ನವೀನ್ ಡಿಸೋಜ
ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ
ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩ ಮಳೆ ಕೊರತೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಲ್ಲಿ ಧಾರಾಕಾರ ಮಳೆಯಾಗಿದ್ದರೂ ವಾಡಿಕೆ ಮಳೆ ತಲುಪಿಲ್ಲ. ಜಿಲ್ಲೆಯಲ್ಲಿ ಶೇ.೩೭ರಷ್ಟು ಮಳೆ ಕೊರತೆ ಕಂಡುಬಂದಿದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಶೇ.೪೩ರಷ್ಟು ಮಳೆ ಕೊರತೆ ಕಂಡು ಬಂದಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪ್ರಕಟಿಸಿರುವ ಆ.೪ರವರೆಗಿನ ಮಳೆ ಅಂಕಿ-ಅಂಶಗಳ ಪ್ರಕಾರ, ಜ.೧ರಿಂದ ಆ.೪ರವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟಾರೆ ಶೇ.೩೭ರಷ್ಟು ಮಳೆ ಕೊರತೆ ದಾಖಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ೧,೭೪೪.೯ ಮಿ.ಮೀ. ಮಳೆಯಾಗಬೇಕಿತ್ತು. ಆದರೆ ೧,೦೯೩.೧ ಮಿ.ಮೀ. ಮಾತ್ರ ಮಳೆಯಾಗಿದೆ.
ಜಿಲ್ಲೆಯ ಎಲ್ಲ ಐದು ತಾಲ್ಲೂಕುಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩ರಷ್ಟು ಮಳೆ ಕೊರತೆ ದಾಖಲಾಗಿದೆ. ತಾಲ್ಲೂಕಿನಲ್ಲಿ ವಾಡಿಕೆ ೧,೬೧೯.೫ ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ ೯೧೭.೦ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ೨,೦೨೯.೯ ಮಿ.ಮೀ. ವಾಡಿಕೆ ಮಳೆಯ ಬದಲು ೧,೪೧೫.೦ ಮಿ.ಮೀ. ಮಳೆಯಾಗಿ, ಶೇ.೩೦ರಷ್ಟು ಮಳೆ ಕೊರತೆ ದಾಖಲಾಗಿದೆ.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ೧,೫೧೬.೭ ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ೧,೦೪೫.೯ ಮಿ.ಮೀ. ಮಳೆಯಾಗಿ ಶೇ.೩೧ರಷ್ಟು ಮಳೆ ಕೊರತೆ ಕಂಡುಬಂದಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ೧,೨೫೯.೯ ಮಿ.ಮೀ. ಸಾಮಾನ್ಯ ಮಳೆಯಾಗ ಬೇಕಾಗಿತ್ತು. ಆದರೆ ೯೨೫.೩ ಮಿ.ಮೀ. ಮಳೆಯಾಗಿ ಶೇ.೨೭ರಷ್ಟು ಮಳೆ ಕೊರತೆ ದಾಖಲಾಗಿದೆ. ಕುಶಾಲನಗರ ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಅಧಿಕ ಮಳೆಯಾಗಿದ್ದರೂ, ವರ್ಷದ ಒಟ್ಟಾರೆ ಲೆಕ್ಕದಲ್ಲಿ ೫೫೪.೮ ಮಿ.ಮೀ. ವಾಡಿಕೆ ಮಳೆಯ ಬದಲು ೪೮೨.೯ ಮಿ.ಮೀ. ಮಳೆಯಾಗಿ ಶೇ.೧೩ರಷ್ಟು ಮಳೆ ಕೊರತೆ ದಾಖಲಾಗಿದೆ.
