Mysore
22
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಕಪ್ಪು ಚಿನ್ನಕ್ಕೆ ಕೋಟಿ ಕೋಟಿ ಬೆಲೆ

– ಪ್ರಸಾದ್ ಲಕ್ಕೂರು

ಚಾಮರಾಜನಗರಕ್ಕೂ ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೂ ಏನು ಸಂಬಂಧ? ಎರಡನೇ ಮಹಾಯುದ್ಧದ ನಂತರ ನಡೆದ ಅತಿಭೀಕರ ವೈಮಾನಿಕ ದಾಳಿಯೆಂದರೆ ೨೦೦೧ರಲ್ಲಿ ಸೆಪ್ಟೆಂಬರ್ ೧೧ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾ ನಡೆಸಿದ ದಾಳಿ ! ಆ ದಾಳಿಯಲ್ಲಿ ಮಡಿದ ಅಮೆರಿಕನ್ನರ ಸ್ಮಾರಕಗಳಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಸಿಗುವ ಸಮೃದ್ಧ ಕಪ್ಪು ಚಿನ್ನ ಡಾಲರೈಟ್ ಡೈಕ್ ಬಳಸಲಾಗಿದೆ! ಜಗತ್ತಿನ ಪ್ರಮುಖ ಸ್ಮಾರಕಗಳು, ಮಸೀದಿ, ಚರ್ಚುಗಳು, ಐಷಾರಾಮಿ ಇಮಾರತುಗಳಿಗೂ ಇಲ್ಲಿನ ಕಪ್ಪು ಚಿನ್ನವೇ ಬೇಕು. ಆ ಕಪ್ಪು ಚಿನ್ನವೇ ಡಾಲರೈಟ್ ಡೈಕ್ !

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಪ್ರದೇಶ ವ್ಯಾಪ್ತಿಯಲ್ಲಿ ಹೇರಳವಾಗಿರುವ ಡಾಲರೈಟ್ ಡೈಕ್ ಎಂಬ ಉತ್ಕೃಷ್ಟ ಕಪ್ಪು ಶಿಲೆಗೆ ಜಾಗತಿಕ ಬೇಡಿಕೆ. ಯೂರೋಪ್ ದೇಶಗಳಾದ ಅಮೇರಿಕಾ, ಫ್ರಾನ್ಸ್, ಇಟಲಿ, ಅರಬ್ ರಾಷ್ಟ್ರಗಳಾದ ಈಜಿಪ್ಟ್, ದುಬೈ, ಇಸ್ರೇಲ್, ಏಷ್ಯಾ ರಾಷ್ಟ್ರಗಳಾದ ಚೀನಾ, ಜಪಾನ್‌ಗಳಲ್ಲಿ ಭಾರಿ ಬೇಡಿಕೆಯಿದೆ. ದೀರ್ಘಬಾಳಿಕೆ ಮತ್ತು ಆರೋಗ್ಯಸ್ನೇಹಿ ಎಂಬ ಕಾರಣಕ್ಕಾಗಿ ಸ್ಮಾರಕಗಳು, ಮಸೀದಿಗಳ ನಿರ್ಮಾಣ, ಕಟ್ಟಡಗಳ ಒಳಾಂಗಣ ವಿನ್ಯಾಸಕ್ಕೆ ಹೆಚ್ಚು ಬಳಕೆಯಾಗುತ್ತದೆ.

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ, ಕೊತ್ತಲವಾಡಿ, ಹರವೆ, ಕಗ್ಗಲಿಪುರ, ವೀರನಪುರ, ಹರವೆ, ಮರಿಯಾಲ, ಕಾಡಹಳ್ಳಿ, ಮಸಗಾಪುರಗಳಲ್ಲಿ ಮತ್ತು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮಗಳ ಆಸುಪಾಸಿನ ಭೂಮಿಯಲ್ಲಿ ಕಪ್ಪು ಶಿಲೆ ಹೇರಳವಾಗಿ ಲಭ್ಯವಾಗಿದೆ. ಜಿಲ್ಲೆಯ ೨೧೮ ಎಕರೆ ಪ್ರದೇಶದಲ್ಲಿ ೬೧ ಕಪ್ಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ಪರಿಸರ ಇಲಾಖೆಯಿಂದ ಅನುಮತಿ ಪಡೆದು ಕಪ್ಪು ಕಲ್ಲು ಕಟ್ಟಿಂಗ್ ಮತ್ತು ಪಾಲಿಶಿಂಗ್ ಸಣ್ಣ ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ. ಪಾಲಿಶ್ ಮಾಡಲಾದ ವಿವಿಧ ವಿನ್ಯಾಸದ ಅಲಂಕಾರಿಕ ಕಪ್ಪು ಶಿಲೆಯನ್ನು ಹೊರ ದೇಶಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ ಜಿಎಸ್‌ಟಿ, ಕಸ್ಟಮ್ ಸೆಸ್, ಟಿಸಿಎಸ್ ಮುಂತಾದ ತೆರಿಗೆ ರೂಪದಲ್ಲಿ ಹಾಗೂ ರಾಜಧನವಾಗಿ ಸುಮಾರು ೨೦ ಕೋಟಿ ರೂ. ಸಂದಾಯ ಆಗುತ್ತಿದೆ.

ಜಿಲ್ಲೆಯನ್ನು ಭೌಗೋಳಿಕವಾಗಿ ವಿಶ್ಲೇಷಿಸಿದಾಗ ರೆಸಿಡುಯಲ್ ಹಿಲ್ಸ್, ಪೆಡಿಮೆಂಟ್ಸ್, ಪೆಡಿ ಪ್ಲೆನ್, ಪ್ಲಾಟ್ ಲ್ಯಾಂಡ್ ವ್ಯಾಲಿ ಮತ್ತು ವ್ಯಾಲಿ ಫಿಲ್ ಎಂದು ವಿಂಗಡಿಸಲಾಗಿದೆ. ಜಿಲ್ಲೆಯು ಕಪ್ಪು ಶಿಲೆಯ ಜೊತೆಗೆ ಪೆನನ್ಸುಲರ್ ನೈಸ್, ಚಾರ್ನಕೈಟ್ ಎಂಬ ಬಿಳಿ ಶಿಲೆಯನ್ನು ಸಹ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಇದರಿಂದ ಉತ್ಪಾದಿಸುವ ಜೆಲ್ಲಿ, ಎಂ.ಸ್ಯಾಂಡ್ ಅನ್ನು ಜಿಲ್ಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತಿದೆ. ಈ ಗಣಿಗಾರಿಕೆ/ ಸಾಗಣೆ ಹಾಗೂ ಕೈಗಾರಿಕೆ ಪ್ರದೇಶದಲ್ಲಿ ಜಿಲ್ಲೆ ಸುಮಾರು ೧೦ ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ.

ಪೂರ್ವಿಕರ ಸ್ಮಾರಕವಾಗಿ ಬಳಕೆ:
ಇಟಲಿಯ ವೆರೊನಾ ಪ್ರದೇಶದ ಜನರು ತಮ್ಮ ಪೂರ್ವಿಕರ ಸ್ಮರಣೆಗಾಗಿ ಜಿಲ್ಲೆಯ ಕಪ್ಪು ಕಲ್ಲಿನಿಂದ ಶಿಲಾ ಸ್ಮಾರಕಗಳನ್ನು ಹೆಚ್ಚಾಗಿ ನಿರ್ಮಿಸಿದ್ದಾರೆ.ಅದಕ್ಕಾಗಿಯೇ ಜಿಲ್ಲೆಯ ಕಪ್ಪು ಶಿಲೆಯನ್ನು ಮುಂಗಡವಾಗಿ ಬುಕ್ ಮಾಡುತ್ತಾರೆ.

ನ್ಯಾಚುರಲ್ ಜಿಯೋಲಜಿಕಲ್ ಮ್ಯೂಸಿಯಂ ಸ್ಥಾಪನೆ
ಚಾಮರಾಜನಗರ ತಾಲೂಕಿನ ಗಾಳಿಪುರ ಸರ್ವೆ ಸಂಖ್ಯೆ ೬೫ ರಲ್ಲಿ ವಿವಿಧ ರೀತಿಯ ಖನಿಜಗಳ (ಫೆಲ್ಸೈಟ್, ಗಾರ್ನೆಟ್, ಕ್ವಾರ್ಟ್ಜೈಟ್, ಪೆಗ್ಮಾಟೈಟ್, ಡಾಲರೈಟ್ ಡೈಕ್, ಐರನ್ ಬ್ಯಾಂಡ್, ಅಮ್ಪಿಬೊಲೈಟ್ ಗ್ರೂಪ್ ಆಪ್ ರಾಕ್ಸ್, ಬಯೊಟೈಟ್ ಮಿಕ ಅಂಡ್ ಹಾರನ್ ಬ್ಲೆಂಡ್ ಶಿಲೆಗಳು) ಲಭ್ಯತೆಯನ್ನು ಪರಿಶೀಲಿಸಿ ಈ ಪ್ರದೇಶವನ್ನು ನ್ಯಾಚುರಲ್ ಜಿಯೋಲಜಿಕಲ್ ಮ್ಯೂಸಿಯಂ ಎಂದು ಪರಿಗಣಿಸಿ ಅಭಿವೃದ್ದಿ ಪಡಿಸಲು ಜಿಲ್ಲಾಡಳಿತವು ೩೧ ಎಕರೆ ಪ್ರದೇಶವನ್ನು ಗುರುತಿಸಿ ಅಧಿಸೂಚನೆ ಹೊರಡಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭೂಮಿಯ ಉಗಮದ ಬಗ್ಗೆ ಶಿಲಾ ರಚನೆಗಳ ಬಗ್ಗೆ, ಖನಿಜ ಹಾಗೂ ಉಪ ಖನಿಜಗಳ ಬಗ್ಗೆ ನೈಸರ್ಗಿಕವಾಗಿ ಅಧ್ಯಯಕ್ಕೆ ಅನುಕೂಲವಾಗಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