Mysore
25
overcast clouds

Social Media

ಭಾನುವಾರ, 02 ಆಗಸ್ಟ್ 2026
Light
Dark

ಮೈಸೂರು | ಮರುಮೌಲ್ಯಮಾಪನ ; ರಾಜ್ಯಕ್ಕೆ 10ನೇ ಸ್ಥಾನ ಪಡೆದ ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ 

ರಾಜ್ಯಕ್ಕೆ 10ನೇ ಸ್ಥಾನ ಪಡೆದ ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ 

ಮೈಸೂರು : ಬಡತನದ ಬೇಗೆಯ ನಡುವೆಯೂ ಸಾಧನೆಯ ಛಲ ಬಿಡದ ಮೈಸೂರಿನ ಮಹಾರಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗುಲ್ಸುಮ್, ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ.

ಈಚೆಗೆ ಪ್ರಕಟವಾದ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ 586 ಅಂಕ ಗಳಿಸಿದ್ದ ಗುಲ್ಸುಮ್, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಬಂದ ಪರಿಷ್ಕೃತ ಫಲಿತಾಂಶದಲ್ಲಿ 5 ಹೆಚ್ಚುವರಿ ಅಂಕ ಸೇರಿ ಒಟ್ಟು 591 ಅಂಕಗಳೊಂದಿಗೆ ರಾಜ್ಯದ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಿಸಿನೆಸ್ ಸ್ಟಡೀಸ್‌ನಲ್ಲಿ ಮೊದಲು 93 ಅಂಕ ಬಂದಿತ್ತು. ಮರು ಮೌಲ್ಯಮಾಪನದ ಬಳಿಕ 98ಕ್ಕೆ ಏರಿಕೆಯಾಗಿದೆ. ಕನ್ನಡ, ಅರ್ಥಶಾಸ್ತ್ರ, ಭೂಗೋಳ, ವಿಜ್ಞಾನ ಮತ್ತು ಅಕೌಂಟೆನ್ಸಿಯಲ್ಲಿ ಶತಕ ಬಾರಿಸಿರುವ ಅವರು, ಇಂಗ್ಲಿಷ್‌ನಲ್ಲಿ 93 ಅಂಕ ಪಡೆದಿದ್ದಾರೆ.

‘ಪರೀಕ್ಷೆ ಚೆನ್ನಾಗಿ ಬರೆದಿದ್ದೆ. ಹೆಚ್ಚು ಅಂಕ ಬರುವ ನಿರೀಕ್ಷೆ ಇತ್ತು. ಅದಕ್ಕೇ ಮರು ಮೌಲ್ಯಮಾಪನಕ್ಕೆ ಹಾಕಿದ್ದೆ. ಈಗ 10ನೇ ರ‍್ಯಾಂಕ್ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ’ ಎಂದು ಗುಲ್ಸುಮ್ ಸಂತಸ ಹಂಚಿಕೊಂಡಿದ್ದರು. ಇದೇ ವೇಳೆ ಕಾಲೇಜಿನ ವತಿಯಿಂದ ಗುಲ್ಸುಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾಲೇಜು ಪ್ರಾಂಶುಪಾಲ ಸೋಮಣ್ಣ ಮಾತನಾಡಿ, ‘ನಮ್ಮ ಕಾಲೇಜಿಗೆ ಪ್ರತಿ ವರ್ಷವೂ ಉತ್ತಮ ಫಲಿತಾಂಶ ಬರುತ್ತಿದೆ. ಇಲ್ಲಿಗೆ ಸೇರುವವರೆಲ್ಲ ಬಡ ಕುಟುಂಬದ ಮಕ್ಕಳು. ಓದುವ ಹಂಬಲ ಇರುವ ಅವರಿಗೆ ನಮ್ಮ ಶಿಕ್ಷಕರು ಶ್ರದ್ಧೆಯಿಂದ ಪಾಠ ಮಾಡುತ್ತಾರೆ ಎಂದರು.

ಪ್ರವೇಶಕ್ಕೆ ನೂಕುನುಗ್ಗಲು
ಸದ್ಯ ಕಾಲೇಜಿನಲ್ಲಿ 2026-27ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ದಿನವೂ ನೂರಾರು ವಿದ್ಯಾರ್ಥಿಗಳು ಅರ್ಜಿಗಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಅರ್ಜಿ ವಿತರಿಸಲಾಗಿದ್ದು, ಮೆರಿಟ್ ಆಧಾರದಲ್ಲಿ ಕೇವಲ 1,100ರಿಂದ 1,200 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲ ಸೋಮಣ್ಣ ತಿಳಿಸಿದರು.

Tags:
error: Content is protected !!