ಇದೇ ವೇಳೆ, ಜೂನ್ ೧ರಿಂದ ಆಗಸ್ಟ್ ೪ರವರೆಗಿನ ನೈಋತ್ಯ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.೩೬ರಷ್ಟು ಮಳೆ ಕೊರತೆ ದಾಖಲಾಗಿದ್ದು, ಸಾಮಾನ್ಯ ೧,೪೯೨.೧ ಮಿ.ಮೀ. ಮಳೆಯ ಬದಲಿಗೆ ೯೫೭.೦ ಮಿ.ಮೀ. ಮಳೆಯಾಗಿದೆ. ಜುಲೈ ತಿಂಗಳಲ್ಲಿಯೂ ಜಿಲ್ಲೆಯಲ್ಲಿ ಶೇ.೩೦ರಷ್ಟು ಮಳೆ ಕೊರತೆ ದಾಖಲಾಗಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದಲ್ಲಿ ಕೆಲ ದಿನ ಉತ್ತಮ ಮಳೆಯಾದರೂ, ವರ್ಷದ ಆರಂಭದಲ್ಲಿ ಮಳೆ ಕೊರತೆಯಾಗಿದ್ದ ಕಾರಣ ಒಟ್ಟಾರೆ ಮಳೆ ಪ್ರಮಾಣ ಇನ್ನೂ ವಾಡಿಕೆ ಮಟ್ಟ ತಲುಪಿಲ್ಲ. ಇದರಿಂದ ಕಾಫಿ, ಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಿಲ್ಲೆಯ ಒಟ್ಟಾರೆ ಮಳೆ ಕೊರತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜುಲೈನಲ್ಲಿ ಕುಶಾಲನಗರದಲ್ಲಿ ಶೇ.೫ರಷ್ಟು ಅಧಿಕ ಮಳೆ: ಜುಲೈ ತಿಂಗಳಲ್ಲಿ ಕುಶಾಲನಗರ ತಾಲ್ಲೂಕಿನಲ್ಲಿ ಶೇ.೫ರಷ್ಟು ಅಧಿಕ ಮಳೆ ದಾಖಲಾಗಿದೆ. ಜುಲೈನಲ್ಲಿ ಕೊಡಗು ಜಿಲ್ಲೆಯಲ್ಲಿ ವಾಡಿಕೆ ೮೫೯.೩ ಮಿ.ಮೀ. ಮಳೆಯಾಗಬೇಕಿದ್ದರೆ ೫೯೯.೪ ಮಿ.ಮೀ. ಮಾತ್ರ ಮಳೆಯಾಗಿ ಒಟ್ಟಾರೆ ಶೇ.೩೦ರಷ್ಟು ಮಳೆ ಕೊರತೆ ದಾಖಲಾಗಿದೆ. ತಾಲ್ಲೂಕುವಾರು ಪರಿಶೀಲಿಸಿದರೆ, ವಿರಾಜಪೇಟೆಯಲ್ಲಿ ಶೇ.೩೯ರಷ್ಟು ಮಳೆ ಕೊರತೆ ದಾಖಲಾಗಿದ್ದು, ಇದು ಜಿಲ್ಲೆಯಲ್ಲೇ ಅತಿ ಹೆಚ್ಚು. ಮಡಿಕೇರಿಯಲ್ಲಿ ಶೇ.೩೦, ಸೋಮವಾರಪೇಟೆಯಲ್ಲಿ ಶೇ.೧೮ ಹಾಗೂ ಪೊನ್ನಂಪೇಟೆಯಲ್ಲಿ ಶೇ.೬ರಷ್ಟು ಮಳೆ ಕೊರತೆ ಕಂಡುಬಂದಿದೆ. ಆದರೆ ಕುಶಾಲನಗರ ತಾಲ್ಲೂಕಿನಲ್ಲಿ ವಾಡಿಕೆ ೨೦೮.೩ ಮಿ.ಮೀ. ಮಳೆಯ ಬದಲು ೨೧೮.೬ ಮಿ.ಮೀ. ಮಳೆಯಾಗಿ, ಶೇ.೫ರಷ್ಟು ಅಧಿಕ ಮಳೆ ದಾಖಲಾಗಿದೆ.
” ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಶೇ.೩೭ ರಷ್ಟು ಮಳೆಯ ಕೊರತೆ ಇದೆ. ಜಿಲ್ಲೆಯ ಶಾಂತಳ್ಳಿ, ಕುಶಾಲನಗರ, ಹುದಿಕೇರಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಕೊರತೆ ಇದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ ೮೫೯ ಮಿ.ಮೀ. ಆಗಿದ್ದು, ಇದರಲ್ಲಿ ೫೯೯ ಮಿ.ಮೀ. ಮಳೆ ಮಾತ್ರ ಈ ಬಾರಿ ಆಗಿದೆ.”
-ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ




