ಹೊಸ ತಲೆಮಾರಿನ ಕರ್ನಾಟಕ ಸಂಗೀತ ಕಲಾವಿದರಲ್ಲಿ ತೀರಾ ವಿಭಿನ್ನ ಕಲಾವಿದ ಟಿ.ಎಂ. ಕೃಷ್ಣ. ಹಣ, ಕೀರ್ತಿ, ಜನಪ್ರಿಯತೆಗೆ ಕೊರತೆಯಿಲ್ಲದಿದ್ದರೂ ಏನೋ ಅತೃಪ್ತಿ. ಜಿಡ್ಡು ಕೃಷ್ಣಮೂರ್ತಿಯವರ ಪ್ರಭಾವಕ್ಕೆ ಒಳಗಾಗಿದ್ದ ಇವರಿಗೆ, ಶ್ರೋತೃಗಳು ಮೆಚ್ಚುವ, ಸುಂದರವಾದದ್ದನ್ನು ಕೊಡುವುದೇ ಕಲಾವಿದನ ಕೆಲಸ ಎಂಬ ವಿಚಾರವೇ ಅಸಹ್ಯಕರ ಅನಿಸಿತು. ಹೀಗಾಗಿ ಕರ್ನಾಟಕ ಸಂಗೀತವನ್ನು ಬೇರೆ ಸಂಗೀತಗಳ ಜೊತೆಯಲ್ಲಿ ವಿಭಿನ್ನ ಕಲಾಪ್ರಕಾರಗಳೊಡನೆ, ವಿಭಿನ್ನ ಸ್ಥಳಗಳಲ್ಲಿ ಪ್ರಸ್ತುತಪಡಿಸುವ, ಸಂವಾದ ನಡೆಸುವ ಕೆಲಸ ಆರಂಭಿಸಿದರು. ಅವರ ಈ ಪ್ರಯೋಗ ನಿರಂತರವಾದದ್ದು.

‘‘ ಅಲ್ಲಿಂದ ನನ್ನ ಒದ್ದಾಟ, ಹುಡುಕಾಟ ಪ್ರಾರಂಭವಾಯ್ತು. ಈ ಸಂಗೀತದ ಮೂಲವನ್ನು ಹುಡುಕಲು ಪ್ರಾರಂಭಿಸಿದೆ. ಇನ್ನೂರು ವರ್ಷಕ್ಕೆ ಹಿಂದಿನ ಶಾಸ್ತ್ರಗ್ರಂಥವೊಂದರ ವಿವರಣೆಗನುಗುಣವಾಗಿ ರಾಗವೊಂದನ್ನು ಹಾಡಿದಾಗ ಅದು ಭಯಂಕರವಾಗಿತ್ತು, ಸುಂದರವಾಗಿರಲಿಲ್ಲ. ಹಾಗಾದರೆ ಸೌಂದರ್ಯ ಎನ್ನುವುದು ದೇಶ-ಕಾಲ-ಸಂಸ್ಕೃತಿ ನಿರ್ದಿಷ್ಟವೇ ಎನ್ನುವ ಪ್ರಶ್ನೆ ಎದುರಾಯಿತು? ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೇ ತಡ ನೂರಾರು ಪ್ರಶ್ನೆಗಳು ಮುತ್ತಿಕೊಂಡವು. ಈಗಿನ ಕರ್ನಾಟಕ ಸಂಗೀತವೂ ನಮ್ಮ ಸಮಕಾಲೀನ ಸೌಂದರ್ಯ ಮೀಮಾಂಸೆಗೆ ತಕ್ಕಂತೆ ಕಟ್ಟಿಕೊಂಡಿರುವುದು ಎಂದರ್ಥವಾಯಿತು. ಸಿನಿಮಾ ಸಂಗೀತ, ಜಾನಪದ ಸಂಗೀತ ಇವುಗಳಿಗಿಂತ ನಮ್ಮ ಕರ್ನಾಟಕ ಸಂಗೀತ ಶ್ರೇಷ್ಠವೆಂಬ ಭಾವನೆಯೂ ನಾವು ಕಟ್ಟಿಕೊಂಡಿರುವುದೇ. ಬೇರೆ ಸಂಗೀತವನ್ನು, ಅದರ ಧ್ವನಿಯನ್ನು ಇಷ್ಟಪಡುತ್ತಿಲ್ಲ ಅಂದರೆ ಅದನ್ನು ನಾವು ಕೇಳಿಸಿಕೊಳ್ಳುತ್ತಿಲ್ಲ ಎಂದರ್ಥ. ನಾವು ಬೇರೆ ಧ್ವನಿಗಳನ್ನು ಕೇಳಿಸಿಕೊಳ್ಳಬೇಕಾಗಿದೆ.’’ ಇದು ಅವರ ಅಂತರಂಗದ ಮಾತು.
ಹೀಗೆ ಬೇರೆ ದನಿಗಳನ್ನು ಸಂಗೀತದಲ್ಲಷ್ಟೇ ಅಲ್ಲ ಉಳಿದ ವಿಷಯಗಳಲ್ಲಿಯೂ ಕೇಳಿಸಿಕೊಳ್ಳಬೇಕು ಎಂಬ ಅರಿವು ಅವರಲ್ಲಿ ಮೂಡಿತು. ‘‘ನಮ್ಮ ದನಿಯನ್ನು ಉಳಿದವರ ಮೇಲೆ ಹೇರುವುದನ್ನು ನಿಲ್ಲಿಸಿ, ಅಂಚಿನಲ್ಲಿ ಉಳಿದುಬಿಟ್ಟಿರುವವರ ಜೊತೆ ಸಮಾನ ನೆಲೆಯಲ್ಲಿ ಸಂಭಾಷಣೆ ಸಾಧ್ಯವಾಗಬೇಕು. ಇದಕ್ಕೆ ದಾರಿ ಕಂಡುಕೊಳ್ಳಬೇಕು. ಇದರಿಂದ ನಾವು ಇನ್ನಷ್ಟು ಸೂಕ್ಷ್ಮಸಂವೇದಿಗಳಾಗುತ್ತೇವೆ. ಕರ್ನಾಟಕ ಸಂಗೀತದ ಶ್ರೇಷ್ಠತೆಯನ್ನು ಬೇರೆ ದನಿಗಳು ನಿರಾಕರಿಸಿದರೆ ಅದನ್ನು ನಾವು ಸ್ವೀಕರಿಸಬೇಕು. ಏಕೆಂದರೆ ಉಳಿದವರಿಗೆ ನಿರಾಕರಿಸುವ ಹಕ್ಕು ಇರಬೇಕು. ನಾವು ನಮ್ಮ ನೆಮ್ಮದಿಯ ನೆಲೆಯಿಂದ ಆಚೆ ಬಂದು ನೋಡುವುದನ್ನೂಕಲಿಯಬೇಕು. ಇವೆಲ್ಲಾ ಏಕಕಾಲಕ್ಕೆ ಈಸ್ತಟೆಕ್, ರಾಜಕೀಯ ಹಾಗೆೆುೀಂ ಸಾಮಾಜಿಕ ಪ್ರಶ್ನೆಗಳೂ ಆಗಿವೆ.’’
ಆಗ ಕೃಷ್ಣ ಕಲಾಮೀಮಾಂಸೆ ಎನ್ನುವುದು ಎಲ್ಲರಿಗೂ ಒಂದೆಯೇ ಅಥವಾ ಬೇರೆ ಬೇರೆಯೇ ಎಂಬ ಪ್ರಶ್ನೆಯ ಹಿಂದೆ ಹೋದರು. ಆಗ ಕೃಷ್ಣ ಕೂತ್ತು (ಕೂತ್ತು ಮುಖ್ಯವಾಗಿ ದಲಿತರ ಕಲೆ), ಕೊಡಿಯಾಟ್ಟಂ, ಪರೈಯಾಟ್ಟಂ ಕಲಾವಿದರ ಜೊತೆ, ಜೋಗತಿಯರ ಜೊತೆ ಪ್ರೋಂಗಗಳನ್ನು ಪ್ರಾರಂಭಿಸಿದರು. ಕೂತ್ತು ಸಂಗೀತಕ್ಕೆ ಹಿನ್ನೆಲೆಯಾಗಿ ಕರ್ನಾಟಕ ಸಂಗೀತವನ್ನು ಹಾಡಿದರು. ಕರ್ನಾಟಕ ಸಂಗೀತವನ್ನು ಮೀನುಗಾರರ ಕಾಲೋನಿಯಲ್ಲಿ, ಚಲಿಸುವ ಬಸ್ಸಿನಲ್ಲಿ, ಮುನಿಸಿಪಲ್ ಶಾಲೆಗಳಲ್ಲಿ ಬೇರೆ ಸಂಗೀತಗಳ ಜೊತೆಯಲ್ಲಿ ಪ್ರಸ್ತುತಪಡಿಸುವ ಪ್ರೋಂಗಕ್ಕೆ ಕೈ ಹಾಕಿದರು. ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಕಲಾಪ್ರಕಾರಗಳೊಡನೆ ಸಂವಾದ ನಡೆಸಿದರು.
ಈ ಪ್ರೋಂಗ ಅವರ ಕಲಾ ಮೀಮಾಂಸೆಯ ಗ್ರಹಿಕೆಯನ್ನೇ ಬದಲಾಯಿಸಿತು. ‘‘ನಾವು ಕಲಾ ಮೀಮಾಂಸೆ ಅಂದರೆ ಸುಂದರವಾದದ್ದು ಅಂತ ಭಾವಿಸಿಕೊಂಡಿದ್ದೇವೆ. ವಾಸ್ತವವಾಗಿ ಅದೊಂದು ವ್ಯವಸ್ಥೆ. ಅದಕ್ಕೊಂದು ಉದ್ದೇಶವಿದೆ. ಈ ಉದ್ದೇಶ ಕಲಾ ಮೀಮಾಂಸೆಯನ್ನು ನಿರ್ಧರಿಸುತ್ತದೆ. ಸಮಾಜ ಹಾಗೂ ಸಂದರ್ಭಬದಲಾದಾಗ ಕಲಾಮೀಮಾಂಸೆಯೂ ಬದಲಾಗುತ್ತದೆ. ಈ ಕಲಾ ಮೀಮಾಂಸೆ ಸಮಾಜವನ್ನೂ ಪ್ರಭಾವಿಸುತ್ತದೆ.ದುರಂತವೆಂದರೆ ನಮ್ಮ ಸಾಮಾಜಿಕ, ರಾಜಕೀಯ ಚರ್ಚೆಯಲ್ಲಿ ಕಲಾ ಮೀಮಾಂಸೆಯನ್ನುಚರ್ಚಿಸುವುದೇ ಇಲ್ಲ. ತಾರತಮ್ಯದ ಬಗ್ಗೆ ಮಾತನಾಡುವಾಗ ಕಲಾ ಮೀಮಾಂಸೆಯ ಬಗ್ಗೆಯೂ ಮಾತನಾಡಿದಾಗ ಮಾತ್ರ ನಾವು ಸೃಷ್ಟಿಸಿರುವ ವಿಕೃತಿಗಳ ಅರಿವಾಗುತ್ತದೆ. ನಮ್ಮ ಸಾಮಾಜಿಕ ಸ್ಥಾನಮಾನ ನಮ್ಮ ಸೌಂದರ್ಯದ ಪರಿಕಲ್ಪನೆಯನ್ನು ನಿರ್ಧರಿಸುತ್ತಿರುತ್ತದೆ. ನಮಗೆ ಉಭಯಲಿಂಗಿ ಸುಂದರವಾಗಿ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಮನಃಸ್ಥಿತಿ ನಮ್ಮನ್ನು ವಿಭಜಿಸುತ್ತಾ ಹೋಗುತ್ತದೆ.
‘‘ಇಂತಹ ಹುಡುಕಾಟಗಳು ಸಂಗೀತ ಮತ್ತು ಕಲಾಮೀಮಾಂಸೆ ಕುರಿತು ಸದರ್ನ್ ಮ್ಯೂಸಿಕ್ ಎ ಕರ್ನಾಟಿಕ್ ಸ್ಟೋರಿ, ರಿಶೇಪಿಂಗ್ ಆರ್ಟ್ ಮುಂತಾದ ವಿಭಿನ್ನ ಬಗೆಯ ಕೃತಿಗಳ ರಚನೆಗೆ ಅವರನ್ನು ಪ್ರಚೋದಿಸಿದವು. ಈ ಪ್ರಕ್ರಿೆುಂ ಕಲೆಗೂ ಜಾತಿ ತಾರತಮ್ಯಕ್ಕೂ ಇರುವ ಸಂಕೀರ್ಣ ಸಂಬಂಧವನ್ನು ಶೋಧಿಸುವುದಕ್ಕೆ ಅವರನ್ನು ಪ್ರೇರೇಪಿಸಿದವು. ಕಲೆಯ ಮೂಲಕವೇ ಕಲೆ, ಸೃಜನಶೀಲತೆ, ಜಾತಿ ಮತ್ತು ಖ್ಯಾತಿ ಇವುಗಳ ಸಂಬಂಧವನ್ನು ಶೋಧಿಸತೊಡಗಿದರು. ಆಗ ಮೂಡಿಬಂದದ್ದು ಮೃದಂಗ ತಯಾರಕರ ಅದ್ಭುತ ಲೋಕ ಕುರಿತ ಕೃತಿ ‘ಸೆಬಾಸ್ಟಿಯನ್ ಅಂಡ್ ಸನ್ಸ್’.
ಮೃದಂಗದ ವಿಕಾಸ, ಬೆಳವಣಿಗೆಗೆ ಮೃದಂಗವಾದಕರು ಕಾರಣವೆಂದು ಅವರಿಗೆ ಮೆಚ್ಚುಗೆ ಸಲ್ಲುತ್ತದೆ. ಆದರೆ ವಾಸ್ತವವಾಗಿ ಮೇಲ್ಜಾತಿಯ ಮೃದಂಗವಾದಕರಿಗೆ ಮೃದಂಗಕ್ಕೆ ಬಳಸುವ ಚರ್ಮ, ಅದರ ತಯಾರಿಕೆ, ಶ್ರುತಿನಿರ್ಧಾರ ಇವುಗಳ ಬಗ್ಗೆ ಅತ್ಯಂತ ಸರಳ ಜ್ಞಾನವೂ ಇರುವುದಿಲ್ಲ. ಮೃದಂಗ ಒಂದು ಸಂಕೀರ್ಣ,ಸುಮಧುರ ಸಂಗೀತವಾದ್ಯವಾಗಿ ವಿಕಾಸಗೊಳ್ಳುವ ಪ್ರಕ್ರಿಯೆಯು ಮೃದಂಗ ತಯಾರಕರ ಹಲವು ತಲೆಮಾರುಗಳ ಚಿಂತನೆ, ಬೌದ್ಧಿಕತೆ, ಕೌಶಲ, ಸೌಂದರ್ಯಪ್ರಜ್ಞೆ, ರಸಪ್ರಜ್ಞೆ ಮತ್ತು ದೈಹಿಕ ಶ್ರಮ ಇವೆಲ್ಲವನ್ನೂ ಒಳಗೊಂಡಿದೆ. ಒಬ್ಬ ಶ್ರೇಷ್ಠ ಮೃದಂಗ ತಯಾರಕನ ಮನಸ್ಸು ಸದಾ ಉತ್ಕೃಷ್ಟತೆಯ ಗೀಳಿನಿಂದ ತೊಯ್ದು ಹೋಗಿರುತ್ತದೆ. ಹೊಸತನ್ನು ಅರಸುತ್ತಿರುತ್ತದೆ. ಹಾಗಿದ್ದಾಗ್ಯೂ ನಾವು ಯಾರೂ ಈ ಕುರಿತು ಮಾತೇ ಆಡುವುದಿಲ್ಲ. ಮೃದಂಗ ತಯಾರಕರು ಅಸ್ತಿತ್ವದಲ್ಲಿಯೇ ಇಲ್ಲ ಎನ್ನುವಂತೆ ಇರುತ್ತೀವಲ್ಲಾ ಏಕೆ’’?
ಇಂತಹ ಪ್ರಶ್ನೆಗಳಿಂದ ಸೃಜನಶೀಲ ಸಂದರ್ಭಗಳಲ್ಲಿ ಜಾತಿ ಕೆಲಸ ಮಾಡುವ ಸೂಕ್ಷ್ಮಕ್ರಮ ಅವರಿಗರಿವಾಯಿತು. ಸಂಗೀತಕ್ಕೆ ಭಾಷೆಯ ಹಂಗಿಲ್ಲ ಎನ್ನುವ ವಿಚಾರವನ್ನೂ ಕೃಷ್ಣ ಪ್ರಶ್ನಿಸಿಕೊಂಡರು. ‘‘ನಾವು ಇಡೀ ಪ್ರಪಂಚವನ್ನು ಅರ್ಥಗಳ ಮೂಲಕವೇ ಗ್ರಹಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಸಂಗೀತದಲ್ಲಿ ಸ್ವಲ್ಪ ಮಟ್ಟಿಗೆ ಮಾತು ಮತ್ತು ಅರ್ಥಕ್ಕೆ ಒಂದು ಸ್ಥಾನವಿದೆ.ಅಲ್ಲಿಯೂ ಅವರು ಬೇರೆ ಹಾದಿಯಲ್ಲಿ ನಡೆದರು. ಅವರು ಆರಿಸಿಕೊಂಡದ್ದು ಪರಿಸರ ಕಾಳಜಿ, ಪ್ರೀತಿಸೂಸುವ ಪೊರಂಬೋಕ್ಕುವಿನಂತಹ ತಮಿಳು ಮತ್ತು ಸಂಸ್ಕ ಮೃತದ ಹಾಡುಗಳು, ಕಲಾವಿದನ ಸೃಜನಶೀಲತೆಯನ್ನು ಕೊಲ್ಲಲೆತ್ನಿಸಿದ ಸಮಾಜದ ವಿರುದ್ಧ ದನಿ ಎತ್ತಿದ ಪೆರುಮಾಳ್ ಮುರುಗನ್ನರ ಕವನಗಳು, ಭಾವೈಕ್ಯ ಪ್ರತಿಪಾದಿಸಿದ ಸೂಫಿಯ ಹಾಡುಗಳು, ಕ್ರಿಸ್ತನ ಗೀತೆಗಳು, ಶರಣರ ವಚನಗಳು. ಸದಾ ಪ್ರಶ್ನಿಸುವ ಮನಸ್ಸಿನ ಪಯಣ ನಿರಂತರ. ಕೃಷ್ಣ ಅವರದ್ದು ಎಂದೆಂದೂ ಮುಗಿಯದ ಪಯಣ.