲೇಜು

ಅತ್ಯಾಧುನಿಕ ಲಿಫ್ಟ್ ಸೌಕರ್ಯ:
ಅತ್ಯಾಧುನಿಕ ಲಿಫ್ಟ್ ಸೌಕರ್ಯವನ್ನೂ ಒಳಗೊಳ್ಳಲಿರುವ ಕಾಲೇಜು ಕಟ್ಟಡದಲ್ಲಿ 60 ವಿದ್ಯಾರ್ಥಿಗಳು ಕೂರಬಹುದಾದ 20 ಕೊಠಡಿಗಳು, ಪ್ರಯೋಗಾಲಯ, ಸೆಮಿನಾರ್ ಹಾಲ್ ವಿವಿಧೋದ್ದೇಶ ಕೊಠಡಿ, ಹೈಟೆಕ್ ಶೌಚಾಲಯ ನಿರ್ಮಾಣವಾಗಲಿದೆ.‌

 

Tags: