Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ೩೧೪ ಹುದ್ದೆ ಖಾಲಿ

314 posts vacant in the district's local bodies

ಪುನೀತ್ ಮಡಿಕೇರಿ

ಕೇವಲ ೧೪೬ ಹುದ್ದೆಗಳಷ್ಟೇ ಭರ್ತಿ; ಇರುವ ಅಧಿಕಾರಿ, ಸಿಬ್ಬಂದಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ

ಮಡಿಕೇರಿ: ಕೊಡಗು ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಒಟ್ಟು ೩೧೪ ಹುದ್ದೆಗಳು ಖಾಲಿ ಇವೆ. ಕೊಡಗು ಜಿಲ್ಲೆಯಲ್ಲಿ ೫ ನಗರ ಸ್ಥಳೀಯ ಸಂಸ್ಥೆಗಳು ಇವೆ. ಮಡಿಕೇರಿ ನಗರಸಭೆ, ಕುಶಾಲನಗರ ಮತ್ತು ವಿರಾಜ ಪೇಟೆಯಲ್ಲಿ ಪುರಸಭೆ, ಸೋಮವಾರಪೇಟೆ ಹಾಗೂ ಪೊನ್ನಂಪೇಟೆಯಲ್ಲಿ ಪಟ್ಟಣ ಪಂಚಾಯಿತಿಗಳಿವೆ. ಇವುಗಳಿಗೆ ಸರ್ಕಾರ ಒಟ್ಟು ೪೫೯ ಹುದ್ದೆಗಳನ್ನು ಮಂಜೂರು ಮಾಡಿದೆ. ಆದರೆ, ಸರ್ಕಾರ ಭರ್ತಿ ಮಾಡದೇ ಬರೋಬರಿ ೩೧೪ ಹುದ್ದೆಗಳನ್ನು ಖಾಲಿ ಉಳಿಸಿ ಕೊಂಡಿದೆ. ಕೇವಲ ೧೪೬ ಹುದ್ದೆಗಳನ್ನಷ್ಟೇ ಭರ್ತಿ ಮಾಡಿದೆ. ಹೀಗಾಗಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾಲಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಕ್ಕೆ ಸ್ಥಳೀಯ ಸಂಸ್ಥೆಗಳು ಎಡತಾಕುತ್ತಿವೆ.

ಮುಖ್ಯವಾಗಿ, ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿಯಲ್ಲಿ ಕೇವಲ ಒಬ್ಬರಷ್ಟೇ ಕಾರ್ಯನಿರ್ವಹಿಸುತ್ತಿದ್ದು, ೩೬ ಹುದ್ದೆಗಳನ್ನು ಸರ್ಕಾರ ಖಾಲಿ ಉಳಿಸಿಕೊಂಡಿದೆ. ಸದ್ಯ, ಗ್ರಾಮ ಪಂಚಾಯಿತಿಯಿಂದ ೧೫ ಸಿಬ್ಬಂದಿಯನ್ನು ನೇರ ಪಾವತಿ ಮೂಲಕ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಮಡಿಕೇರಿಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾ ಗಿದೆ. ಆದರೆ, ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಸಾಕಾಗುವಷ್ಟು ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಿಲ್ಲ. ಒಟ್ಟು ಮಂಜೂರಾದ ೧೮೬ ಹುದ್ದೆಗಳ ಪೈಕಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ ೫೭ ಮಾತ್ರ. ಉಳಿದಂತೆ, ೧೩೦ ಹುದ್ದೆಗಳು ಖಾಲಿ ಉಳಿದಿವೆ. ಇಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ೫೬, ನೇರಪಾವತಿಯಡಿ ೧೩ ಹಾಗೂ ಕ್ಷೇಮಾಭಿವೃದ್ಧಿಯಡಿ ಐವರನ್ನು ತೆಗೆದುಕೊಂಡಿರುವುದರಿಂದ ನಗರಸಭೆ ಹೇಗೋ ಕಾರ್ಯನಿರ್ವಹಿಸುತ್ತಿದೆ.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೊಡಗಿನ ಪ್ರಮುಖ ಪಟ್ಟಣ ಕುಶಾಲನಗರ. ಆದರೆ, ಪಟ್ಟಣದ ಸ್ಥಳೀಯ ಸಂಸ್ಥೆಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿಯೂ ಕೂಡ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ.ಇಲ್ಲಿ ಮಂಜೂರಾಗಿರುವ ೧೦೪ ಹುದ್ದೆಗಳಿಗೆ ಕೆಲಸ ಮಾಡುತ್ತಿರುವವರು ಕೇವಲ ೩೩ ಸಿಬ್ಬಂದಿ ಮಾತ್ರ. ಒಟ್ಟು ೭೧ ಹುದ್ದೆಗಳು ಖಾಲಿ ಇವೆ. ಈ ಖಾಲಿ ಹುದ್ದೆಗಳಿಗೆ ಬದಲಾಗಿ ಹೊರಗುತ್ತಿಗೆಯಡಿ ೩೭ ಮತ್ತು ಕ್ಷೇಮಾಭಿವೃದ್ಧಿಯಡಿ ಕೇವಲ ಒಬ್ಬರನ್ನು ಮಾತ್ರವೇ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಇನ್ನು ಸೋಮವಾರಪೇಟೆ, ವಿರಾಜಪೇಟೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಶೇ.೫೦ಕ್ಕೂ ಅಽಕ ಖಾಲಿ ಹುದ್ದೆಗಳು ಈ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿವೆ. ಹೊರಗುತ್ತಿಗೆ, ನೇರ ಪಾವತಿ, ಕ್ಷೇಮಾಭಿವೃದ್ಧಿಯಡಿ ತೆಗೆದುಕೊಂಡ ನೌಕರರಿಗೆ ಜವಾಬ್ದಾರಿಯುತ ಕೆಲಸಗಳನ್ನು ನೀಡಲಾಗದು. ಕೆಲವೊಂದು ಹುದ್ದೆಗಳಿಗೆ ಹೊರಗುತ್ತಿಗೆಯಡಿ ತೆಗೆದುಕೊಳ್ಳಲು ಅವಕಾಶವೇ ಇಲ್ಲ. ಅಂತಹ ೬೩ ಹುದ್ದೆಗಳು ಖಾಲಿ ಇವೆ.

