ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆದಾಯ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮೂರು ತಿಂಗಳಲ್ಲಿ ಅಂದಾಜು ೨೦ಕೋಟಿ ರೂ. ನಷ್ಟವಾಗಿದೆ.
ಮುಡಾಕ್ಕೆ ಬರುತ್ತಿದ್ದ ಆದಾಯ ನಿಂತು ಹೋಗಿರುವ ಕಾರಣ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಸಂಪನ್ಮೂಲ ಇಲ್ಲದಂತಾಗಿದೆ. ಪ್ರಾಽಕಾರದ ಸಭೆ ನಡೆಯದಿರುವುದರಿಂದ ಪ್ರಾಽಕಾರದಿಂದ ಅನುಮೋದನೆ ಪಡೆದು ಖಾಸಗಿ ಬಡಾವಣೆಗಳನ್ನು ರಚನೆ ಮಾಡಿರುವ ಮಾಲೀಕರ ೨ ಸಾವಿರಕ್ಕೂ ಹೆಚ್ಚು ನಿವೇಶನಗಳ ಬಿಡುಗಡೆಗೆ ಕಡತಗಳು ಕಾದು ಕುಳಿತಿರುವುದು ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಲು ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ವಿಜಯನಗರ ಬಡಾವಣೆಯಲ್ಲಿ ೧೪ ಬದಲಿ ನಿವೇಶನಗಳನ್ನು ಮಂಜೂರು ಮಾಡಿದ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಜುಲೈ ೨ರಂದು ಮುಡಾ ೫೦:೫೦ ನಿವೇಶನ ಹಂಚಿಕೆ ರದ್ದತಿ ಸೇರಿ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು. ಈ ಆದೇಶ ಹೊರ ಬೀಳುತ್ತಿದ್ದಂತೆ ಮುಡಾದ ಹಿಂದಿನ ಸಭೆಯಲ್ಲಿ ಅನುಮೋದನೆಗೊಂಡ ಕಡತಗಳ ವಿಲೇವಾರಿ ಸೇರಿದಂತೆ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಬ್ರೇಕ್ ಬಿದ್ದಿದೆ.
ನಿತ್ಯ ೩೦ ಲಕ್ಷ ರೂ. ನಷ್ಟ: ಮುಡಾ ರಚನೆ ಮಾಡಿದ ಹಂಚ್ಯಾ-ಸಾತಗಳ್ಳಿ ಎ-ವಲಯ, ಬಿ-ವಲಯ, ವಿಜಯನಗರ ನಾಲ್ಕನೇ ಹಂತ ಎರಡನೇ ಘಟ್ಟ, ವಸಂತನಗರ, ಲಾಲ್ ಬಹದ್ದೂರ್ ಶಾಸಿನಗರ, ಶಾಂತವೇರಿ ಗೋಪಾಲಗೌಡ ನಗರ, ದೇವನೂರು ಮೂರನೇ ಹಂತದ ಬಡಾವಣೆಗಳ ಖಾತೆಗಳನ್ನು ಮಾಡಿಕೊಡುತ್ತಿರುವುದನ್ನು ಬಿಟ್ಟರೆ ೧,೫೦೦ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳ ನಿವೇಶನ ಖಾತೆ ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ಖಾಸಗಿ ಬಡಾವಣೆಗಳಿಗೆ ನಿವೇಶನ ಬಿಡುಗಡೆ ಮಾಡಿದ ಮೇಲೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗುತ್ತಿತ್ತು. ನಂತರ, ಮುಡಾದಲ್ಲಿ ಉಪ ನೋಂದಣಾಽಕಾರಿಗಳ ಕಚೇರಿಯಲ್ಲಿ ನೋಂದಣಿಯ ಮೊತ್ತದ ಆಧಾರದಮೇಲೆ ಎಸ್‌ಆರ್ ದರದಂತೆ ೦. ೫ರಷ್ಟು ಮುಡಾಕ್ಕೆ ಖಾತಾ ವರ್ಗಾವಣೆ ಶುಲ್ಕವನ್ನು ಪಾವತಿಸಬೇಕಿದ್ದರಿಂದ ಅಂದಾಜು ೧೫ರಿಂದ ೨೦ ಸಾವಿರ ರೂ. ಸಂಗ್ರಹವಾಗುತ್ತಿತ್ತು. ಪ್ರತಿನಿತ್ಯ ೨೦೦ ನಿವೇಶನಗಳ ಖಾತೆ ಮತ್ತು ವರ್ಗಾವಣೆ ಖಾತೆ ನಡೆಯುತ್ತಿದ್ದರಿಂದ ಮುಡಾಕ್ಕೆ ೩೦ರಿಂದ ೩೫ ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿತ್ತು.
ಈಗ ಖಾಸಗಿ ಬಡಾವಣೆಗಳ ನಿವೇಶನ ಖಾತೆಗಳಿಗೆ ಸಂಪೂರ್ಣ ತಡೆ ಹಾಕಿರುವ ಕಾರಣ ಮುಡಾ ಬಡಾವಣೆಗಳ ಖಾತೆಯ ಆದಾಯ ಅಂದಾಜು ೧ರಿಂದ ೨ ಲಕ್ಷ ರೂ. ಹೊರತುಪಡಿಸಿದರೆ ಬೇರೆ ಯಾವುದೇ ಶುಲ್ಕ ಬಾರದಿರುವುದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ನಗರ ಯೋಜನಾ ಶಾಖೆಗೆ ಬರುತ್ತಿದ್ದ ಆದಾಯದಲ್ಲೂ ಗಣನೀಯವಾಗಿ ಇಳಿದಿದೆ. ಕಟ್ಟಡ ವಿನ್ಯಾಸ ಅನುಮೋದನೆ, ಕಟ್ಟಡ ವಿನ್ಯಾಸ ಅನುಮೋದನೆಯಿಂದ ಬರುತ್ತಿದ್ದ ಶುಲ್ಕದಲ್ಲೂ ಇಳಿಕೆಯಾಗಿರುವುದರಿಂದ ಪ್ರತಿನಿತ್ಯ ಅಂದಾಜು ೫ ಲಕ್ಷ ರೂ. ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ, ಕಟ್ಟಡ ಪೂರ್ಣಗೊಂಡ ಮನೆಗಳಿಗೆ ಸಿಆರ್ ಕೂಡ ನೀಡದ ಕಾರಣ ಮನೆ ಕಂದಾಯದ ಸಂಗ್ರಹಕ್ಕೂ ಕೊಕ್ಕೆ ಬಿದ್ದಿದೆ. ಬಿಡುಗಡೆಗೆ ಕಾದಿರುವ ೨ ಸಾವಿರ ನಿವೇಶನ: ಮುಡಾದಿಂದ ಅನುಮೋದನೆ, ನಕ್ಷೆ ಅನುಮೋದನೆ, ಏಕ ನಿವೇಶನ ವಿನ್ಯಾಸ ಅನುಮೋದನೆ ಪಡೆದಿರುವ ಖಾಸಗಿ ಬಡಾವಣೆಗಳಿಗೆ ಮೊದಲ ಕಂತಿನಲ್ಲಿ ಬಿಡುಗಡೆ ಮಾಡಬೇಕಿರುವ ಅಂದಾಜು ೨ ಸಾವಿರ ನಿವೇಶನಗಳು ಕಡತಗಳು ಕಾದು ಕುಳಿತಿವೆ.
ಖಾಸಗಿ ಬಡಾವಣೆಗಳ ನಿವೇಶನಗಳಿಗೆ ಖಾತೆ ಮಾಡಿಕೊಡುವುದಕ್ಕೆ ಮುಡಾದಲ್ಲಿ ಅವಕಾಶವಿಲ್ಲ. ಸ್ಥಳೀಯ ಸಂಸ್ಥೆಗಳಿಂದ ಖಾತೆ ಆಗಬೇಕಿದೆ. ಈಗಾಗಲೇ ಈ ಬಗ್ಗೆ ಜಿಲ್ಲಾಽಕಾರಿಗಳ ಗಮನಕ್ಕೆ ತರಲಾಗಿದೆ. ನಮಗೆ ಆದಾಯ ಬರಬೇಕೆಂಬ ಕಾರಣಕ್ಕಾಗಿ ನಿಯಮವನ್ನು ಮೀರಿ ಮಾಡಲು ಸಾಧ್ಯವಾಗದು. ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿದ ಮೇಲೆ ಖಾತೆ ಮಾಡಲಾಗುತ್ತದೆ. – ರಘುನಂದನ್, ಆಯುಕ್ತರು,ಮುಡಾ.
ಖಾತೆ ಮಾಡಿಕೊಡದ ಕಾರಣ ನಿವೇಶನ ಖರೀದಿಸಿರುವವರು, ಡೆವಲಪರ್‌ಗಳು, ಸರ್ಕಾರಕ್ಕೂ ನಷ್ಟವಾಗಿದೆ. ನಿವೇಶನಕ್ಕೆ ಮುಂಗಡ ಕಟ್ಟಿರುವ ಜನರು ಖಾತೆ ಮಾಡಿಸಿಕೊಡುವಂತೆ ಡೆವಲಪರ್ ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ನಿವೇಶನಗಳು ನೋಂದಣಿಯಾದರೆ ಸರ್ಕಾರಕ್ಕೆ ಮುಡಾಕ್ಕೆ ಆದಾಯ ಬರುವ ಜತೆಗೆ ನಿವೇಶನ ಖರೀದಿಸಿದವರಿಗೂ ನೆರವಾಗಲಿದೆ. – ಎಸ್. ಎಂ. ಶಿವಪ್ರಕಾಶ್, ರಿಯಲ್ ಎಸ್ಟೇಟ್ ಉದ್ಯಮಿ.