ಬೇಕಾದ ಸಿಬ್ಬಂದಿಯೇ ಇಲ್ಲ: ಜಿಲ್ಲೆಯಲ್ಲಿರುವ ಎಲ್ಲ ೫ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಾಗಿ ಬೇಕಾದ ಹಾಗೂ ಹೊರಗುತ್ತಿಗೆಯಡಿ ತೆಗೆದುಕೊಳ್ಳಲು ಆಗದ ಸಿಬ್ಬಂದಿ ಮತ್ತು ಅಧಿಕಾರಿಗಳ ಹುದ್ದೆಗಳೂ ಸಾಕಷ್ಟು ಪ್ರಮಾಣದಲ್ಲಿ ಖಾಲಿಇವೆ. ಇಂತಹ ೮೬ ಹುದ್ದೆಗಳ ಪೈಕಿ ೬೩ ಹುದ್ದೆಗಳು ಖಾಲಿ ಇದ್ದರೆ, ಕಾರ್ಯನಿರ್ವಹಿಸುತ್ತಿರುವವರು ಕೇವಲ ೨೩ ಸಿಬ್ಬಂದಿ ಮಾತ್ರ. ಇಂತಹ ಹುದ್ದೆಗಳಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ೮ ಕಿರಿಯ ಇಂಜಿನಿಯರ್ ಹುದ್ದೆಗಳು ಖಾಲಿ ಇವೆ. ಇಡೀ ಜಿಲ್ಲೆಗೆ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಕೇವಲ ಒಬ್ಬರು ಮಾತ್ರ. ೧೦ ಮಂದಿ ಕರವಸೂಲಿಗಾರರು ಬೇಕಿದ್ದು, ಇರುವವರು ಕೇವಲ ಮೂವರು ಮಾತ್ರ. ಇದೇ ರೀತಿ ಇಡೀ ಜಿಲ್ಲೆಯಲ್ಲಿ ಪ್ರಥಮದರ್ಜೆ ಸಹಾಯಕರು ೮, ಕಿರಿಯ ಆರೋಗ್ಯ ನಿರೀಕ್ಷಕರು ೭, ದ್ವಿತೀಯ ದರ್ಜೆ ಸಹಾಯಕರು ೧೦ ಹುದ್ದೆಗಳು ಖಾಲಿ ಇವೆ.

ಪರಿಸರ ಇಂಜಿನಿಯರ್, ಕಿರಿಯ ಇಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕರು, ಪ್ರಥಮದರ್ಜೆ ಸಹಾಯಕರು, ಸಮುದಾಯ ಸಂಘಟನಾ ಅಧಿಕಾರಿ, ಪ್ರಥಮದರ್ಜೆ ಕಂದಾಯ ನಿರೀಕ್ಷಕರು, ಸಮುದಾಯ ಸಂಘಟಕರು ಇಡೀ ಜಿಲ್ಲೆಗೆ ಕೇವಲ ಒಬ್ಬರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ.

” ಹುದ್ದೆಗಳು ಖಾಲಿ ಇರುವ ಪರಿಣಾಮ ಯಾವುದೇ ಕೆಲಸಗಳು ಆಗುತ್ತಿಲ್ಲ. ದಿನನಿತ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಶಾಸಕರ ಗಮನಕ್ಕೂ ತರಲಾಗಿದೆ. ಸರ್ಕಾರ ಆದಷ್ಟು ಬೇಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.”

-ರವಿಗೌಡ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

” ಖಾಲಿ ಹುದ್ದೆಗಳು ಅತ್ಯಂತ ಹೆಚ್ಚಿರುವುದರಿಂದ ನಾಗರಿಕರಿಗೆ ಸಮಸ್ಯೆಗಳಾಗುತ್ತಿವೆ. ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ತುರ್ತಾಗಿ ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.”

-ಮಹೇಶ್ ಜೈನಿ, ಉಪಾಧ್ಯಕ್ಷರು, ಮಡಿಕೇರಿ ನಗರಸಭೆ

Tags:
error: Content is protected !!